Friday, September 20, 2024

ಪ್ರಾಯೋಗಿಕ ಆವೃತ್ತಿ

ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಂದರೆ ಮಾರ್ಚ್‌ ಒಂದರಿಂದ ಈ ವರೆಗೆ 87 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಈ ವರ್ಷ 123 ಮಿ.ಮೀ. ಮಳೆ ಆಗಿದೆ. ಅದರಲ್ಲಿ 8 ಜಿಲ್ಲೆಗಳಲ್ಲಿ ಅತ್ಯಧಿಕ, 8 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹಣಾ ಸಾಮರ್ಥ್ಯದ ಶೇ. 20 ರಷ್ಟು ನೀರು ಸಂಗ್ರಹವಾಗಿದೆ. ರಾಜ್ಯದಾದ್ಯಂತ ಮಳೆ ಆಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕ್ರಮಗಳು ಮತ್ತು ಮುಂಗಾರು ಸಿದ್ಧತೆ ಮತ್ತು ಸಂಬಂಧಿಸಿದ ವಿಷಯಗಳ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಮಾಹಿತಿ ಪಡೆಯಲಾಯಿತು. ಹಾಗೂ ಕೆಲವು ಸೂಚನೆಗಳನ್ನು ನೀಡಲಾಯಿತು.

ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು. ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ. ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ. ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ನೀತಿ ಸಂಹಿತೆ ಜೂನ್ ಆರರ ವರೆಗೆ ಇದೆ. ಆದರೂ ತುರ್ತು ಕೆಲಸಗಳಿಗೆ ಗಮನ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಬಜೆಟ್ ಘೋಷಣೆಗಳಿಗೆ ಸಂಬಂಧಿಸಿದಂತೆ ಜೂನ್ ಕೊನೆಯ ವೇಳೆಗೆ ಆದೇಶ ಹೊರ ಬರಬೇಕು. ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರವಾಗಿ ಆಗಬೇಕು. ಚುನಾವಣೆ ಮುಗಿದಿದೆ. ನೀತಿ ಸಂಹಿತೆ ಸಡಿಲವಾಗಿದೆ. ಹೀಗಾಗಿ ಅಧಿಕಾರಿಗಳು ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಬೇಕು. ಮೈಸೂರಿನ ಎರಡು ಗ್ರಾಮಗಳಲ್ಲಿ ಕಾಲರಾ ಕಂಡು ಬಂದಿದೆ. ಇದಕ್ಕೆ ಕಾರಣ ಕಲುಷಿತ ನೀರು. ನೀರು ಕಲುಷಿತಗೊಳ್ಳಲು ಇಂಜಿನಿಯರುಗಳು ಕಾರಣ. ಕುಡಿಯಲು ನೀರು ಯೋಗ್ಯವೇ ಅಲ್ಲವೇ ಎಂಬುದನ್ನು ಪತ್ತೆ ಮಾಡದಿರುವುದು ದೊಡ್ಡ ಅಪರಾಧ ಎಂದು ಎಚ್ಚರಿಕೆ ನೀಡಿದರು.

82.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

ಪ್ರಸ್ತುತ ಮುಂಗಾರು ಹಂಗಾಮಿಗೆ 82.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 2024-25 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಅಂದರೆ ಮೇ 17 ರ ವರೆಗೆ 2.95 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಗೆ 68,600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. 23 ರಷ್ಟು ಸಾಧನೆಯಾಗಿದೆ ಎಂದರು.

2024 ರ ಮುಂಗಾರು ಹಂಗಾಮಿಗೆ ಸಹಾಯಧನದಡಿ 5,52,350 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 9,01,397 ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಿದೆ. ಮೇ 22 ರ ವರೆಗೆ 5492.44 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 14,608.49 ಕ್ವಿಂಟಾಲ್‌ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಲಭ್ಯವಿದೆ. ಬೇಡಿಕೆಗೆ ತಕ್ಕಂತೆ ಸಂಬಂಧಿಸಿದ ಸಂಸ್ಥೆಗಳಿಂದ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಏಪ್ರಿಲ್‌ 1, 2024 ರಿಂದ 3.22 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಮಾರಾಟವಾಗಿದ್ದು, ಒಟ್ಟು 14,86,067 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಹೆಚ್.ಕೆ. ಪಾಟೀಲ್‌, ಕೆ.ಹೆಚ್.‌ ಮುನಿಯಪ್ಪ, ಚೆಲುವರಾಯಸ್ವಾಮಿ, ಬೈರತಿ ಸುರೇಶ್‌, ಶಿವರಾಜ್‌ ತಂಗಡಗಿ, ಪ್ರಿಯಾಂಕ್‌ ಖರ್ಗೆ, ರಹೀಂ ಖಾನ್‌, ಶಿವಾನಂದ ಪಾಟೀಲ, ಎಸ್.‌ ಎಸ್.‌ ಮಲ್ಲಿಕಾರ್ಜುನ್‌, ಸಂತೋಷ್‌ ಲಾಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!