Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ಉದ್ಘಾಟನೆಗೂ ಮುನ್ನ ಕೊಚ್ಚಿ ಹೋದ ₹12 ಕೋಟಿ ವೆಚ್ಚದ ಸೇತುವೆ !

ಬಿಹಾರ ದ ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ನದಿಯಲ್ಲಿ ಕೊಚ್ಚಿ ಹೋಗಿದೆ. ಕಳಪೆ ಕಾಮಗಾರಿ ಈ ದುರಂತಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇತುವೆ ಕೊಚ್ಚಿ ಹೋಗುತ್ತಿರುವ ದೃಶ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಸೇತುವೆ ನಿರ್ಮಿಸಿ ಒಂದು ವರ್ಷವೂ ಕಳೆದಿರಲಿಲ್ಲ. ಉದ್ಘಾಟನೆಯೂ ಕೂಡ ನೆರವೇರಿರಲಿಲ್ಲ. ಗುತ್ತಿಗೆದಾರ ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸಿಕ್ತಿ ಕ್ಷೇತ್ರದ ಶಾಸಕ ವಿಜಯ್ ಮಂಡಲ್ ಮಾತನಾಡಿ, ಈ ಸೇತುವೆಯನ್ನು ಜಿಲ್ಲೆಯ ಗ್ರಾಮೀಣ ಕಾಮಗಾರಿ ಇಲಾಖೆ ಸಿದ್ಧಪಡಿಸಿದೆ. ನೆಲದ ಮೇಲೆಯೇ ಕಂಬಗಳನ್ನು ಹೂತು ಸಿದ್ಧಪಡಿಸಲಾಗಿದೆ. ಕೂಡು ರಸ್ತೆ ಕೂಡ ನಿರ್ಮಾಣವಾಗಿಲ್ಲ. ಸುಮಾರು 100 ಮೀಟರ್ ಉದ್ದದ ಈ ಸೇತುವೆಗೆ ಸುಮಾರು 12 ಕೋಟಿ ರೂ. ವೆಚ್ಚವಾಗಿದ್ದು, ಉದ್ಘಾಟನೆಯೂ ಆಗಿರಲಿಲ್ಲ ಎಂದು ದೂರಿದ್ದಾರೆ.

ಸೇತುವೆ ನಿರ್ಮಾಣದಲ್ಲಿ ಗುಣಮಟ್ಟವಿಲ್ಲದ ವಸ್ತುಗಳ ಬಳಕೆಯನ್ನು ಜನರು ಮಾಧ್ಯಮಗಳ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಸೇತುವೆಯ ಮಾರ್ಗವನ್ನು ಪುನಃಸ್ಥಾಪಿಸಲು ಇಲಾಖೆಯಿಂದ ಪ್ರಯತ್ನಗಳು ಪ್ರಾರಂಭವಾಗಿದ್ದವು, ಆದರೆ ಅದಕ್ಕೂ ಮೊದಲು ಸೇತುವೆಯೇ ಕುಸಿದಿದೆ.

ಬಿಹಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೇತುವೆ ಕುಸಿತದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ವರ್ಷ ಜೂನ್‌ನಲ್ಲಿ ಸುಲ್ತಂಗಂಜ್‌ನಲ್ಲಿ ಗಂಗಾ ನದಿಗೆ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದಿತ್ತು. ಅದರ ನಂತರ, ಈ ವರ್ಷದ ಮಾರ್ಚ್‌ನಲ್ಲಿ ಸುಪೌಲ್‌ನಲ್ಲಿ ಕೋಸಿ ನದಿಗೆ ನಿರ್ಮಿಸಲಾಗಿದ್ದ ಸೇತುವೆಯ ಸ್ಲ್ಯಾಬ್ ಕಳಚಿ ಬಿದ್ದಿತ್ತು. ಈ ವೇಳೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು.

ಅದೇ ಸಮಯದಲ್ಲಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಬಂಕಾದ ಬೆಲ್‌ಹಾರ್‌ನಲ್ಲಿ ಲೋಹಗರ್ ನದಿಯ ಮೇಲೆ ನಿರ್ಮಿಸಲಾಗಿದ್ದ ಸೇತುವೆ ಪ್ರವಾಹಕ್ಕೆ ಸಿಕ್ಕಿ ಕುಸಿದಿತ್ತು. ಇದರಿಂದಾಗಿ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳ ಜನರ ಸಂಚಾರ ಬಂದ್ ಆಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!