Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಸಾಪ್ಟ್ ವೇರ್ ಹಬ್ ನಿರ್ಮಾಣಕ್ಕೆ ಚಿಂತನೆ- ರವಿಕುಮಾರ್

ರಾಜ್ಯ ರಾಜಧಾನಿ ಬೆಂಗಳೂರು ನಗರದ ಜನದಟ್ಟಣೆ ಹಾಗೂ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಹಾಗೂ ಜಿಲ್ಲೆಯ ಗ್ರಾಮೀಣ ನಿರುದ್ಯೋಗಿಗಳಿಗೆ ವರದಾನವಾಗುವ ‘ಸಾಪ್ಟ್ ವೇರ್ ಹಬ್’ ಅನ್ನು ಜಿಲ್ಲಾ ಕೇಂದ್ರದಲ್ಲಿ  ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಈ ಕಾರ್ಯಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವುದಾಗಿ ಶಾಸಕ ಪಿ.ರವಿಕುಮಾರ್ ಗೌಡ ಇಂಗಿತ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಬೂದನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆ ನೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಪ್ರಸ್ತುತ ರೋಗಗ್ರಸ್ಥವಾಗಿರುವ ಕಾರ್ಖಾನೆಯನ್ನು ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ಸಾತನೂರು ಫಾರಂ ಬಳಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿರುವುದು ಸಮಯೋಚಿತವಾಗಿದೆ ಎಂದರು.

ಪ್ರಸ್ತುತ ಮೈಷುಗರ್ ಕಾರ್ಖಾನೆ ನಗರದ ಜನ ವಸತಿ ಪ್ರದೇಶದಲ್ಲಿದ್ದು, ಭವಿಷ್ಯದ 50 ವರ್ಷಗಳ ಮುನ್ನೋಟ ಅವಲಂಬಿಸಿ ಕಾರ್ಖಾನೆಯನ್ನು ಸಾತನೂರು ಫಾರಂ ಬಳಿ ನೂತನವಾಗಿ ನಿರ್ಮಿಸಿ ಮೈಷುಗರ್ ಕಾರ್ಖಾನೆಯ ಹಾಲಿ ಕಟ್ಟಡವನ್ನು ಸಾಪ್ಟ್ ವೇರ್ ಪಾರ್ಕ್ ಆಗಿ ಪರಿವರ್ತಿಸಿ ಬಾಡಿಗೆ ಆಧಾರದ ಮೇಲೆ ಸಾಪ್ಟ್ ವೇರ್ ಕಂಪನಿಗಳಿಗೆ ವರ್ಗಾಯಿಸಿ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಚಿಂತನೆ ನನ್ನದಾಗಿದೆ ಎಂದರು.

ದೇಶದ್ರೋಹಿಗಳಿಗೆ ಶಿಕ್ಷೆ

ನಮ್ಮ ಶತ್ರು ರಾಷ್ಟ್ರ ಪಾಕಿಸ್ಥಾನದ ಬಗ್ಗೆ ನಮ್ಮ ದೇಶದ ನೆಲದಲ್ಲಿ ನಿಂತು ಜಿಂದಾಬಾದ್ ಘೋಷಣೆ ಕೂಗುವ ದೇಶ ದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಂತಹ ಘಟನೆ ವಿಧಾನಸೌಧ ಅಥವಾ ಮಂಡ್ಯನಗರದಲ್ಲೇ ಈ ಹಿಂದೆ ನಡೆದಿರುವ ಘಟನೆಯಾದರೂ ಸರಿ ಸೂಕ್ತ ತನಿಖೆಯಾಗಿ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಅಭಿಪ್ರಾಯಿಸಿದರು.

ಜಾತಿ ಗಣತಿ ವರದಿ ಬಗ್ಗೆ ಆತಂಕವಿಲ್ಲ

ಜಾತಿ ಗಣತಿ ವರದಿ ವಿಚಾರವಾಗಿ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥಶ್ರೀಗಳ ನೇತೃತ್ವದಲ್ಲಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ವರದಿ ಸ್ವೀಕರಿಸಿ ಪರಿಶೀಲನೆ ನಂತರ, ಚರ್ಚಿಸಿ ತೀರ್ಮಾನ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!