ಭೀಕರ ಬರಗಾಲದ ಹಿನ್ನಲೆಯಲ್ಲಿ ಪರಿಣಾಮಕಾರಿಯಾಗಿ ಬರ ನಿರ್ವಹಣೆ ಮಾಡುವಲ್ಲಿ ಅನುಸರಿಸಬಹುದಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲು ಮೇ 13ರಂದು ಬೆಳಿಗ್ಗೆ 11 ಗಂಟೆ ಮದ್ದೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತವು ಪ್ರಗತಿಪರ ಸಂಘಟನೆಗಳ ಸಭೆ ಕರೆದಿದೆ.
ರೈತಪರ, ಕನ್ನಡ ಪರ, ಶ್ರಮಿಕ ಪರ ಸಂಘಟನೆಗಳ ವೇದಿಕೆಯಾದ ಪ್ರಗತಿಪರ ಸಂಘಟನೆಯು ಕಳೆದ ವಾರ “ಹೀಗಿರಲಿ ಬರ ಪರಿಹಾರ” ಶೀರ್ಷಿಕೆ ಯಡಿಯಲ್ಲಿ ಚಿಂತನ – ಮಂಥನ ಸಭೆ ನಡೆಸಿ, ಉಪಸಮಿತಿ ರಚಿಸಿ ಬರನಿರ್ವಹಣೆಗೆ ಅನುಸರಿಸಬೇಕಾದ ಕಾರ್ಯ ವಿಧಾನ ಕುರಿತು ವಿಷಯಗಳ ಪಟ್ಟಿ ತಯಾರಿಸಿತ್ತು.
ಈ ಸಂಬಂಧ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ತಾಲ್ಲೂಕಿಗೆ ಬಂದಿರುವ ಬರಗಾಲ ತಂದೊಡ್ಡಿರುವ ಭೀಕರ ಪರಿಣಾಮಗಳನ್ನು ಮನದಟ್ಟು ಮಾಡಿಕ್ಕೊಟ್ಟು ಪ್ತಗತಿಪರಸಂಘಟನೆಗಳು ಹಾಗೂ ಇಲಾಖಾಧಿಕಾರಿಗಳ ಸಭೆ ಕರೆದು ” ಪರಿಣಾಮಕಾರಿಯಾಗಿ ಬರ ನಿರ್ವಹಣೆ ಮಾಡುವಲ್ಲಿ ಆಗಿರುವ, ಆಗಬಹುದಾದ, ಆಗಬೇಕಾದ ಕ್ರಮಗಳ ಕುರಿತು ಸಭೆ ನಡೆಸುವಂತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಹಶಿಲ್ದಾರ್ ಸಭೆ ಕರೆದಿದ್ದಾರೆ
ರಾಜ್ಯದಲ್ಲೇ ಪ್ರಥಮ
ಬರಗಾಲ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವಲ್ಲಿ ಸಂಘಟನೆಗಳೊಟ್ಟಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಮದ್ದೂರು ತಾಲ್ಲೂಕು ಆಡಳಿತ ನಡೆಸಲಿರುವ ಸಭೆಯು ರಾಜ್ಯದಲ್ಲೇ ಪ್ರಥಮ ಸಭೆ ಆಗಲಿದೆ, ಆ ನಿಟ್ಟಿನಲ್ಲಿ ಈ ಸಭೆಗೆ ಮಹತ್ವ ಬಂದಿದೆ.
ಪ್ರಗತಿಪರ ಸಂಘಟನೆಯ ಸಮಾಜಮುಖಿ ಚಿಂತನೆ
ಮದ್ದೂರಿನ ವಿವಿಧ ಪ್ರಗತಿ ಪರ ಸಂಘಟನೆಗಳಾದ ಕರ್ನಾಟಕ ರಾಜ್ಯ ರೈತಸಂಘ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ರಕ್ಷಣಾವೇದಿಕೆ, ಒಕ್ಕಲಿಗರ ಸಂಘಟನೆ, ದಲಿತಸಂಘಟನೆ, ಶ್ರಮಿಕಪರಸಂಘಟನೆ, ಸವಿತಾ ಸಮಾಜ ,ವರ್ತಕರಸಂಘ ಹೀಗೆ ಹಲವು ಸಂಘಟನೆಗಳನ್ನು ವಿಷಯಾಧಾರಿತವಾಗಿ ಒಂದೇ ವೇದಿಕೆಗೆ ತಂದು “ಪ್ರಗತಿಪರ ಸಂಘಟನೆಗಳ ಒಕ್ಕೂಟ” ದ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಪ್ರಗತಿಪರಸಂಘಟನೆಯು ಕಳೆದ ಎರಡು ವರ್ಷಗಳಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಕಾವೇರಿ ಚಳವಳಿ, ರೇಷ್ಮೆಬೆಲೆ ಕುಸಿತ ಹಾಗೂ ಮಾರುಕಟ್ಟೆ ವ್ಯವಸ್ಥೆ, ವಿದ್ಯುತ್ ಬಾಕಿ ಮನ್ನಾ, ಕಾಡು ಪ್ರಾಣಿಗಳ ಹಾವಳಿ ತಡೆ ಕುರಿತಂತೆ ಹಲವು ಚಳವಳಿಗಳನ್ನ ರೂಪಿಸಿ ಸಂಬಂಧಿಸಿದ ಅಧಿಕಾರಿಗಳೊಟ್ಟಿಗೆ ಸಂವಹನ ನಡೆಸಿ ಅಗತ್ಯಪರಿಹಾರ ಕಂಡುಕ್ಕೊಳ್ಳುವಲ್ಲಿ ಸಂಘಟನೆ ಯಶಸ್ಸು ಸಾಧಿಸುವ ಮೂಲಕ ಮಂಡ್ಯ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ.
ರಾಜ್ಯದ್ಯಾಂತ ಬಂದಿರುವ ಭೀಕರ ಬರಗಾಲದ ಬಗ್ಗೆ ಆಳುವ ಸರ್ಕಾರದ ಗಮನ ಸೆಳೆದು, ಗಮನ ಸೆಳೆದು ಬರಪರಿಹಾರ ಕುರಿತು ಕಾರ್ಯಕ್ರಮ ರೂಪಿಸಲು ಆಗ್ರಹಿಸಬೇಕಾದ ವಿರೋಧ ಪಕ್ಷಗಳು “ಪೆನ್ ಡ್ರೈವ್” ನ ಬೆನ್ನುಹತ್ತಿ ಪರಸ್ಪರ ಕೆಸರೆರಾಚಾಟದಲ್ಲಿ ತೊಡಗಿರುವ ಸಂದರ್ಭದಲ್ಲಿ “ಪ್ರಗತಿಪರ ಸಂಘಟನೆಗಳ ಒಕ್ಕೂಟ”ವು ಸೂಕ್ಷ್ಮ ಸಂವೇದನೆಯೊಂದಿಗೆ ಬರಪರಿಸ್ಥಿತಿ ಕುರಿತು ಸಕಾಲಿಕವಾಗಿ ಧ್ವನಿಯೆತ್ತಿ ಚಿಂತನ ಮಂಥನ ನಡೆಸಿ ತಾಲ್ಲೂಕು ಆಡಳಿದ ಗಮನ ಸೆಳೆಯಲು ಯಶಸ್ವಿಯಾಗಿದೆ.




