Thursday, October 24, 2024

ಪ್ರಾಯೋಗಿಕ ಆವೃತ್ತಿ

‘ಸೇವೆ ಎಂಬುದು ದೊಡ್ಡವರ ಆಸ್ತಿಯಲ್ಲ, ಸಾಮಾನ್ಯರಿಗೂ ಪದ್ಮಶ್ರೀ ಸಿಗುತ್ತದೆ’ ; ಕೆ.ಎಸ್‌ ರಾಜಣ್ಣ

25 ವರ್ಷದ ಹಿಂದೆ ದೊಡ್ಡವರಿಗೆ ಹಾಗೂ ಬಲಾಢ್ಯರಿಗೆ ಸಿಗುತ್ತಿದ್ದ ಈ ಪದ್ಮಶ್ರೀ ಪ್ರಶಸ್ತಿ ನನ್ನಂತಹ ಸಾಮಾನ್ಯನಿಗೂ ಪದ್ಮಶ್ರೀ ಸಿಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ, ಈಗ ಸೇವೆ ಎಂಬುದು ದೊಡ್ಡವರ ಆಸ್ತಿಯಲ್ಲ, ಅದರಲ್ಲಿ ತೊಡಗಿಕೊಂಡವರಿಗೂ ಪ್ರಶಸ್ತಿ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಕೆ.ಎಸ್‌.ರಾಜಣ್ಣ ಹೇಳಿದರು.

ಮಂಡ್ಯನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ನಾಗರಿಕ ಅಭಿನಂದನಾ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದಿರುವ ಮೀರಾ ಶಿವಲಿಂಗಯ್ಯ ಅವರಿಗೆ ನಾಗರಿಕ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ಸಿಹಿಯನ್ನು ಯಾರೂ ಕೂಡ ಕೊಡಲು ಸಾಧ್ಯವಿಲ್ಲ, ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ನೀಡಿರುವುದಕ್ಕೆ ಈ ಮಂಡ್ಯ ಮಣ್ಣಿಗೆ ಋಣಿಯಾಗಿರುತ್ತೇನೆ, ಹಾಗೆಯೇ ಸಾಮಾನ್ಯನ ಸೇವೆಗೂ ಪ್ರಶಸ್ತಿ ಸಿಗುತ್ತದೆ ಎಂಬುವುದು ನಂಬಿಕೆಗೆ ಅರ್ಹವಾಗಿದೆ ಎಂದರು.

ಪದ್ಮಶ್ರೀ ಸಿಕ್ಕಿದೆ ಎಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ, ಇದು ನನಗೆ ಸಿಕ್ಕ ಗೌರವ ಅಲ್ಲ ಅದು ನಿಮಗೆ ಸಿಕ್ಕ ಗೌರವವಾಗಿದೆ, ಈ ಮಂಡ್ಯ ಜಿಲ್ಲೆಯ ಸಿಹಿಯನ್ನು ಯಾವ ದೇಶವೂ ಕೊಡುವುದಕ್ಕೆ ಆಗುವುದಿಲ್ಲ, ಅದನ್ನು ಕೊಡುವುದು ನಮ್ಮ ಹೆಮ್ಮೆಯ ಜಿಲ್ಲೆ ಮಂಡ್ಯದಿಂದ ಮಾತ್ರ, ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ತೆಗೆದುಕೊಂಡಿರುವುದು ನನಗೆ ಸಮಾಧಾನ ತರಿಸಿದೆ ಎಂದರು.

ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಮಾತನಾಡಿ, ರಾಜಣ್ಣ ಅವರು ತಮಗಿರುವ ಅಂಗವಿಕಲತೆಯನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡು ದೇಶವನ್ನು ಪ್ರತಿನಿಧಿಸಿ ಪ್ಯಾರಾ ಒಲಂಪಿಕ್‌ನಲ್ಲಿ ಪದಕ ಗೆದ್ದು ವಿಶ್ವದಲ್ಲೇ ಮಂಡ್ಯದ ಹೆಸರನ್ನು ಪ್ರಚುರ ಪಡಿಸಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ, ಯಾರ ಸಾಧನೆ ಮನುಕುಲಕ್ಕೆ ಹಾಗೂ ಸಮುದಾಯಕ್ಕೆ ಪ್ರೇರೇಪಣೆ ಆಗುವಂತಿದ್ದರೆ ಮಾತ್ರ ಪ್ರಶಸ್ತಿ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ವ್ಯಕ್ತಿತ್ವದಿಂದ ಒಳಿತಾಗುತ್ತದೆ ಎಂಬುದಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತ ಕೆ.ಎಸ್‌.ರಾಜಣ್ಣ ಹಾಗೂ ತಾವು ಕಲಿತ ವಿವಿಯಲ್ಲಿಯೇ ಡಾಕ್ಟರೇಟ್‌ ‍ಪಡೆದ ಮೀರಾ ಶಿವಲಿಂಗಯ್ಯ ಅವರು ಸಾಕ್ಷಿಯಾಗಿ ನಿಲ್ಲುತ್ತಾರೆ, ಸಾಧನೆಯನ್ನು ಮಾಡಿರುವುದನ್ನು ಗುರುತಿಸಬೇಕಾದರೆ ಅದು ಒಳ್ಳೆಯ ಮನಸಿನಿಂದ ಸಾಧ್ಯವಾಗುತ್ತದೆ. ಅದನ್ನು ದ್ರೋಣಾಚಾರ್ಯರು ಮಹಾಭಾರತದಲ್ಲಿಯೂ ಹೇಳಿದ್ದಾರೆ, ನೀವಿಬ್ಬರೂ ಸಹ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೀರಾ ಹಾಗಾಗಿ ನಿಮಗೆ ಗೌರವ ಸಿಕ್ಕಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಮಾತನಾಡಿ, ರಾಜಣ್ಣ ಮತ್ತು ಮೀರಾ ಶಿವಲಿಂಗಯ್ಯ ಅವರ ಸಾಧನೆ ಎಲ್ಲರ ಮನ ಗೆದ್ದಿದೆ, ರಾಜಣ್ಣ ಅವರನ್ನು ದೇಶದ 806 ಜಿಲ್ಲೆಗಳಲ್ಲಿ ಹಾಗೂ 132 ಪದ್ಮಶ್ರೀ ವಿಜೇತರ ಪಟ್ಟಿಯಲ್ಲಿ ಮಂಡ್ಯ ಮುಕುಟಕ್ಕೆ ಪ್ರಶಸ್ತಿ ಒಲಿದಿದೆ ಎಂದರೆ ಇದು ಅಸಾಮಾನ್ಯವಾದುದಲ್ಲ, ಐಶ್ವರ್ಯಾ ಮತ್ತು ಅಧಿಕಾರವನ್ನು ಕೆಲವರು ಆರಾಧಿಸುವವರ ಕಾಲಘಟ್ಟದಲ್ಲಿ ಸೇವೆಯನ್ನು ಆರಾಧಿಸುವವರನ್ನ ಗುರುತಿಸಿ ಗೌರವಿಸುವುದು ಉತ್ತಮ ಕೆಲಸ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಮತ್ತು ಕರ್ನಾಟಕ ರಾಜ್ಯ ಮುಕ್ಯ ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದಿರುವ ಮೀರಾ ಶಿವಲಿಂಗಯ್ಯ ಅವರನ್ನು ದಂಪತಿ ಸಮೇತ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು, ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಎಚ್‌.ಪಿ.ಮಂಜುಳಾ, ರಾಜ್ಯ ಅಂಗವಿಲಕರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್‌.ಚಲುವರಾಜು, ಸಮಿತಿಯ ಅಧ್ಯಕ್ಷ ಕೆ.ಟಿ.ಹನುಮಂತು, ಉಪಾಧ್ಯಕ್ಷ ಎಂ.ಎನ್‌.ಶ್ರೀಧರ್, ಕಾರ್ಯದರ್ಶಿಗಳಾದ ಕಾರಸವಾಡಿ ಮಹದೇವು, ಕಿಲಾರ ಕೃಷ್ಣೇಗೌಡ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!