Sunday, May 19, 2024

ಪ್ರಾಯೋಗಿಕ ಆವೃತ್ತಿ

ಚಾಮರಾಜನಗರ |ಇಂಡಿಗನತ್ತ ಮತಗಟ್ಟೆ ಧ್ವಂಸ; ಅಧಿಕಾರಿಗಳ ಮೇಲೆ ಹಲ್ಲೆ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಕೆಲವೆಡೆ ಮತದಾನ ಬಹಿಷ್ಕಾರ ಮಾಡಲಾಗಿದೆ. ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿರುವ ಗ್ರಾಮಸ್ಥರ ಮನವೊಲಿಸಲು ಗ್ರಾಮಕ್ಕೆ ತೆರಳಿದ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಕಲ್ಲುತೂರಾಟ ನಡೆಸಿ, ಮತ ಯಂತ್ರಗಳನ್ನು ಸುಟ್ಟು ಹಾಕಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮತದಾನ ಬಹಿಷ್ಕಾರ ಹಾಕಿದ್ದ ಮತದಾರರ ಮನವೊಲಿಸಲು ಗ್ರಾಮಕ್ಕೆ ತಹಶೀಲ್ದಾರ್ ಆಗಮಿಸಿದ್ದ ವೇಳೆ ಘರ್ಷಣೆ ಆರಂಭವಾಗಿದೆ. ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದ ಅಧಿಕಾರಿಗಳ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳ ಜೊತೆ ಮಾತಿನ‌ ಚಕಮಕಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ಮತಗಟ್ಟೆ ಧ್ವಂಸ ಮಾಡಿರುವುದಷ್ಟೇ ಅಲ್ಲ, ಘಟನಾ ಸ್ಥಳದಲ್ಲಿ ಲಾಠಿ ಪ್ರಹಾರ ಹಾಗೂ ಕಲ್ಲು ತೂರಾಟ ಕೂಡ ನಡೆದಿದೆ. ಈ ಘಟನೆಯಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರು ಇಂಡಿಗನತ್ತ ಗ್ರಾಮಕ್ಕೆ ಇಲ್ಲಿಯವರೆಗೂ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಈ ಹಿನ್ನೆಲೆ, ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ತಹಸೀಲ್ದಾರ್ ಗುರು ಪ್ರಸಾದ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಇಒ ಉಮೇಶ್, ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನೀವು ಮತದಾನ ಮಾಡಿ ಎಂದು ಮನವಿ ಮಾಡಿದ್ದರು.

ಈ ವೇಳೆ ಅಧಿಕಾರಿಗಳ ಒತ್ತಾಯದ ಮೇರೆಗೆ ಮತ ಚಲಾವಣೆ ಮಾಡಲು ಕೆಲವು ಮತದಾರರು ಮುಂದೆ ಬಂದಿದ್ದರು. ಈ ಸಂದರ್ಭದಲ್ಲಿ ಮತ್ತೊಂದು ಗುಂಪಿನವರು ಮತದಾನ ಬಹಿಷ್ಕಾರ ಮಾಡಿರುವ ಕುರಿತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಷ್ಟಾದರೂ ಏಕೆ ನಮಗೆ ಇಷ್ಟೊಂದು ಒತ್ತಾಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಮಾತಿನ‌ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಕೆಲ ಮಂದಿ ಮತಗಟ್ಟೆಗೆ ನುಗ್ಗಿ ಪೀಠೋಪಕರಣ ಹಾಗೂ ವಿದ್ಯುನ್ಮಾನ ಮತ ಯಂತ್ರ ನಾಶ ಪಡಿಸಿ ಮತಗಟ್ಟೆ ಧ್ವಂಸ ಮಾಡಿದ್ದಾರೆ. ಈ ವೇಳೆ ಪೋಲಿಸರು‌ ಮತ್ತು ಸ್ಥಳೀಯ ವಾಸಿಗಳ ನಡುವೆ ನಡೆದ ಗದ್ದಲದಲ್ಲಿ ಹಲವು‌ ಮಂದಿ ಮಹಿಳೆಯರ ತಲೆಗೆ ಪೆಟ್ಟಾಗಿದೆ.

ಮತ ಹಾಕುವವರಿಗೆ ನೀವು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಮತಯಂತ್ರ ಹಾಗೂ ಮತದಾನಕ್ಕೆ ತೆಗೆದುಕೊಂಡು ಹೋಗಲಾಗಿದ್ದ ಪರಿಕರಗಳನ್ನು ಸುಟ್ಟು ಹಾಕಿದ್ದಲ್ಲದೆ ಶಾಲೆಯ ಕಿಟಕಿ ಹಾಗೂ ಹಲವು ಸಾಮಗ್ರಿಗಳನ್ನು ಧ್ವಂಸ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಲ್ಲುತೂರಾಟದಲ್ಲಿ ತಹಸೀಲ್ದಾರ್ ಗುರುಪ್ರಸಾದ್ ಇನ್ಸ್‌ಪೆಕ್ಟರ್ ಜಗದೀಶ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!