Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತರಖಂಡದಲ್ಲಿ ಚಾರಣಕ್ಕೆ ಹೋಗಿದ್ದ ರಾಜ್ಯದ 9 ಜನ ಸಾವು: ಸ್ಥಳಕ್ಕೆ ದೌಡಾಯಿಸಿದ ಸಚಿವ ಕೃಷ್ಣ ಭೈರೇಗೌಡ

ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಉತ್ತರಖಂಡಕ್ಕೆ ಸಿಎಂ ಕಳುಹಿಸಿಕೊಟ್ಟಿದ್ದು, ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ವಹಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು.

ಮೃತರ ಸಂಖ್ಯೆ 9 ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ.

ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಭರವಸೆ ನೀಡಿದ್ದಾರೆ.

ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!