Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಎದುರಾಳಿ ಯಾರಾದರೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸ್ಟಾರ್ ಚಂದ್ರು

ಮುಂಬರುವ ಮಂಡ್ಯ ಲೋಕಸಭಾ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ನನ್ನ ಸ್ಪರ್ಧೆ ಖಚಿತ, ಕಣದಿಂದ ಹಿಂದೇ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಿಳಿಸಿದರು.

ಮಂಡ್ಯನಗರದಲ್ಲಿ ಬ್ರಾಹ್ಮಣ ಸಭಾದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅಥವಾ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪೈಕಿ ಯಾರೇ ಮೈತ್ರಿ ಅಭ್ಯರ್ಥಿಯಾದರೂ ಕಾಂಗ್ರೆಸ್ ಪಕ್ಷದಿಂದ ನಾನೇ  ಅಭ್ಯರ್ಥಿ. ಈಗಾಗಲೇ ಕಾಂಗ್ರೆಸ್ ಪಕ್ಷವು ನನ್ನ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ. ಹೀಗಾಗಿ ನಾನು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಹಲವಾರು ದಿನಗಳಿಂದ ಲೋಕಸಭಾ ಕ್ಷೇತ್ರದೆಲ್ಲೆಡೆ ಪ್ರಚಾರ ನಡೆಸುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಹೀಗಾಗಿ ನನ್ನ ಗೆಲುವಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸಬೇಕು. ನಾನು ಮಂಡ್ಯದಲ್ಲೇ ಸದಾ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.

ಶಾಸಕ ಗಣಿಗ ಪಿ.ರವಿಕುಮಾರ್ ಗೌಡ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಮಹಾಸಭಾದಲ್ಲೇ ನನ್ನ ಚುನಾವಣಾ ಪ್ರಚಾರ ಆರಂಭಿಸಿದ್ದೆ. ಅವರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆದ್ದೆ. ಅದೇ ರೀತಿ ಸ್ಟಾರ್ ಚಂದ್ರು ಅವರು ಕೂಡ ಇಲ್ಲಿಯೇ ಪ್ರಚಾರ ಆರಂಭಿಸಿದ್ದಾರೆ. ಅವರಿಗೂ ಬ್ರಾಹ್ಮಣರ ಆಶೀರ್ವಾದ ದೊರಕಿದ್ದು, ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಮುದಾಯದ ಮುಖಂಡ ಬೆಳ್ಳೂರು ಶಿವರಾಂ ಮಾತನಾಡಿ, ಮಂಡ್ಯ ಸ್ವಾಭಿಮಾನದ ಜಿಲ್ಲೆಯಾಗಿದೆ. ಸಾಹುಕಾರ್ ಚನ್ನಯ್ಯ, ಕೆ.ವಿ.ಶಂಕರೇಗೌಡ, ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣರಂತಹ ಮಹಾನ್ ನಾಯಕರನ್ನು ಕೊಡುಗೆ ನೀಡಿದೆ. ಬೇರೆ ಜಿಲ್ಲೆಯವರಿಗೆ ಅವಕಾಶ ಬೇಡವೆಂದು ಕಾಂಗ್ರೆಸ್ ಸ್ಥಳೀಯರನ್ನೇ ಅಭ್ಯರ್ಥಿಯಾಗಿಸಿದೆ. ಅವರಿಗೆ ಒಳಿತಾಗಲಿ ಎಂದು ಹಾರೈಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಕೆಪಿಸಿಸಿ ಸದಸ್ಯ ಸಿ.ಜೆ.ನಾಗರಾಜು, ಮಂಡ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಬ್ರಾಹ್ಮಣ ಸಮುದಾಯದ ಅಣ್ಣಯ್ಯ, ಸದಾಶಿವ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!