Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಭ್ರಮದಿಂದ ನಡೆದ ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಅಕ್ಕಿಹೆಬ್ಬಾಳು ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯವರ ಬ್ರಹ್ಮ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.

ಶ್ರೀ ಗೌತಮ ಮಹರ್ಷಿಗಳ ತಪೋಭೂಮಿಯಾಗಿರುವ ಅಕ್ಕಿಹೆಬ್ಬಾಳು ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವವು ಇಂದು ಮಧ್ಯಾಹ್ನ ಗರುಡ ಪಕ್ಷಿಯು ಆಗಸದಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿ ಭಕ್ತಿ ನಮನವನ್ನು ಸಲ್ಲಿಸಿದ ನಂತರ ಶ್ರದ್ಧಾ ಭಕ್ತಿಯಿಂದ ಜರುಗಿತು. ಉಘೇ ನರಸಿಂಹ, ಉಘೇ ಗೋವಿಂದ, ಉಘೇ ವೆಂಕಟರಮಣ ಎಂಬ ಜಯ ಘೋಷಗಳು ಮುಗಿಲು ಮುಟ್ಟಿದವು.

ಕೆ.ಆರ್.ಪೇಟೆ ಶಾಸಕ ಎಚ್.ಟಿ ಮಂಜು ಹಾಗೂ ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ನಿಸರ್ಗಪ್ರಿಯ ಅವರು ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಉತ್ಸವಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶಾಸಕ ಮಂಜು ನೆರೆದಿದ್ದ ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡಿ, ರಥೋತ್ಸವಗಳು ಹಾಗೂ ಜಾತ್ರಾ ಮಹೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ರಥೋತ್ಸವದ ಸಂಭ್ರಮದಲ್ಲಿ ಜಾತಿ ಮತಗಳಿಂದ ಮುಕ್ತರಾಗಿ ಎಲ್ಲರೂ ಒಂದಾಗಿ ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವಂತ ಸಮ ಸಮಾಜದ ನಿರ್ಮಾಣಕ್ಕೆ ವೇದಿಕೆ ನಿರ್ಮಾಣ ಮಾಡಿದಂತಾಗುತ್ತದೆ. ಇಂದಿನ ರಥೋತ್ಸವ ಸಂಭ್ರಮದಲ್ಲಿ ವಿಶೇಷವಾಗಿ ವಿಪ್ರ ಬಾಂಧವರು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಸಾವಿರಾರು ಭಕ್ತಾದಿಗಳು ರಥೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಹೇಳಿದರು.

ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ, ಸಮಾಜ ಸೇವಕ ಮಲ್ಲಿಕಾರ್ಜುನ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ. ನಾಗೇಂದ್ರಕುಮಾರ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಜೆ. ದಿವಾಕರ್, ಅಕ್ಕಿಹೆಬ್ಬಾಳು ರಘು, ವಾಸು ರಾಜೇಗೌಡ, ಕೋಟಿ ಸುಬ್ಬಣ್ಣ, ಮಹೇಶ ನಾಯಕ, ಆಲಂಬಾಡಿಕಾವಲು ನರೇಂದ್ರನಾಯಕ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ ಕಾರಂತ್ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!