ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಇದರ ಬೆನ್ನಲ್ಲೇ ಕ್ಷೇತ್ರದ ಎಲ್ಲ ಮತಗಟ್ಟೆಗಳ ಮತಯಂತ್ರಗಳು ಮಂಡ್ಯ ಜಿಲ್ಲಾ ಕೇಂದ್ರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿನ ಭದ್ರತಾ ಕೊಠಡಿಗಳನ್ನು ಸೇರಿವೆ. ಮತಯಂತ್ರಗಳ ನ್ನಿಟ್ಟಿರುವ ಕೊಠಡಿಗಳು ಸೇರಿದಂತೆ ಇಡೀ ಕಾಲೇಜಿಗೆ ಬಿಗಿ ಬಂದೋಬಸ್ತ್ ಹಾಕಲಾಗಿದೆ.
ಮತದಾನ ಮುಗಿಯುತ್ತಿದ್ದಂತೆ ಆಯಾಯ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ-ಮಸ್ಟರಿಂಗ್ ಸೆಂಟರ್ಗಳಲ್ಲಿ ಡಿ-ಮಸ್ಟರಿಂಗ್ ಕಾರ್ಯ ನಡೆಸಿ, ಮತದಾನಕ್ಕೆ ಬಳಸಿದ ಎಲ್ಲ ವಿದ್ಯುನ್ಮಾನ ಮತಯಂತ್ರಗಳು, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಎಲ್ಲ ಶಾಸನಬದ್ಧ ದಾಖಲೆಗಳನ್ನು ಜಿಪಿಎಸ್ ಅಳವಡಿಸಿದ ವಾಹನದ ಮೂಲಕ ಸೂಕ್ತ ಪೊಲೀಸ್ ಭದ್ರತೆಯೊಡನೆ ಮಂಡ್ಯ ಸರಕಾರಿ ಮಹಾವಿದ್ಯಾಲಯದ ಕಾಲೇಜಿಗೆ ರಾತ್ರಿಯೇ ತರಲಾಯಿತು.
ರಾತ್ರಿ 7.30ವರೆಗೆ ಅವಕಾಶ
ಕೆಲವೆಡೆ ಅವಧಿ ಮುಗಿದರೂ ಅಷ್ಟರೊಳಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ರಾತ್ರಿ 7.30ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅಂತಹ ಮತಗಟ್ಟೆಗಳು ಹಾಗೂ ದೂರದ ಪ್ರದೇಶಗಳಿಂದ ಮತಯಂತ್ರಗಳು ನಗರಕ್ಕೆ ಬರುವುದು ತಡವಾಯಿತು. ರಾತ್ರಿಯಿಡೀ ಮತಯಂತ್ರಗಳ ವಾಹನಗಳು ಪೊಲೀಸ್ ಭದ್ರತೆಯಲ್ಲಿ ಬರುತ್ತಲೇ ಇದ್ದವು.
ಸ್ಟ್ರಾಂಗ್ ರೂಂಗಳಿಗೆ ಭದ್ರತೆ
ಶಾಂತಿಯುತವಾಗಿ ಮತದಾನ ಮುಗಿದಿದ್ದು ಎಲ್ಲ 2076 ಮತಗಟ್ಟೆಗಳಿಂದಲೂ ವಿದ್ಯುನ್ಮಾನ ಮತಯಂತ್ರಗಳು ಮತ್ತು ಶಾಸನಬದ್ಧ ದಾಖಲೆಗಳನ್ನು ಜಿಲ್ಲಾ ಕೇಂದ್ರದಲ್ಲಿನ ಸ್ಟ್ರಾಂಗ್ ರೂಂಗಳಲ್ಲಿ ಇಟ್ಟು ಸೀಲ್ ಮಾಡಲಾಗಿದೆ. ಸಿಆರ್ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸುರಕ್ಷತೆಯಲ್ಲಿ ಸ್ಟ್ರಾಂಗ್ ರೂಂಗಳ ಬಳಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಶನಿವಾರ ಬೆಳಗ್ಗೆ 8 ಗಂಟೆಗೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಿಂದ ಮತಯಂತ್ರ ಬಂದಿದೆ. ಹೀಗಾಗಿ ರಾತ್ರಿಯಿಡೀ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಎಚ್ಚರವಿದ್ದು ಕರ್ತವ್ಯ ನಿರ್ವಹಿಸುವ ಮೂಲಕ ವಿದ್ಯುನ್ಮಾನ ಮತಯಂತ್ರಗಳು ಭದ್ರತಾ ಕೊಠಡಿ ಸೇರುವಂತೆ ಮಾಡಿದರು.
18 ಸ್ಟ್ರಾಂಗ್ ರೂಂ ಗಳು
ನಗರದ ಮಂಡ್ಯ ವಿವಿಯ ಕಾಮರ್ಸ್ ಬ್ಲಾಕ್ನ 18 ಕೊಠಡಿಗಳಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಗಳಲ್ಲಿ ಎಲ್ಲ ವಿದ್ಯುನ್ಮಾನ ಮತಯಂತ್ರಗಳು ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ರಂತೆ ಸ್ಟ್ರಾಂಗ್ ರೂಂ ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಅಂಚೆ ಮತಗಳು ಹಾಗೂ ಶಾಸನಬದ್ಧ ದಾಖಲೆಗಳಿಗಾಗಿ ತಲಾ ಒಂದೊಂದು ಸ್ಟ್ರಾಂಗ್ ರೂಂ ತೆರೆಯಲಾಗಿದೆ.
ಒಂದು ವಿಧಾನಸಭಾ ಕ್ಷೇತ್ರಕ್ಕೆ 2 ಸ್ಟ್ರಾಂಗ್ ರೂಂ
ಸೀಲ್ ಮಾಡಿದ ಸ್ಟ್ರಾಂಗ್ ರೂಂಗಳನ್ನು ಪೊಲೀಸ್ ಇಲಾಖೆಗೆ ಸುಪರ್ದಿಗೆ ಪಡೆಯಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಟ್ರಾಂಗ್ ರೂಂಗಳಿಗೆ ಭದ್ರತೆ ಒದಗಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ ಸ್ಟ್ರಾಂಗ್ ರೂಂಗಳನ್ನು ಮಾಡಲಾಗಿದೆ. ಇದರೊಂದಿಗೆ ಅಂಚೆಮತಗಳು, ಶಾಸನಬದ್ಧ ದಾಖಲೆಗಳಿಗಾಗಿ ಒಂದೊಂದು ಹೆಚ್ಚುವರಿ ಸ್ಟ್ರಾಂಗ್ ರೂಂ ಗಳನ್ನು ಸ್ಥಾಪಿಸಲಾಗಿದೆ ಎಂದು ಎಸ್ಪಿ ಎನ್.ಯತೀಶ್ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಿರುವ 16 ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಲಾಕ್ ಸಿಸ್ಟಂನಲ್ಲಿ ಸೀಲ್ ಮಾಡಿ, ಸುರಕ್ಷಿತವಾಗಿ ಇಡಲಾಗಿದೆ. ಸಿಆರ್ಪಿಎಫ್ ಮತ್ತು ಜಿಲ್ಲಾ ಪೊಲೀಸ್ ಸೇರಿದಂತೆ ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲ ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಜೂ.4ರವರೆಗೆ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಯಂತ್ರಗಳನ್ನು ಸಂಗ್ರಹ ಮಾಡಿ ಇಟ್ಟಿರುವ ಸರಕಾರಿ ಮಹಾವಿದ್ಯಾಲಯಕ್ಕೆ 24 ಗಂಟೆಗಳ ಭದ್ರತೆ ಒದಗಿಸಲಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳನ್ನು ಮೂರು ಪಾಳಿಯಲ್ಲಿ ಭದ್ರತೆ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ. ಕಾಲೇಜಿನ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.4ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಅಲ್ಲಿಯವರೆಗೂ ಭದ್ರತೆಯನ್ನು ಮುಂದುವರೆಸಲಾಗುತ್ತದೆ.




