Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಚಿವ ನಾಗೇಶ್ ರಾಜಿನಾಮೆಗೆ ಬಿಎಸ್ಪಿ ಆಗ್ರಹ

ಮನುಸ್ಮೃತಿ ರೂಪದ ಪಠ್ಯಪುಸ್ತಕ ರಚನೆ ಹಿಂಪಡೆದು ಹಿಂದಿನ‌ ಪಠ್ಯವನ್ನೇ ಬೋಧಿಸಬೇಕು.ಪಠ್ಯಪುಸ್ತಕ ಗೊಂದಲಕ್ಕೆ ಕಾರಣರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರು ರಾಜೀನಾಮೆ ನೀಡಬೇಕೆಂದು ಬಿಎಸ್ಪಿ ಆಗ್ರಹಿಸಿದೆ.

ಮಂಡ್ಯ ನಗರದಲ್ಲಿರುವ ಮೈಸೂರು – ಬೆಂಗಳೂರು ಹೆದ್ದಾರಿಯ ಜೆ.ಸಿ ವೃತ್ತದಲ್ಲಿ ಮಂಗಳವಾರ ಸಂಜೆ ಜಮಾವಣೆಗೊಂಡ ಜಿಲ್ಲಾ ಬಿಎಸ್ಪಿ ಪದಾಧಿಕಾರಿಗಳು ಪಂಜುಗಳನ್ನು ಹಿಡಿದು ಬಿಜೆಪಿ ಸರ್ಕಾರ ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಮೂಲಕ ಈ ನೆಲದ ದಲಿತರ, ಶೂದ್ರರ ಹಾಗೂ ಮಹಿಳೆಯರ ಬರಹಗಳಿಗೆ ತಿಲಾಂಜಲಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್ ಮಾತನಾಡಿ, 2022ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಗಳಲ್ಲಿ ಭಗಾವನ್ ಬುದ್ಧರು, ಭಗವಾನ್ ಮಹಾವೀರರಿಗೆ ಏಕವಚನ ಪದಗಳನ್ನು ಬಳಸಲಾಗಿದೆ.

ಬಸವಣ್ಣ ಅಂಬೇಡ್ಕರ್ ಪಾಠಗಳಿಗೆ ಕತ್ತರಿ‌ ಪ್ರಯೋಗ ಮಾಡಲಾಗಿದೆ. ಬ್ರಾಹ್ಮಣರ ವ್ಯಕ್ತಿಗಳಿಗೆ ಗೌರವಯುತ ಪದಗಳನ್ನು ಬಳಸಲಾಗಿದೆ, ಇಷ್ಟುಂದೋ ತಾರತಮ್ಯ ಬಿತ್ತುವ ಮತ್ತು ಬ್ರಾಹ್ಮಣ್ಯ ನೀತಿ ಹೇರುವ ಮನಸ್ಸಿಗಳ ಪಠ್ಯಗಳನ್ನು ವಿದ್ಯಾರ್ಥಿಗಳು ಓದಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೀವವಿರೋಧಿ ಮತ್ತು ಅಸಮಾನತೆಯುಳ್ಳ ಮನುಸ್ಮೃತಿ ರೂಪದ ಪಠ್ಯಪುಸ್ತಕ ರಚನೆ ಮಾಡಿರುವ ಪರಿಷ್ಕರಣಾ ಸಮಿತಿ ವಜಾ ಮಾಡಬೇಕು, ಅಧ್ಯಕ್ಷ ಅಜ್ಞಾನಿ ರೋಹಿತ್‌ ಚಕ್ರತೀರ್ಥನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ತಪ್ಪುಗಳನ್ನೇ ಸಮರ್ಥಿಸಿಕೊಳ್ಳುವ ಮತ್ತು ನಾಡದ್ರೋಹಿಗಳ ಪರ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಪೆರಿಯಾರ್, ಅಂಬೇಡ್ಕರ್,ಭಗತ್ ಸಿಂಗ್, ಸಾವಿತ್ರಿಬಾಪುಲೆ ಅವರ ಕುರಿತ ಬರಹಗಳನ್ನು ಬಿಟ್ಟು ಸನಾತನಿ ಜಾತಿವಾದಿ ಬ್ರಾಹ್ಮಣಶಾಹಿ ಮತ್ತು ಮಹಿಳಾ ವಿರೋಧಿ ಬರಹಗಳನ್ನು ಸೇರಿಸಲಾಗಿದೆ. ಇಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಿ ಸುಜ್ಞಾನಿಗಳಾಗುತ್ತಾರಾ ಎಂದು ಪ್ರಶ್ನಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು, ಮಾನಸಿಕ ರೋಗಿಷ್ಠನಂತೆ ವರ್ತಿಸಿರುವ ರೋಹಿತ್ ಚಕ್ರತೀರ್ಥ ಒಬ್ಬ ನಾಡ ದ್ರೋಹಿ ಮಾತ್ರ ಅಲ್ಲ ದೇಶ ದ್ರೋಹಿ ಕೂಡ. ಇಂದು ನಾಡಗೀತೆಗೆ ಅವಮಾನ ಮಾಡಿದವನು,ನಾಳೆ ರಾಷ್ಟ್ರ ಗೀತೆ ಅವಮಾನ ಮಾಡಲ್ಲಾ ಅಂತ ಯಾವ ಗ್ಯಾರಂಟಿ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ಪದಾಧಿಕಾರಿಗಳಾದ ಕುಮಾರ್, ಮುರುಗನ್, ರವಿಗೌಡ, ಪ್ರದೀಪ್, ರೋಹಿತ್, ಆಟೋ ಗುರುಶಂಕರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!