Friday, October 18, 2024

ಪ್ರಾಯೋಗಿಕ ಆವೃತ್ತಿ

ದೇವರಾಜೇಗೌಡ ಒಬ್ಬ ಮಾನಸಿಕ ಅಸ್ವಸ್ಥ: ಡಿ.ಕೆ.ಶಿವಕುಮಾರ್

“ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ನಾಲ್ಕು ಮಂತ್ರಿಗಳ ಕಮಿಟಿ ಮಾಡಿ, ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಎಲ್.ಆರ್. ಶಿವರಾಮೇಗೌಡ ಮೂಲಕ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು” ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮೇ 17ರಂದು ಹಾಸನದಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್, “ಈ ಆರೋಪ ಆಧಾರಹಿತ. ದೇವರಾಜೇಗೌಡ ಓರ್ವ ಮೆಂಟಲ್ ಕೇಸ್. ತಲೆ ಕೆಟ್ಟಿದೆ. ಆತನ ಆರೋಪಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು 100 ಕೋಟಿ ರೂ. ಆಫರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಕೊಡಲಿ. ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು” ಎಂದರು.

“ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ಆತನ ತಲೆ ಕೆಟ್ಟಿದೆ. ನಾನು ಯಾರ ಜೊತೆಯಲ್ಲೂ ಮಾತನಾಡಿಲ್ಲ. ನನ್ನ ಹತ್ತಿರ ಯಾವುದಕ್ಕೂ ನೂರಾರು ಜನ ಬರುತ್ತಿರುತ್ತಾರೆ. ಬರುವವರನ್ನು ಸ್ಕ್ಯಾನ್‌ ಮಾಡಲು ಆಗುತ್ತಾ” ಎಂದು ಡಿ ಕೆ ಶಿವಕುಮಾರ್‌ ಪ್ರಶ್ನಿಸಿದರು.

ಕೆಲವರಿಗೆ ನನ್ನ ಹೆಸರನ್ನ ಉಪಯೋಗಿಸಿಕೊಂಡರೆ ಮಾರ್ಕೆಟ್ ಸಿಗುತ್ತದೆ ಎಂದುಕೊಂಡಿದ್ದಾರೆ. ಅದಕ್ಕಾಗಿ ನನ್ನ ಹೆಸರನ್ನು ಬಳಸಿಕೊಳ್ಳುತ್ತಿರುತ್ತಾರೆ. ದೇವರಾಜೇಗೌಡ ಮೆಂಟಲ್ ಕೇಸ್. ಯಾರೋ ಏನೋ ಹೇಳಿದ್ರು ಎಂದುಕೊಂಡು ನಾನು ತಲೆ ಕೆಡಿಸಿಕೊಳ್ಳಲ್ಲ. 100 ಕೋಟಿ ಆಫರ್‌ಗೆ ಏನಾದರೂ ಸಾಕ್ಷ್ಯ ಇದ್ದರೆ ಆಗಬಹುದು. ಇಂತಹ ಆರೋಪಗಳು ಬಂದಾಗ ಅದನ್ನು ಸರಿಯಾಗಿ ತಿಳಿದುಕೊಳ್ಳದೆ ವರದಿ ಮಾಡುವ ಮಾಧ್ಯಮಗಳ ಬಗ್ಗೆ ನನಗೆ ಅನುಕಂಪ ಆಗ್ತಾ ಇದೆ. ಇದರಲ್ಲಿ ಏನಾದರೂ ಸತ್ಯ ಇದೆಯೇ, ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ಮಾಧ್ಯಮಗಳ ಜವಾಬ್ದಾರಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಕಿವಿಮಾತು ಹೇಳಿದರು.

“ಎಲ್ಲರೂ ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಸಂತ್ರಸ್ತೆಯರ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಯಾಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಮಳೆ, ಬೆಳೆಯಾಗಲಿ ಎಂದು ಎಲ್ಲರೂ ಪ್ರಾರ್ಥಿಸಿ” ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!