Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತ ನ್ಯಾಯಾಂಗದ ಗೌರವ ಹೆಚ್ಚಿಸಿದ ಎರಡು ಆದೇಶಗಳು

ನ್ಯೂಸ್ ಕ್ಲಿಕ್ ಸುದ್ದಿ ಪೋರ್ಟಲ್ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ ಅಡಿಯಲ್ಲಿ ಬಂಧಿಸಿರುವುದು ಅಸಿಂಧು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ನ್ಯಾಯಕ್ಕೆ ಸಂದ ಜಯ ಎನ್ನಬಹುದು. ಸುಪ್ರೀಂ ಕೋರ್ಟ್ ನ ಈ ಎರಡೂ ಆದೇಶಗಳು ದೇಶದ ಜನರಲ್ಲಿ ನ್ಯಾಯಾಂಗದ ಮೇಲಿನ ಗೌರವ ಮತ್ತು ವಿಶ್ವಾಸವನ್ನು ಹೆಚ್ಚಿಸಿದೆ.

ಈ ಎರಡು ಆದೇಶಗಳು ಸುಪ್ರೀಂ ಕೋರ್ಟ್ ಪೊಲೀಸರು ಮತ್ತು ಸರ್ಕಾರದ ನಡೆಗೆ ವ್ಯಕ್ತಪಡಿಸಿರುವ ಗಂಭೀರ ಸ್ವರೂಪದ ಅಸಮ್ಮತಿಯೂ ಹೌದು. ನ್ಯೂಸ್ ಕ್ಲಿಕ್ ಸಂಪಾದಕ ಪ್ರಭೀರ್ ಪುರಕಾಯಸ್ಥ ಅವರ ಮೇಲೆ ಚೀನಾ ಪರ ಪ್ರಚಾರ ಮಾಡಲು ಭಾರಿ ಮೊತ್ತದ ಹಣ ಪಡೆದಿದ್ದಾರೆ. ಭಾರತದ ಸಾರ್ವಭೌಮತೆಯನ್ನು ಹಾಳುಗೆಡವಲು ಸಂಚು ಮಾಡಿದ್ದಾರೆ. ದೇಶದ ಬಗ್ಗೆ ಜನರಲ್ಲಿ ಆಕ್ರೋಶ ಮೂಡಿಸಲು ಯತ್ನಿಸಿದ್ದಾರೆ ಹಾಗೂ 2019 ರಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಬುಡಮೇಲು ಮಾಡಲು ಪೀಪಲ್ಸ್ ಅಲಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ ಸಂಸ್ಥೆ ಜೊತೆ ಸಂಚು ಮಾಡಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು. ಬುಧವಾರ ಪುರಕಾಯಸ್ಥ ಅವರ ಬಂಧನ ತಪ್ಪು, ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿ ಅವರ ಬಿಡುಗಡೆಗೆ ಆದೇಶ ನೀಡಿದೆ.

ಹಾಗೆಯೇ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಲಾಖಾ ಅವರನ್ನು 2020ರಲ್ಲಿ ಭೀಮಾ ಕೋರೆಗಾವ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ರಾಜಕೀಯ ಕಾರಣಗಳಿಗಾಗಿ ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ಈ ಇಬ್ಬರ ಬಂಧನವಾಗಿದೆ ಎಂಬ ಟೀಕೆಗಳು ಸಾರ್ವಜನಿಕವಾಗಿ ವ್ಯಕ್ತವಾಗಿದ್ದವು.

ಸುಪ್ರೀಂ ಕೋರ್ಟ್ ಕೂಡ ಭಿನ್ನ ಧ್ವನಿಗಳನ್ನು ಹತ್ತಿಕ್ಕುವ, ಸರ್ಕಾರದ ಟೀಕಾಕಾರರ ಬಾಯಿ ಮುಚ್ಚಿಸುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಉದ್ದೇಶಕ್ಕೆ ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಕಳವಳ ಮೂಡಲು ಕಾರಣವಾಗಿದ್ದವು ಎಂದು ಹೇಳಿದೆ.

ಪುರಕಾಯಸ್ಥ ಅವರನ್ನು ಬಂಧಿಸಿದ್ದಕ್ಕೆ ಕಾರಣ ಏನೆಂಬುದನ್ನು ಲಿಖಿತ ರೂಪದಲ್ಲಿ ತಿಳಿಸದೆ, ಅವರನ್ನು ಯಾವ ಕಾರಣಕ್ಕೆ ಬಂಧಿಸುತ್ತಿದ್ದೇವೆ ಎಂದು ಹೇಳದೆ ಅವರನ್ನು ಬಂಧನ ಮಾಡಿದ್ದು ತಪ್ಪು ಎಂದಿರುವ ಕೋರ್ಟ್ ಬಂಧನಕ್ಕೆ ಕಾರಣವನ್ನು ನೀಡದಿರುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿದೆ.

ಪುರಕಾಯಸ್ಥರ ಬಂಧನ ಪ್ರಕ್ರಿಯೆಯನ್ನು ಗುಟ್ಟು ಗುಟ್ಟಾಗಿ ನಡೆಸಲಾಯಿತು. ಇದು ಕಾನೂನಿನ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸದೆ ನುಣುಚಿಕೊಳ್ಳಲಿಕ್ಕೆ ಮುಚ್ಚುಮರೆಯಲ್ಲಿ ನಡೆಸಿದ ಯತ್ನ. ಯಾವುದೇ ಕಾನೂನಿನ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸುವಾಗ, ಬಂಧನಕ್ಕೆ ಕಾರಣ ಏನು ಎಂಬುದನ್ನು ತಿಳಿಸಿ ಹೇಳಬೇಕು. ಆದರೆ ಪುರಾಯಸ್ಥ ಅವರ ಪ್ರಕರಣದಲ್ಲಿ ಈ ರೀತಿ ಕಾರಣಗಳನ್ನು ಅವರಿಗೆ ತಿಳಿಸಿಲ್ಲ. ಹೀಗಾಗಿ ಅವರ ಬಂಧನ ಮತ್ತು ನಂತರ ಅವರನ್ನು ವಶಕ್ಕೆ ಪಡೆದಿರುವುದು ಅಸಿಂಧುವಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಇನ್ನು ಗೌತಮ್ ನವಲಖಾ ಅವರ ಪ್ರಕರಣದಲ್ಲಿ, ನವಲಖಾ ಅವರು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ 370 ಸಾಕ್ಷಿಗಳಿದ್ದು, ವಿಚಾರಣೆ ಪೂರ್ಣಗೊಳ್ಳಲು ಬಹಳ ಕಾಲ ಬೇಕಾಗುತ್ತದೆ. ನವಲಖಾರ ಜೊತೆ ಆರೋಪಿಗಳಾಗಿದ್ದ ಇತರ ಆರು ಮಂದಿಯನ್ನು ಈಗಾಗಲೇ ಜಾಮೀನಿನ ಅಡಿ ಬಿಡುಗಡೆ ಮಾಡಲಾಗಿದೆ. ಇನ್ನಷ್ಟೇ ಅವರ ವಿರುದ್ಧ ದೋಷಾರೋಪಗಳನ್ನು ನಿಗದಿ ಮಾಡಬೇಕಾಗಿದೆ.

ಪುರಕಾಯಸ್ಥ ಅವರು ಎಂಟು ತಿಂಗಳಿನಿಂದ ಜೈಲಿನಲ್ಲಿ ಇದ್ದರು. ನವಲಖಾ ಅವರು ನಾಲ್ಕು ವರ್ಷಗಳಿಂದ ಜೈಲಿನಲ್ಲಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡಿದ್ದರು. ಇವರಿಬ್ಬರ ಪ್ರಕರಣದಲ್ಲಿ ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವವನ್ನು ನ್ಯಾಯ ವ್ಯವಸ್ಥೆಯ ಸೂತ್ರಗಳನ್ನು ಹೇಗೆ ಉಲ್ಲಂಘಿಸಲಾಯಿತು ಎಂಬುದನ್ನು ಕೋರ್ಟಿನ ಆದೇಶಗಳು ಹೇಳುತ್ತಿವೆ. ಪ್ರಜೆಗಳ ಹಕ್ಕುಗಳನ್ನು ಗೌರವಿಸದ ಕಾನೂನು ಜಾರಿ ವ್ಯವಸ್ಥೆಯು ಸರ್ವಾಧಿಕಾರಿ ವ್ಯವಸ್ಥೆಯಂತೆ ಕಾಣುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ನ್ಯಾಯಾಂಗದ ಮೇಲೆ ಜನರಿಗಿರುವ ಗೌರವವನ್ನು ಹೆಚ್ಚು ಮಾಡಿದೆ‌.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!