Friday, September 20, 2024

ಪ್ರಾಯೋಗಿಕ ಆವೃತ್ತಿ

ಗುರಿ ಇಟ್ಟುಕೊಂಡು ಸಾಧನೆ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ: ಡಾ.ಕುಮಾರ

ಕೀಳರಿಮೆ,ನಕಾರಾತ್ಮಕ ಚಿಂತನೆಯಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ಇಟ್ಟುಕೊಂಡು ಸಾಧನೆ ಮಾಡಿದಾಗ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಮಂಡ್ಯದ ಕೃಷಿಕ್ ಸರ್ವೋದಯ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕೆಎಎಸ್ ಮತ್ತು ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರಿ ಎಷ್ಟು ಮುಖ್ಯವೋ ದಾರಿಯೂ ಅಷ್ಟೇ ಮುಖ್ಯ. ಒಳ್ಳೆಯ ಸಮಯದಲ್ಲಿ ಒಳ್ಳೆಯ ಗುರಿ ಹಾಕಿಕೊಳ್ಳಬೇಕು. ಐಎಎಸ್, ಕೆಎಎಸ್ ಮಾಡುತ್ತೇನೆಂಬ ಗುರಿ ಹೊಂದಿದ್ದರೆ ಮಾತ್ರ ಅದನ್ನು ಸುಲಭವಾಗಿ ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಏನನ್ನೂ ಮಾಡಲಾಗದು ಎಂದು ಹೇಳಿದರು.

ನಾನೂ ಕೂಡ ಆಂಗ್ಲ ಮಾಧ್ಯಮದಲ್ಲಿ ಓದಿದವನಲ್ಲ. ಸರ್ಕಾರಿ ಶಾಲೆ, ಕಾಲೇಜುಗಳಲ್ಲೇ ಓದಿದ್ದು, ಇಡೀ ಜೀವನವನ್ನು ಬಿಸಿಎಂ ಹಾಸ್ಟೆಲ್‌ನಲ್ಲೇ ಕಳೆದಿದ್ದೇನೆ. ಸಾಧನೆಗೆ ಬಡತನ ಅಡ್ಡಿಯಲ್ಲ. ಬಡವರಾಗಿ ಹುಟ್ಟಿದ್ದರೆ ಬದುಕಿನ ಬಗ್ಗೆ ಛಲ, ಸಾಧನೆ ಬರುತ್ತದೆ ಎಂದು ಹೇಳಿದರು.

ಬಡವರಾಗಿ ಹುಟ್ಟಿರುವುದು ತಪ್ಪಲ್ಲ, ಬಡವರಾಗಿ ಬದುಕುವುದು ಸರಿಯಲ್ಲ. ಸಾಧನೆ ಮಾಡಿ ಮೇಲೆ ಬರಬೇಕು. ನಿಮ್ಮೊಳಗೆ ಯಾವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಳ್ಳಬೇಕು ಎಂದರೆ ಅದು ಬಡವರಾಗಿ ಹುಟ್ಟಿದರೆ ಮಾತ್ರ ಸಾಧ್ಯ. ಬಡವರಾಗಿ ಹುಟ್ಟಿದವರು ನಿಜವಾಗಲೂ ತಮ್ಮ ಶಕ್ತಿ ಏನೆಂಬುದನ್ನು ತೋರಿಸುವಷ್ಟು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.

ಕಾಲ ಎಲ್ಲದ್ದಕ್ಕೂ ಕಾಯುವುದಿಲ್ಲ. ಕಾಲಕ್ಕೆ ತಕ್ಕಂತೆ ನಾವು ಸಾಗಬೇಕು. ಅದಕ್ಕೆ ಸರಿಯಾದ ದಾರಿಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಕೆಟ್ಟ ದಾರಿಯಲ್ಲಿ ಹೋಗಬೇಕೆಂದಾದರೆ ಅದಕ್ಕೆ ನೂರು ದಾರಿಗಳಿರುತ್ತವೆ. ಒಂದೇ ಒಂದು ಮಾತ್ರ ಒಳ್ಳೆಯ ದಾರಿ ಇರುತ್ತದೆ. ಅದರಲ್ಲಿ ಸಾಗಿ ಮತ್ತೆ ವಾಪಸ್ಸು ಬರುವುದು ಸರಿಯಲ್ಲ. ಅದೇ ರೀತಿ ಕೆಟ್ಟ ದಾರಿಯಲ್ಲಿ ಸಾಗಿ ನಂತರ ವಾಪಸ್ಸು ಬಂದು ಒಳ್ಳೆಯ ದಾರಿ ಹಿಡಿಯುತ್ತೇನೆಂದರೆ ಅಷ್ಟರಲ್ಲಾಗಲೇ ಸಮಯ ವ್ಯರ್ಥವಾಗಿರುತ್ತದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು.

ಸಮಾಜದಲ್ಲಿ ಸಾಧನೆ ಮಾಡಿರುವವರನ್ನು ಆದರ್ಶ ವ್ಯಕ್ತಿಗಳನ್ನಾಗಿಟ್ಟುಕೊಳ್ಳುವುದರ ಜೊತೆಗೆ ನಮ್ಮ ತಂದೆ-ತಾಯಿಯರನ್ನೂ ಆದರ್ಶರಾಗಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು. ಆಗ ನಮಗೆ ಸುಲಭವಾಗಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ. ತಿಮ್ಮೇಗೌಡ, ಜಂಟಿ ಕಾರ್ಯದರ್ಶಿ ಡಾ.ಎಸ್.ಟಿ. ರಾಮಚಂದ್ರು, ಖಜಾಂಚಿ ಡಾ. ಕೆ.ಬಿ. ಬೋರಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಹೇಮಚಂದ್ರ, ಎಚ್.ಡಿ. ವಿಶ್ವನಾಥ್, ಮುಖ್ಯ ಸಂಚಾಲಕರುಗಳಾದ ಎಸ್.ಲೋಕೇಶ್, ಸಿ.ಎಲ್. ನಂಜರಾಜು, ವ್ಯವಸ್ಥಾಪಕರಾದ ಲಕ್ಷ್ಮಣ್, ಸಹಾಯಕ ವ್ಯವಸ್ಥಾಪಕ ಶಿವಲಿಂಗಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!