Friday, September 20, 2024

ಪ್ರಾಯೋಗಿಕ ಆವೃತ್ತಿ

ಉಡುಪಿ| ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮೀನುಗಾರರಿಂದ ತೀವ್ರ ತರಾಟೆ

ಉಡುಪಿಯ ಮಲ್ಪೆ ಬಂದರನ್ನು ಸಂಪರ್ಕಿಸುವ ಪ್ರಮುಖ ಕರಾವಳಿ ಬೈಪಾಸ್- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮೀನುಗಾರ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕರೆಯಲಾದ ಸಭೆ ಆರಂಭವಾಗುತ್ತಿದ್ದಂತೆ ಹೆದ್ದಾರಿ ನಿರ್ಮಾಣ ವಿಳಂಬ ವಿಷಯವನ್ನು ಪ್ರಸ್ತಾಪಿಸಿದ ಮೀನುಗಾರ ಮುಖಂಡ ಕಿಶೋರ್ ಸುವರ್ಣ, “ಕೋಟ್ಯಾಂತರ ರೂ. ಆದಾಯ ಬರುವ ಮತ್ತು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಕೇಂದ್ರವಾಗಿರುವ ಮಲ್ಪೆ ಬಂದರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸರ್ವೆ, ಅಗಲ, ಉದ್ದ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ” ಎಂದರು.

“ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಕೋಟ್ಯಾಂತರ ರೂ. ಆದಾಯ ಬರುವ ಈ ರಸ್ತೆಗೆ ಸಂಬಂಧಿಸಿ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಹಾಕುವುದರಲ್ಲಿ ಅರ್ಥ ಇದೆಯೇ?” ಎಂದು ಸಚಿವರ ವಿರುದ್ಧ ಕಿಡಿಕಾರಿದರು.

“>

“ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ, ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ? ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಸಂಸದರಾಗಿ ನೀವು ಕರೆದಿಲ್ಲ. ನೀವು ನಮ್ಮ ಜನಪ್ರತಿನಿಧಿ ಅಲ್ಲವೇ? ನಿಮಗೆ ಕರ್ತವ್ಯ ಇಲ್ಲವೇ? ಜನರನ್ನು ಯಾಕೆ ನೀವು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ, “ನೀವು Too Much ಮಾತನಾಡಬೇಡಿ, ವೈಯಕ್ತಿಕ ಸಮಸ್ಯೆ ಹೇಳಬೇಡಿ” ಎಂದರು. ಇದರಿಂದ ಮತ್ತಷ್ಟು ಕೆರಳಿದ ಕಿಶೋರ್ ಅವರು, “ನಾನು ಜನರಿಗಾಗಿರುವ ಸಮಸ್ಯೆ ಹೇಳಿದರೆ, ಅದರಲ್ಲಿ ವೈಯಕ್ತಿಕ ಏನು? ಇಲ್ಲಿ ಕುಳಿತಿರುವವರು ಎಲ್ಲರೂ ಸಾಕ್ಷಿ ಇದ್ದಾರೆ ನಾನು ವೈಯುಕ್ತಿಕ ವಿಚಾರ ಮಾತನಾಡಿಲ್ಲ ಎಂದರು. ಈ ನಡುವೆ ವಾಗ್ವಾದ ಜೋರಾಗಿದ್ದರಿಂದ ಮೀನುಗಾರ ಮುಖಂಡನನ್ನು ಪೊಲೀಸರು ಸಮಾಧಾನಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮೀನುಗಾರ ಮುಖಂಡರ ನಡುವೆ ವಾಗ್ವಾದ ನಡೆಯುತ್ತಿದ್ದಾಗ ಉಡುಪಿಯ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಕೂಡ ಸಭೆಯಲ್ಲಿದ್ದರು. ಅವರು ಯಾವುದೇ ಉತ್ತರವಿಲ್ಲದೆ ಮೌನಕ್ಕೆ ಜಾರಿದ್ದರು. ಒಂದು ಭಾರೀ ಕಿಶೋರ್ ಅವರನ್ನು ಸಮಾಧಾನಪಡಿಸಲು ಯಶ್ಪಾಲ್ ಸುವರ್ಣ ಯತ್ನಿಸಿದರೂ, ಕಿಶೋರ್ ಅವರ ನ್ಯಾಯಯುತ ಪ್ರಶ್ನೆಗಳ ಮುಂದೆ ಅವರಿಗೆ ಉತ್ತರವಿರಲಿಲ್ಲ.

ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರದ ಅಭಿವೃದ್ದಿಯ ಕಾಳಜಿ ವಹಿಸುತ್ತಿಲ್ಲ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ಉಡುಪಿಯ ಜನರೇ ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಸದರನ್ನು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಿಶೋರ್ ಸುವರ್ಣ ಅವರನ್ನು ಕೊಂಡಾಡಿದ್ದು, ನಮ್ಮ ಜನ ಪ್ರತಿನಿಧಿಗಳನ್ನು ಈ ರೀತಿ ಪ್ರಶ್ನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!