Friday, September 20, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ಸಂಸ್ಥೆಗಳ ಬಳಿ ಗಾಂಜಾ ಮಾರಾಟ| ಸೂಕ್ತ ಕ್ರಮಕ್ಕೆ ಡಿಜಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ


  • ರಾಜ್ಯಾದ್ಯಂತ ಮಾದಕವಸ್ತು ಜಾಲ ಹಬ್ಬಿರುವ ಬಗ್ಗೆ ಗಮನ ಸೆಳೆದ ದಿನೇಶ್ ಗೂಳಿಗೌಡ

  • ಶಾಸಕರ ಪತ್ರಕ್ಕೆ ಸ್ಪಂದಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ: ಸಲಹೆ ಪರಿಶೀಲನೆಗೆ ನಿರ್ದೇಶನ

ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ಪದಾರ್ಥಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಸಂಬಂಧ ಶಾಸಕ ದಿನೇಶ್‌ ಗೂಳಿಗೌಡ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ ನೀಡಿ, ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

ಮಾದಕ ವ್ಯಸನಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದ ಶಾಸಕ ದಿನೇಶ್‌ ಗೂಳಿಗೌಡ ಅವರು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಆತಂಕಕಾರಿ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಎಚ್ಚರಿಸಿದ್ದರು. ಗಾಂಜಾ ಮತ್ತು ಮಾದಕವಸ್ತುಗಳ ಹಾವಳಿ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚನೆ ಸೇರಿ ಹಲವು ಕ್ರಮ ಕೈಗೊಳ್ಳಲು ಪತ್ರದಲ್ಲಿ ಮನವಿ ಮಾಡಿದ್ದರು.

ಶಿಕ್ಷಣ ಸಂಸ್ಥೆಗಳ ಸಮೀಪ ಸೇರಿದಂತೆ ರಾಜ್ಯದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಹೆಚ್ಚುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಮಹಾ ನಿರ್ದೇಶಕರು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದು, , ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶನ ನೀಡಿದ್ದಾರೆ.

ಮಕ್ಕಳು ಭವಿಷ್ಯದ ರೂವಾರಿಗಳಾಗಿದ್ದು, ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಸಂಬಂಧ ಕ್ರಮ ವಹಿಸಬೇಕು. ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಶಾಸಕ ದಿನೇಶ್‌ ಗೂಳಿಗೌಡ ಪತ್ರದಲ್ಲೇನಿದೆ?

“ಮಕ್ಕಳು ದೇವರ ರಾಜ್ಯದ ಪ್ರಜೆಗಳು”. ರಾಷ್ಟ್ರಕವಿ ಕುವೆಂಪು ಅವರ ಈ ಮಾತು ಅಕ್ಷರಶಃ ಸತ್ಯ. ಆದರೆ, ಈ ನಾಡಿನಲ್ಲಿ ನಿಜಕ್ಕೂ ಏನಾಗುತ್ತಿದೆ? ಮಕ್ಕಳು ನೀತಿವಂತರಾಗಿ, ಸುಸಂಸ್ಕೃತರಾಗಿ, ದುಶ್ಚಟಗಳಿಲ್ಲದೇ ಕಲಿಕೆ ಮಾಡುತ್ತಿದ್ದಾರೆಯೇ? ಅಂಥದ್ದೊಂದು ಸುಂದರ ಜೀವನ ಅವರದ್ದಾಗಿದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ, ಸಿಗುವ ಉತ್ತರ “ಇಲ್ಲ”. ನಾನಿಂದು ಅತ್ಯಂತ ವಿಷಾದ ಹಾಗೂ ನೋವಿನಿಂದ ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಅದೂ ನೊಂದ ಮಕ್ಕಳ ಹಾಗೂ ಅವರ ಪೋಷಕರ ಪರವಾಗಿ ಸರ್ಕಾರದ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಮಾದಕ ವ್ಯಸನಗಳಿಗೆ ಇಂದು ಅನೇಕ ಮಕ್ಕಳು ಬಲಿಯಾಗುತ್ತಿದ್ದಾರೆ. ಬದುಕನ್ನು ಕಟ್ಟಿಕೊಳ್ಳಬೇಕಾದ ಈ ಸಮಯದಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದನ್ನು ನಾವೀಗ ತಪ್ಪಿಸಬೇಕಿದೆ. ಮಕ್ಕಳಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡಲು ಬಲಿಷ್ಠ ಹಾಗೂ ಬಲಾಢ್ಯ ಕಾನೊನು ರೂಪಿಸಬೇಕಿದೆ.

ಸರ್ಕಾರ ತಗೆದುಕೊಳ್ಳಬಹುದಾದ ಕ್ರಮಗಳು

  • ಜಿಲ್ಲಾ ಮಟ್ಟದಲ್ಲಿ ವಿಶೇಷ ದಳವನ್ನು ರಚಿಸುವುದು. ಆ ದಳಕ್ಕೆ ಮುಕ್ತ ಅಧಿಕಾರ ಮತ್ತು ಬೆಂಬಲ ನೀಡುವುದು
  • ಸಾರ್ವಜನಿಕರ ಸಹಕಾರ ಪಡೆಯಲು ಸಹಾಯವಾಣಿಯನ್ನು ಆರಂಭಿಸುವುದು
  • ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಮನವರಿಕೆ ಮಾಡುವುದು
  • ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡುವುದು
  • ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
  • ಇಂಥ ಜಾಲದ ಬಗ್ಗೆ ಗಮನಕ್ಕೆ ಬಂದರೆ ಶಾಲಾ ಮುಖ್ಯಸ್ಥರು, ಇಲ್ಲವೇ ಪೋಷಕರ ಗಮನಕ್ಕೆ ತರುವಂತೆ ಮನವರಿಕೆ ಮಾಡುವುದು

ಕೂಡಲೇ ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನಿಡಬೇಕೆಂದು ಶಾಸಕ ದಿನೇಶ್ ಗೂಳಿಗೌಡ ಪತ್ರದಲ್ಲಿ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!