Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಶದ ರೈತರನ್ನು ಶತ್ರುಗಳಂತೆ ಕಾಣುತ್ತಿದೆ ಮೋದಿ ಸರ್ಕಾರ : ಬೃಂದಾ ಕಾರಟ್

ರೈತರು ಒಂದು ವರ್ಷಗಳ ಕಾಲ ದೆಹಲಿ ಗಡಿಯಲ್ಲಿ ಚಳವಳಿ ಮಾಡಿದಾಗ ಮೋದಿ ಅವರು, ಲಿಖಿತವಾದ ಹೇಳಿಕೆ ಮೂಲಕ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆ ನೀಡುವ ಭರವಸೆ ನೀಡಿದ್ದರು, ಈ ರೀತಿ ಮಾತುಕೊಟ್ಟ ಎರಡೂವರೆ ವರ್ಷಗಳ ನಂತರ ಮತ್ತೆ ರೈತರು ಕನಿಷ್ಠ ಬೆಂಬಲ ಬೆಲೆ ಕೊಡಿ ಎಂದು ಕೇಳಲು ದೆಹಲಿ ಕಡೆ ಹೊರಟರೇ ಮೋದಿ ಸರ್ಕಾರ ಏನು ಮಾಡುತ್ತಿದೆ? ಅವರ ಮೇಲೆ ಬ್ಯಾರಿಕೇಡ್‌ಗಳನ್ನು ಹಾಕಿ, ರಸ್ತೆಗೆ ಮೊಳೆ ಹೊಡೆದಿದ್ದಾರೆ. ಲಾಠಿಚಾರ್ಜ್ ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಕ್ಕೆ ಬಳಸುತ್ತಿರುವ ಡ್ರೋಣ್‌ಗಳನ್ನ ಶೆಲ್‌ಗಳನ್ನು ಹಾಕಲು ಬಳಸುತ್ತಿರುವ ಮೋದಿ ಸರ್ಕಾರ, ರೈತರನ್ನು ಶತ್ರುಗಳ ರೀತಿ ಕಾಣುತ್ತಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಕಿಡಿಕಾರಿದರು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಆಯೋಜಿಸಿದ್ದ`ಶ್ರಮಜೀವಿಗಳ ಸಮಾವೇಶ’ದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೆಹಲಿಗೆ ರೈತರು ಬರುವುದನ್ನ ತಡೆಯಲು ಬ್ಯಾರಿಕೇಡ್ ಹಾಕಿ, ಲಾಠಿಚಾರ್ಜ್ ಮಾಡಿ, ಗುಂಡು ಹೊಡೆಯಲಾಗುತ್ತಿದೆ, ಇದರ ನಡುವೆ ರಕ್ಷಣಾ ಉದ್ದೇಶಕ್ಕೆ ಬಳಸುವ ಡ್ರೋಣ್ ಮೂಲಕ ಟಿಯರ್ ಗ್ಯಾಸ್ ಸಿಡಿಸಿ ರೈತರನ್ನು ತಡೆದು ಶತ್ರುಗಳ ರೀತಿ ಕೇಂದ್ರ ಸರ್ಕಾರ ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿಗೆ ನಾರೀ ಶಕ್ತಿಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ ಶ್ರಮಿಕರಿಗೆ ಕಳೆದ ಐದು ತಿಂಗಳಿಂದ ಕೂಲಿ ಹಣವನ್ನೇ ಬಿಡುಗಡೆ ಮಾಡದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನಾರೀ ಶಕ್ತಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಹೆಚ್.ಡಿ.ಕೆ ಗೆ ನಾಚಿಕೆಯಾಗಬೇಕು

ಕೆರಗೋಡಿನ ಪಂಚಾಯಿತಿ ಕಟ್ಟಡದ ಜಾಗದಲ್ಲಿ ಧ್ವಜ ಸ್ತಂಭ ನಿರ್ಮಿಸಿ ಹನುಮಧ್ವಜ ಕಟ್ಟಲು ಯಾರು ಅನುಮತಿ ಕೊಟ್ಟರು? ಪ್ರತಿಯೊಬ್ಬ ನಾಗರೀಕರು ಅವರು ಒಪ್ಪಿದ ಧರ್ಮದಲ್ಲಿ ನಂಬಿಕೆ ಇರುವ ಹಕ್ಕಿದೆ, ನೀವು ಕೇಸರಿ ಬಾವುಟ, ಹನುಮಧ್ವಜ, ಶ್ರೀರಾಮ, ದುರ್ಗಮಾಜಿ ಬಾವುಟ ಇಟ್ಟುಕೊಳ್ಳುವ ಸ್ವಾತಂತ್ರ‍್ಯದ ಹಕ್ಕಿದೆ, ಅದನ್ನ ನೀವು ದೇವರ ಮನೆಯಲ್ಲಿಟ್ಟುಕೊಳ್ಳಬೇಕು. ಸಂವಿಧಾನವು ಇದನ್ನೇ ಖಾತ್ರಿ ಮಾಡಿದೆ.

ಆದರೆ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಾಡಿಸಿಲ್ಲ, ಕೇಸರಿ ಬಾವುಟ ಹಾರಿಸಿದ್ದಾರೆ, ಅದನ್ನು ಹೋರಾಟದ ಮೂಲಕ ಇಳಿಸಿ ರಾಷ್ಟ್ರಧ್ವಜ ಹಾರಿಸಿದ ಹೋರಾಟಗಾರರಿಗೆೆ ಧನ್ಯವಾದಗಳು, ಕೇಸರಿ ಬಾವುಟದ ಹೊರಾಟದಲ್ಲಿ ಪಾಲ್ಗೊಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು, ಸಂಘ ಪರಿವಾರದ ಜೊತೆ ಹೇಗೆ ಬಂದರು ಎಂದು ಪ್ರಶ್ನಿಸಿದರು.

ಕಳೆದ ವರ್ಷ ಮೋದಿ ಸರ್ಕಾರ ಉದ್ಯೋಗಖಾತ್ರಿ ಯೋಜನೆಯ ಶೇ.30 ರಷ್ಟು ಕಡಿತಗೊಳಿಸಿದರು, ಮತ್ತೆ ಈ ಬಾರಿಯೂ ಕಡಿತಗೊಳಿಸಲಾಗಿದೆ, ಮಂಡ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಕೇವಲ 44 ದಿವಸ ಕೆಲಸ ನೀಡಲಾಗುತ್ತಿದೆ. ಇದು ನಿಮ್ಮ ಹಕ್ಕು, ಕಾನೂನು ಬದ್ಧವಾಗಿರುವ ಹಕ್ಕು, ಯಾವಾಗ ಕೆಲಸ ಬೇಕು ಎನ್ನಿಸುತ್ತದೋ ಆಗ ಕೆಲಸ ಪಡೆಯುವುದು ನಿಮ್ಮ ಹಕ್ಕಾಗಿದೆ, ಏಕೆ ನಾವು 100 ದಿನ ಕೆಲಸ ಪಡೆಯಲು ಆಗುತ್ತಿಲ್ಲ, ವರ್ಷ ಪೂರ್ತಿ ಕೆಲಸ ಕೊಡಬೇಕು ಎನ್ನುವುದೇ ನಮ್ಮ ಆಗ್ರಹ ಎಂದು ಒತ್ತಾಯಿಸಿದರು.

ಕೋಮುವಾದಿಗಳಿಗೆ ಸ್ಟೆಪ್ನಿ

ಅಂಗನವಾಡಿ, ಆಶಾ, ಬಿಸಿಯೂಟ, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ಹೆಚ್ಚಿಸಲು ಒಂದೇ ಒಂದು ರೂಪಾಯಿಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ, ಒಂದು ಕಾಲದಲ್ಲಿ ಜಾತ್ಯಾತೀತಕ್ಕೆ ಹೆಸರುವಾಸಿಯಾಗಿದ್ದ ಎಚ್.ಡಿ.ದೇವೇಗೌಡ ಅವರ ಪಕ್ಷವು ಈ ಕೋಮುವಾದಿಗಳಿಗೆ ಸ್ಟೆಪ್ನಿಯಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಕೋಮು ಅಜೆಂಡಾವನ್ನು ಮುಂದೆ ತೆಗೆದುಕೊಂಡು ಹೋಗುವುದಕ್ಕೆ ಸ್ಟೆಪ್ನಿಯಾಗಿ ಕೆಲಸ ಮಾಡಲು ನಾಚಿಗೆಯಾಗಬೇಕು ಎಂದು ವ್ಯಂಗ್ಯವಾಡಿದರು.

ಕಾನೂನು ಬದ್ಧವಾಗಿ ಕೆಲಸ ಮುಗಿದ 15 ದಿನದೊಳಗೆ ಹಣ ನೀಡಬೇಕು. ಕಳೆದ ಅಕ್ಟೋಬರ್ ತಿಂಗಳಿಂದ ಮಂಡ್ಯ ಜಿಲ್ಲೆಯ ಕೂಲಿಕಾರರಿಗೆ ಕೂಲಿ ಹಣವನ್ನೇ ನೀಡಿಲ್ಲ, ಬಾಕಿ ಉಳಿಸಿಕೊಂಡಿರುವ ಕೂಲಿ ಹಣವೇ 13 ಕೋಟಿ ರೂ.ಗಳಾಗಿವೆ. ಮಹಿಳೆಯರ ಕೂಲಿ ಹಣ ಕೊಡಲು ಸಾಧ್ಯವಾಗದಿದ್ದ ಮೇಲೆ ನಾರಿಶಕ್ತಿ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ, ಕೆಲಸ ನೀಡುವ ಮೂಲಕ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

ಮಂಡ್ಯದಲ್ಲಿ ಸಮರಶೀಲ ಮಹಿಳೆಯರು

ಪ್ರತಿ ಬಾರಿಯೂ ನಾನು ಯಾವುದೇ ಸಭೆಗೆ ಮಂಡ್ಯಕ್ಕೆ ಬಂದಾಗ ದೊಡ್ಡ ಸಂಖ್ಯೆಯ ಸಮರಶೀಲ ಮಹಿಳೆಯರು ರೆಡ್ ಪ್ಲಾಗ್ ಹಿಡಿದು ನನ್ನನ್ನು ಸ್ವಾಗತಿಸುತ್ತಾರೆ, ಹಾಗಾಗಿ ನನಗೆ ಮಂಡ್ಯಕ್ಕೆ ಬಂದಾಗ ಬಹಳ ಸಂತೋಷವಾಗುತ್ತದೆ. ಇಲ್ಲಿ ನೆರದಿರುವ ಮಹಿಳೆಯರಲ್ಲಿ 100 ಕ್ಕೆ 51 ಜನ ಮಹಿಳೆಯರು ಸದ್ದಸ್ಯರಿದ್ದಾರೆ ಎನ್ನುವ ವಿಚಾರ ತಿಳಿದು ಸಂತೋಷವಾಯಿತು. ನಾನು ಮಂಡ್ಯ ಜಿಲ್ಲೆಯ ಸಿಪಿಐಎಂ ಪಕ್ಷವನ್ನು ಇದಕ್ಕಾಗಿ ಅಭಿನಂದಿಸುತ್ತೇವೆ. ಈ ಸಂಖ್ಯೆ ತಕ್ಷಣದಲ್ಲಿ ಶೇಕಡ 75 ರಷ್ಟು ಹೆಚ್ಚಾಗುತ್ತದೆ ಎಂದು ಆಶಿಸುತ್ತೇನೆ. ಈ ಏರಿಕೆಯಿಂದ ಇಡೀ ದೇಶದಲ್ಲಿ ದಾಖಲೆ ಸೃಷ್ಟಿಸಿದಂತಾಗುತ್ತದೆ ಎಂದರು.

ಕೋಮುವಾದಿಗಳ ವಿರುದ್ದ ಹೋರಾಟ

ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರವು ಇಡೀ ಇತಿಹಾಸವನ್ನು ವಿಕೃತಗೊಳಿಸಿ ಅವರ ಕೋಮುವಾದಿ ಅಜೆಂಡಾವನ್ನು ಮುಂದೆ ತಂದು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ನಮ್ಮ ದೇಶದ ಆತ್ಮ ಎಂದರೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ, ಮತ್ತೊಂದು ಜೊತೆಯಾಗಿ ದೇಶದಲ್ಲಿ ದುಡಿಯುವುದು, ಉಣ್ಣುವುದೇ ಆತ್ಮ, ಇದೇ ಆತ್ಮವನ್ನ ಚೂರು ಮಾಡುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇಲ್ಲಿ ಮೂರು ಜನ ತಾಲ್ಲೂಕು ಕಾರ್ಯದರ್ಶಿಗಳು ಸಮರಶೀಲವಾಗಿರುವ ಮಹಿಳೆಯರಾಗಿದ್ದಾರೆ. ಹಾಗಾಗಿ ಅವರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇವೆ, ಜನವಾದಿ ಮಹಿಳೆ ಸಂಘಟನೆ, ಕೃಷಿ ಕೂಲಿ ಕಾರ್ಮಿಕ ಸಂಘಟನೆ, ಉದ್ಯೋಗ ಖಾತ್ರಿ ಯೋಜನೆಯ ಸಂಘಟನೆ ಸೇರಿದಂತೆ ಹಲವರು ಇಲ್ಲಿ ಸೇರಿದ್ದೀರಿ, ಇದು ನಮ್ಮ ಕೆಂಬಾವುಟಕ್ಕೆ ಅತೀವವಾದ ಶಕ್ತಿಯನ್ನು ತಂದಿದ್ದೆ ಎಂದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಎಂ.ಪುಟ್ಟಮಾದು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮಂಡ್ಯ ತಾಲ್ಲೂಕು ಕಾರ್ಯದರ್ಶಿ ಸಿ.ಕುಮಾರಿ, ಮಂಡಳಿ ಸದಸ್ಯರಾದ ಭರತ್‌ರಾಜ್, ದೇವಿ, ಬಿ.ರಾಮಕೃಷ್ಣ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ರಾಮಕೃಷ್ಣ, ಶೋಭಾ, ಸುಶೀಲಾ, ಬಿ.ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!