Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ವ ಜನಾಂಗಕ್ಕೂ ಸಂವಿಧಾನದ ಅರಿವು ಮೂಡಿಸಬೇಕಿದೆ: ಶಾಸಕ ನರೇಂದ್ರಸ್ವಾಮಿ

ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ರಾಷ್ಟ್ರದ ಹಬ್ಬವನ್ನಾಗಿ ಮಾಡುವ ಮೂಲಕ ಸರ್ವ ಜನಾಂಗಕ್ಕೂ ಸಂವಿಧಾನದ ಅರಿವು ಮೂಡಿಸಬೇಕಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸಲಹೆ ನೀಡಿದರು.

ಮಂಡ್ಯ ನಗರದ ಗಾಂಧಿ ಭವನದಲ್ಲಿ ಛಲವಾದಿ ಮುಖಂಡರ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಸಾರ್ವಕಾಲಿಕ ನಾಯಕ. ಅವರು ನೀಡಿರುವ ಸಂವಿಧಾನಕ್ಕೆ ಎಲ್ಲೂ ಚ್ಯುತಿ ಬರಬಾರದೆಂದರೆ ನಾವೆಲ್ಲರೂ ಒಗ್ಗೂಡಬೇಕಿದೆ. ಸಂವಿಧಾನ ರಕ್ಷಿಸುವ ಕೆಲಸ ಮಾಡಲು ಗಟ್ಟಿಯಾದ ಧ್ವನಿ ಬೇಕು. ಪ್ರಸ್ತುತ ಸಂದರ್ಭದಲ್ಲಿ ನಾವು ತಪ್ಪು ಮಾಡಿದರೆ ಸ್ವಾತಂತ್ರ್ಯ ನಂತರದ ಸ್ಥಿತಿಯೇ ಬರಬಹುದು. ಈ ಬಗ್ಗೆ ಎಚ್ಚರವಿರಬೇಕು. ಸಂವಿಧಾನ ಉಳಿವಿಗಾಗಿ ಒಗ್ಗಟ್ಟಾಗಿ ಶ್ರಮ ಹಾಕಬೇಕಿದೆ.ಯಾವುದೇ ಕೊಂಕು ನುಡಿ, ಅಡ್ಡಿ,ಆತಂಕ ಬಂದರೂ ವಿರಮಿಸದೆ ಅಂಬೇಡ್ಕರ್ ಅವರ ಅನುಯಾಯಿಗಳು ಸಂವಿಧಾನ ರಕ್ಷಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ಅಂಬೇಡ್ಕರ್ ಅವರ ಆದರ್ಶದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಬಹಳಷ್ಟು ಜನರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ.ಸಂವಿಧಾನ ಅರ್ಥೈಸಿಕೊಂಡವರಿಗೆ, ಓದಿದವರಿಗೆ ಸಂವಿಧಾನ ಅರ್ಥವಾಗುತ್ತದೆ. ಅಂಬೇಡ್ಕರ್ ಎಂದರೆ ಕೇವಲ ಮೀಸಲಾತಿ ನೀಡಿದವರು ಎಂದಷ್ಟೇ ಮಾತನಾಡುತ್ತಿದ್ದಾರೆ. ಮಹಿಳೆಯರು ಪುರುಷರಷ್ಟೇ ಸಮಾನರು ಎಂದು ಸಂವಿಧಾನದಲ್ಲಿ ಅಳವಡಿಸಿದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್. ಅವರ ವಿಚಾರವನ್ನು ತಿಳಿಸುವ ಕೆಲಸ ಮಾಡಬೇಕಿದೆ‌. ಈ ಹಿನ್ನಲೆಯಲ್ಲಿ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಎಲ್ಲೆಡೆ ಜನರು ಸೇರಿ ದೀಪ ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು ಎಂದರು.

ನಮ್ಮ ದೇಶದ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ಸಮುದಾಯವಾದ ಪರಿಷ್ಟ ಜಾತಿಯ ಜನರು ತಮ್ಮ ಅನಿವಾರ್ಯತೆಯನ್ನು ತಿಳಿಸುವ ಸಂದರ್ಭ ಇಂದು ಬಂದೊದಗಿದೆ. ನಮ್ಮ ಸಮುದಾಯದಲ್ಲಿರುವ ಸಂಕುಚಿತ ಮನಸ್ಥಿತಿಯನ್ನು ಬಿಟ್ಟು ನಾವೆಲ್ಲರೂ ಒಂದಾಗಬೇಕಾಗಿದೆ. ಸಂವಿಧಾನ ನೀಡಿರುವ ಮೀಸಲಾತಿಯಿಂದ ನಾವೆಲ್ಲರೂ ನೆಮ್ಮದಿಯ ವಾತಾವರಣದಲ್ಲಿ ಇದ್ದೇವೆ. ದೇಶದಲ್ಲಿನ ಶೇ. 15 ರಷ್ಟು ಇರುವ ಜನರನ್ನು ದುಷ್ಟರು ಎಂದು ಹೇಳುವ ವಾತಾವರಣವಿದೆ. ಸಂವಿಧಾನದ ಪ್ರಕಾರ ಎಲ್ಲರಿಗೂ ಈ ರಾಜ್ಯದಲ್ಲಿ ಬದುಕುವ ಹಕ್ಕಿದೆ. ಸಂವಿಧಾನ ಉಳಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಅದರ ರಕ್ಷಣೆ ಪ್ರಸ್ತುತ ಅನಿವಾರ್ಯವಾಗಿದೆ ಎಂದರು.

ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿ ಮಾಡಲಾರ. ಆದರೆ ಇಂದು ತಿರುಚಿರುವ ಇತಿಹಾಸವನ್ನು ಓದಬೇಕಾಗಿದೆ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಅದರಲ್ಲಿ ಎಂಟು ಜನ ಇದ್ದರು ಎನ್ನುತ್ತಾರೆ. ಆ ಎಂಟು ಜನರಲ್ಲಿ ಕೆಲವರು ಹೇಗೆ ಉದಾಸೀನ ಮಾಡಿದರು, ಕೆಲವರ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿತು, ಅದೆಲ್ಲವನ್ನು ಸರಿದೂಗಿಸಿಕೊಂಡು ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು ಎಂಬ ಬಗ್ಗೆ ಹೇಳುತ್ತಿಲ್ಲ. ಅಂಬೇಡ್ಕರ್ ಅವರನ್ನು ಪ್ರಪಂಚವೇ ಒಪ್ಪಿಕೊಂಡಿದೆ. ನಮ್ಮ ದೇಶದಲ್ಲಿ ಸಂಕುಚಿತ ಮನಸ್ಸುಗಳಿವೆ. ನಾವೆಲ್ಲರೂ ಭಾವನಾತ್ಮಕವಾಗಿ ಅಂಬೇಡ್ಕರ್ ರವರ ನೆನೆಯಬೇಕಿದೆ ಎಂದರು..

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನದಂದು ಸಂವಿಧಾನ ರಕ್ಷಣೆಯ ಬಗ್ಗೆ ಗಟ್ಟಿ ಧ್ವನಿಯಲ್ಲಿ ಹೇಳಬೇಕಾಗಿದೆ. ನಾನು ಇರುವವರೆಗೂ ನನ್ನ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನನಗೆ ನಿರ್ಭಯವಾಗಿ ಅನ್ಯಾಯದ ವಿರುದ್ಧ ದನಿಯೆತ್ತುವ ಶಕ್ತಿ ಇದೆ. ಪ್ರತಿ ತಾಲೂಕಿನಲ್ಲೂ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ ಆಚರಣೆಗೆ ಮುಂದಾದರೆ ಅವರಿಗೆ ಸರ್ಕಾರದಿಂದ ಹಾಗೂ ನನ್ನೆಲ್ಲ ಸಹಕಾರ ನೀಡುತ್ತೇನೆ ಎಂದರು.

ಚಲವಾದಿ ಮುಖಂಡರಾದ ಸುರೇಶ್ ಕಂಠಿ, ದೀಪಕ್, ವಿಜಯಲಕ್ಷ್ಮಿ ರಘುನಂದನ್, ಶಾಂತರಾಜು, ಬಸ್ತಿ ರಂಗಪ್ಪ, ಪ್ರೇಮ್ ಕುಮಾರ್, ನಗರಸಭಾ ಸದಸ್ಯರಾದ ಶ್ರೀಧರ್ ಗೀತಾ ಶಿವಪ್ರಕಾಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!