Saturday, May 18, 2024

ಪ್ರಾಯೋಗಿಕ ಆವೃತ್ತಿ

ಸನಾತನ ಧರ್ಮ: ಉದಯ ನಿಧಿ ಸ್ಟಾಲಿನ್ – ಮಾಧ್ಯಮ ಮತ್ತು ಸಂಘಟನೆಗಳು-ನಮ್ಮಲ್ಲೆರ ಪ್ರತಿಕ್ರಿಯೆಗಳು….

ವಿವೇಕಾನಂದ ಎಚ್.ಕೆ.

ಮೊದಲಿಗೆ ಎಲ್ಲರಿಗೂ ಬೇಕಾಗಿರುವುದು ಪ್ರಬುದ್ದತೆ ಎಂಬ ಸಂಯಮ. ನಾವು ಭಾರತವೆಂಬ ಸಂಸದೀಯ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಪಡೆದ ವಿಶ್ವದ ಅತ್ಯಂತ ಪ್ರಬಲ ಒಕ್ಕೂಟ ವ್ಯವಸ್ಥೆಯ ಪ್ರಜೆಗಳು. ಶೇಕಡಾ 80% ರಷ್ಟು ಹಿಂದೂ ಜೀವನ ಶೈಲಿಯ ಆದರೆ ಜಾತ್ಯಾತೀತ, ಧರ್ಮ ನಿರಪೇಕ್ಷ ಸಂವಿಧಾನದ ಅನೇಕ ಜಾತಿ ಧರ್ಮ ವರ್ಗ ಕುಲ ಸಂಸ್ಕೃತಿಗಳನ್ನು ಹೊಂದಿರುವ ವ್ಯವಸ್ಥೆಯ ಭಾಗ ಎನ್ನುವುದನ್ನು ಮರೆಯಬಾರದು……

ಯಾರೋ ಒಬ್ಬ ವ್ಯಕ್ತಿ ತನ್ನ ಒಂದು ಅಭಿಪ್ರಾಯ ಹೇಳಿದ ತಕ್ಷಣ ಮುಗಿಬಿದ್ದು ತೀವ್ರವಾಗಿ ಪರ ವಿರೋಧ ಪ್ರತಿಕ್ರಿಯಿಸಿದರೆ ಘರ್ಷಣೆಯಾಗುವುದು ನಮ್ಮೊಳಗೇ. ಇದನ್ನು ಇಡೀ ವಿಶ್ವ ಗಮನಿಸುತ್ತಿರುತ್ತದೆ ಎಂಬುದನ್ನು ಮರೆಯದಿರಿ. ನಮ್ಮೊಳಗಿನ ತೀವ್ರ ಭಿನ್ನಾಭಿಪ್ರಾಯ ಮೂರನೇ ಶಕ್ತಿಗೆ ಲಾಭವಾಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು ಎಂಬುದನ್ನು ನೆನಪಿಸುತ್ತಾ……

“ಸನಾತನ ಧರ್ಮ ಒಂದು ರೋಗವಿದ್ದಂತೆ ಅದನ್ನು ವಿರೋಧಿಸುವುದಕ್ಕಿಂತ ನಾಶಪಡಿಸುವುದೇ ಪರಿಹಾರ “ ಎಂಬ ಅರ್ಥದ ಮಾತುಗಳನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಮೊಮ್ಮಗ, ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ, ಈಗಿನ ಸರ್ಕಾರದ ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿದ್ದಾರೆ. ಇವರು ಸುಮಾರು 45 ವರ್ಷದ ವಾಣಿಜ್ಯ ಪದವೀಧರರು….

ಭಾರತವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸಿ ನೋಡಿದಾಗ ದೆಹಲಿ ಉತ್ತರದ ಪ್ರಾತಿನಿಧಿಕ ಪ್ರದೇಶವಾದರೆ, ಚೆನೈ ದಕ್ಷಿಣದ ಪ್ರಾತಿನಿಧಿಕ ಪ್ರದೇಶ. ಉತ್ತರ ಆರ್ಯ ಸಂಸ್ಕೃತಿಯ ಪ್ರತಿರೂಪವಾದರೆ ದಕ್ಷಿಣ ದ್ರಾವಿಡ ಸಂಸ್ಕೃತಿಯ ಪರಂಪರೆ ಹೊಂದಿದೆ. ಒಟ್ಟಾರೆ ದೇಶದಲ್ಲಿ ಹಿಂದೂ ಜೀವನ ವಿಧಾನವೇ ಪ್ರಧಾನವಾಗಿದೆ….

ಉದಯ ನಿಧಿ ಹೇಳಿರುವ ಮಾತುಗಳು ‌ಹೊಸದೇನು ಅಲ್ಲ. ಸನಾತನ ಧರ್ಮದ ಅಸಮಾನತೆ ಮತ್ತು ಪುರೋಹಿತ ಶಾಹಿಯ ಅಥವಾ ಬ್ರಾಹ್ಮಣ್ಯದ ( ಅಸಮಾನತೆಯ ) ವಿರುದ್ಧದ ಚಿಂತನೆಗಳು, ಬಂಡಾಯಗಳು, ಚಳವಳಿಗಳು, ಚರ್ಚೆಗಳು ಶತಶತಮಾನಗಳಿಂದ ನಡೆಯುತ್ತಲೇ ಬಂದಿದೆ. ಬುದ್ದ ಮಹಾವೀರ ಬಸವ ಗುರುನಾನಕ್ ವಿವೇಕಾನಂದ ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದವರು ಮತ್ತೆ ಮತ್ತೆ ಜಾತಿ ಶ್ರೇಷ್ಠತೆಯ ವ್ಯಸನದ ವಿರುದ್ಧ ತೀವ್ರ ದಾಳಿ ಮಾಡುತ್ತಾ ಹೊಸ ಹೊಸ ವಿಚಾರಗಳನ್ನು, ಆಚಾರಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಅತ್ಯಂತ ತೀಕ್ಷ್ಣವಾಗಿ ಪುರೋಹಿತ ಶಾಹಿಯ ವಿರುದ್ಧ ಮಾತನಾಡಿದವರು ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿಯವರು. ದೇವರು ಧರ್ಮ ಮತ್ತು ಮೌಡ್ಯದ ಬಗ್ಗೆ ಕಟು ಮಾತುಗಳಲ್ಲಿ ನಿಂದಿಸಿದ್ದಾರೆ.‌ ಅದರ ಮುಂದುವರಿದ ಒಂದು ಸಣ್ಣ ಭಾಗ ಮಾತ್ರ ಉದಯ ನಿಧಿ ಹೇಳಿದ್ದಾರೆ.‌ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಮುಂದಿನ ಚುನಾವಣೆಯ ಕಾರಣದಿಂದ ರಾಜಕಾರಣಿಗಳು ಈ ಬಗ್ಗೆ ವಾದ ವಿವಾದ ಮಾಡಿದ್ದರಿಂದಾಗಿ ಇದು ದೇಶದ ಜನರ ಗಮನ ಸೆಳೆದಿದೆ……

ಮೊದಲನೆಯದಾಗಿ ನಾವುಗಳು ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ, ಬಹುಶಃ ಯಾವುದೇ ರಾಜಕಾರಣಿಗಳು, ಧರ್ಮಾಧಿಕಾರಿಗಳು, ಪತ್ರಕರ್ತರು, ಜನ ಸಾಮಾನ್ಯರಾದ ನಾವು ಸೇರಿ ಈ ವಿಷಯದಲ್ಲಿ ಅಧಿಕೃತವಾಗಿ ಮಾತನಾಡುವ ಅರ್ಹತೆ ಹೊಂದಿಲ್ಲ. ಕೇವಲ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದಷ್ಟೇ. ಇದೊಂದು ಬೃಹತ್ ಅಧ್ಯಯನ ಚಿಂತನೆ ಜ್ಞಾನ ಬಯಸುವ ವಿಷಯ. ಭಾರತ ಎಂಬ ಭೂ ಪ್ರದೇಶದ ಕಣಕಣದ ಪರಿಚಯವೂ ಬೇಕಾಗುತ್ತದೆ. ಪ್ರಾಕೃತಿಕ ನಿಯಮಗಳ ಅರಿವೂ ಇರಬೇಕಾಗುತ್ತದೆ. ನಾಗರಿಕ ಸಮಾಜದ ಗುಣಲಕ್ಷಣಗಳು ಅತ್ಯಂತ ಮುಖ್ಯವಾಗುತ್ತದೆ. ಕೇವಲ ಧಾರ್ಮಿಕ ನಂಬಿಕೆಗಳು ಮತ್ತು ಸಂವಿಧಾನ ಅಡಿಯಲ್ಲಿ ಮಾತ್ರ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಾಕಾಗುವುದಿಲ್ಲ…..

ಪರಿಸ್ಥಿತಿ ಏನೇ ಇರಲಿ, ಕಾರಣ ಏನೇ ಇರಲಿ 2023 ಈ ಸಂದರ್ಭದಲ್ಲಿ ಭಾರತದ ಪೌರತ್ವ ಪಡೆದ ಎಲ್ಲರೂ ಭಾರತೀಯ ಪ್ರಜೆಗಳು. ಸಂವಿಧಾನಾತ್ಮಕವಾಗಿ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವವರು. ಆ ದೃಷ್ಟಿಯಿಂದ ಆಚರಣೆಯಲ್ಲಿ ಜಾತಿಯ ಕಾರಣಕ್ಕಾಗಿ ಯಾವುದೇ ತಾರತಮ್ಯ ತೋರಿದರೆ ಅದನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆ ಹಿನ್ನೆಲೆಯಲ್ಲಿ ಮೇಲು ಕೀಳಿನ ತಾರತಮ್ಯ ನಾಶ ಮಾಡಬೇಕು ಎಂದಾದಲ್ಲಿ ಉದಯ ನಿಧಿ ಅವರ ಅಭಿಪ್ರಾಯ ಒಪ್ಪಬಹುದು. ಒಂದು ವೇಳೆ ಅವರು ಒಂದು ಧರ್ಮ ಅಥವಾ ಜನಾಂಗ ಅಥವಾ ಸಮುದಾಯವನ್ನು ನಾಶ ಪಡಿಸಬೇಕು ಎಂದಾದಲ್ಲಿ ಅದು ಹಿಂಸೆಯಾಗುತ್ತದೆ ಮತ್ತು ಆ ಮೂಲಕ ಅಪರಾಧವಾಗುತ್ತದೆ. ಇದರ ಸ್ಪಷ್ಟ ತಿಳಿವಳಿಕೆ ಎಲ್ಲರಿಗೂ ಇರಬೇಕು. ಏಕೆಂದರೆ ಹಿಂದೆ ಮತ್ತು ಈಗಲೂ ಅನೇಕ ಕಾರಣಗಳಿಗಾಗಿ ಜಾತಿ ಮತ್ತು ಜನಾಂಗೀಯ ಹಿಂಸೆಗಳು ನಡೆಯುತ್ತಲೇ ಇವೆ. ಅಸ್ಪೃಶ್ಯತೆಯ ಆಚರಣೆಗಳು ಸಹ ಈಗಲೂ ಜೀವಂತವಿದೆ. ಆದರೆ ಅದಕ್ಕೆ ಹಿಂಸೆ ಪರಿಹಾರವಲ್ಲ……

ಎರಡನೆಯದಾಗಿ,
ಏಕೆ ಹೀಗೆ ಸನಾತನ ಧರ್ಮದ ವಿರುದ್ಧ ಹೇಳಿಕೆಗಳು ಬರುತ್ತವೆ ಮತ್ತು ಅದರ ಮೂಲ ಕಾರಣವೇನು ಎಂಬುದನ್ನು ಸಹ ಯೋಚಿಸಬೇಕು. ಉದಯ ನಿಧಿಯೇನು ಪಾಕಿಸ್ತಾನ ಅಥವಾ ಚೀನಾದವರಲ್ಲ. ನಮ್ಮದೇ ದೇಶದವರು. ಅವರಿಗೂ ಏನೋ ನೋವಿನ ಅನುಭವ ಆಗಿರಬೇಕು. ಈಗ ನಾವು ಮಾಡಬೇಕಾಗಿರುವುದು ಉದಯ ನಿಧಿಯ ಟೀಕೆಯಲ್ಲ. ಆಧುನಿಕತೆಯ ಬೆಳಕಲ್ಲಿ ನಮ್ಮೊಳಗಿನ ಕತ್ತಲೆಯನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ಸತ್ಯ ಮತ್ತು ವಾಸ್ತವದ ವಿಮರ್ಶೆ ಮಾಡಿಕೊಳ್ಳಬೇಕು. ಸತ್ವಯುತವಾದ ಸಿದ್ದಾಂತಗಳು ನಮ್ಮಲ್ಲಿ ಅಡಕವಾಗಿದ್ದಲ್ಲಿ ಯಾರಿಂದಲೂ ಯಾರನ್ನು ನಾಶ ಮಾಡಲು ಸಾಧ್ಯವಿಲ್ಲ. ಅದಕ್ಕೆ ಜನ ಬೆಂಬಲವೂ ಸಿಗುವುದಿಲ್ಲ…..

ಮೂರನೆಯದಾಗಿ,
ಭಾರತಕ್ಕೆ ಜಾತಿ ವ್ಯವಸ್ಥೆ ಒಂದು ದೊಡ್ಡ ಶಾಪ ಎಂದು ಎಲ್ಲ ಕಾಲಕ್ಕೂ ಹೇಳುತ್ತಲೇ ಇದ್ದಾರೆ. ಹಿಂದುತ್ವದ ಸಾಮಾಜಿಕ ಲಾಭ ಮೇಲ್ವರ್ಗದವರಿಗೆ ಸಿಗುತ್ತಿದೆ. ಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಕೆಳ ವರ್ಗದ ಜನ ಸಹಜವಾಗಿಯೇ ಅದರ ಬಗ್ಗೆ ಅತೃಪ್ತಿ ಹೊಂದಿರುತ್ತಾರೆ. ಪ್ರಗತಿಪರ ವಿಚಾರಧಾರೆ ಜನರು ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಆಗ ಮತ್ತೆ ಈ ರೀತಿಯ ಘರ್ಷಣೆ ಸಂಭವಿಸುತ್ತಲೇ ಇರುತ್ತದೆ. ಇದಕ್ಕಿರುವ ಪರಿಹಾರ ಎಲ್ಲರೂ ಸಾಧ್ಯವಾದಷ್ಟು ಜಾತಿ ಪದ್ದತಿಯ ನಿರ್ಮೂಲನೆಗೆ ಪಣ ತೊಡಬೇಕು……….

ನಾಲ್ಕನೆಯದಾಗಿ ,
ನೀವು ಈ‌ ದೇಶದ ಸಮಗ್ರತೆಯನ್ನು ಬಯಸುವುದಾದಾರೆ ಮುಕ್ತವಾಗಿ ಕೆಲವು ವಿಷಯಗಳನ್ನು ಚರ್ಚಿಸಬೇಕು. ಈ ದೇಶದಲ್ಲಿ ದೇವರು ಧರ್ಮ ಆಚಾರ ಸಂಪ್ರದಾಯಗಳ ವಿಷಯ ಬಂದಾಗ ಅಂಬೇಡ್ಕರ್ ವಾದಿಗಳು, ಬಸವತತ್ವ ಅನುಯಾಯಿಗಳು, ಸಮಾಜವಾದಿಗಳು, ಅನೇಕ ಹಿಂದುಳಿದ ವರ್ಗಗಳು ಸಾಮಾನ್ಯವಾಗಿ ಅದನ್ನು ವಿರೋಧಿಸುವುದು, ಹಾಗೆಯೇ ಸಂಘ ಪರಿವಾರ ಮತ್ತು ಮೇಲ್ವರ್ಗದವರು ಅದನ್ನು ಬೆಂಬಲಿಸಲು ಇರಬಹುದಾದ ಕಾರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಆಗ ವಾಸ್ತವದ ಅರಿವಾಗುತ್ತದೆ. ಪರ – ವಿರೋಧದ ಎರಡು ಮನಸ್ಸುಗಳನ್ನು ನಾವು ಪ್ರವೇಶಿಸಬೇಕು. ಇಲ್ಲದಿದ್ದರೆ ಒಂದು ಮುಖ ಮಾತ್ರ ಕಾಣಿಸಿ ನಾವು ಕೂಪ ಮಂಡೂಕಗಳಂತೆ ಆಗುತ್ತೇವೆ. ನಮ್ಮದೇ ಸರಿ ಎಂಬ ಸಂಕುಚಿತತೆಗೆ ಬಲಿಯಾಗುತ್ತೇವೆ. ಎಲ್ಲೋ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ನ್ಯೂನತೆ ಇದೆ ಎಂಬುದನ್ನು ಅರಿಯಬೇಕು……..

ಕೊನೆಯದಾಗಿ,
ಮೊದಲು ಹೇಳಿದಂತೆ ನಾವು ಸಂಯಮ ಪಾಲಿಸದಿದ್ದರೆ ಆರ್ಯ – ದ್ರಾವಿಡ, ರಾಮ – ಆಂಜನೇಯ, ಹಿಂದಿ – ಪ್ರಾದೇಶಿಕ ಭಾಷೆ, ಮಾಂಸಾಹಾರ – ಸಸ್ಯಾಹಾರ, ನೀಟ್ ಪರೀಕ್ಷೆಗಳು ಹೀಗೆ ವಿಭಿನ್ನ ವಿಷಯಗಳು ನಿಧಾನವಾಗಿ ಆಳವಾಗಿ ಬೇರೂರುತ್ತಾ ದೇಶದ ವಿಭಜಕ ಮೊಳಕೆಗಳು ಟಿಸಿಲೊಡೆಯಬಹುದು. ನಾವು ಉಡಾಫೆಯಾಗಿ ಪ್ರತಿಕ್ರಿಯಿಸದೆ ಹೆಚ್ಚು ಜವಾಬ್ದಾರಿಯಿಂದ ಮುನ್ನಡೆಯಬೇಕು. ಈ ದೇಶ ಒಂದು ರಾಜ್ಯದ, ಒಂದು ಪಕ್ಷದ, ಒಂದು ಸೈದ್ದಾಂತಿಕ ಹಿನ್ನೆಲೆಯ ಆಸ್ತಿಯಲ್ಲ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಆಸ್ತಿ. ಅದನ್ನು ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ತಾಳ್ಮೆಯಿಂದ ಜೋಪಾನ ಮಾಡಬೇಕು. ಪ್ರಬುದ್ದತೆ ಪ್ರದರ್ಶಿಸಬೇಕು. ಮಧ್ಯಪ್ರಾಚ್ಯದ ದೇಶಗಳಂತೆ ಹಿಂಸಾತ್ಮಕ ವಾತಾವರಣ ನಿರ್ಮಾಣ ಮಾಡಬಾರದು….

ಮತ್ತೆ ಹೇಳುತ್ತೇನೆ, ವಿಷಯ ಏನೇ ಇರಲಿ, ಸಂಯಮ ಮುಖ್ಯ. ಇಲ್ಲದಿದ್ದರೆ ಇಡೀ ದೇಶ ಸೈದ್ದಾಂತಿಕ ಸಂಘರ್ಷದಲ್ಲಿ ಬೀದಿ ಜಗಳಗಳ ಅಖಾಡವಾಗಿ ದೇಶದ ಘನತೆ ನಾಶವಾಗುತ್ತದೆ. ಅದಕ್ಕೆ ಹೊಣೆ ನಾವು ಮಾತ್ರ. ಎಚ್ಚರ……….

ಎಲ್ಲಾ ರೀತಿಯ ಮಾಧ್ಯಮಗಳು ಇರುವುದು ಅರಿವಿನ ಹೆಚ್ಚಳಕ್ಕಾಗಿಯೇ ಹೊರತು ಪ್ರಚೋದನಾಕಾರಿ ಹೇಳಿಕೆಗಳಿಂದ ಬೆಂಕಿ ಹಚ್ಚಲು ಅಲ್ಲ. ದೇಶವನ್ನು ನಾವೆಲ್ಲರೂ ಸೇರಿ ಮತ್ತೆ ಸರಿ ದಾರಿಗೆ ತರೋಣ. ಎಲ್ಲರನ್ನೂ ಕೈ ಮುಗಿದು ಬೇಡಿಕೊಳ್ಳುತ್ತೇನೆ.
ಧನ್ಯವಾದಗಳು……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!