✍️ ಡಿ.ಐ. ಅಬೂಬಕರ್, ಕೈರಂಗಳ
ಕೇರಳದ ಮಾದರಿ ಶಾಸಕ ಗಣೇಶ್ ಕುಮಾರ್ ಕುರಿತು ತಿಂಗಳ ಹಿಂದೆ ನಾನು ಬರೆದಿದ್ದ ಲೇಖನವೊಂದರಲ್ಲಿ ಅಂತಹ ಒಬ್ಬ ಶಾಸಕ ನಮ್ಮ ಕರ್ನಾಟಕದಲ್ಲೂ ಇರಬೇಕಿತ್ತು ಎಂದು ಆಗ್ರಹ ಪಟ್ಟಿದ್ದೆ. ಅದಕ್ಕೂ ಮಿಗಿಲಾದ ಶಾಸಕರೊಬ್ಬರು ಇದೀಗ ಕರ್ನಾಟಕದ ರಾಜಕೀಯದಲ್ಲಿ ಮೂಡಿ ಬಂದಿದ್ದಾರೆ!, ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್.
ಚುನಾವಣೆಯಲ್ಲಿ ಗೆದ್ದು ಇನ್ನೂ ವಿಧಾನ ಸಭೆ ಪ್ರವೇಶಿಸುವ ಮೊದಲೇ ಕ್ಷೇತ್ರದ ಪ್ರತಿಯೊಂದು ಬಡಜನರ ಮನೆಗಳಿಗೆ ಭೇಟಿ ನೀಡಿ, ಹಿರಿಯರನ್ನು ತಬ್ಬಿ, ಯುವಕರ ಬೆನ್ನು ತಟ್ಟಿ, ಪ್ರಾಯದವರ ಜೊತೆ ಗುಡಿಸಲ ಮೆಟ್ಟಲಲ್ಲಿ ಕೂತು ಆತ್ಮೀಯವಾಗಿ ಮಾತಾಡಿಸಿ ಆರೋಗ್ಯ, ಶಿಕ್ಷಣ, ಆರ್ಥಿಕ ಸಮಸ್ಯೆ, ಸರಕಾರದಿಂದ ಆಗಬೇಕಾದ ಕಾರ್ಯ, ಓಟರ್ ಐಡಿ, ಆಧಾರ್, ರೇಶನ್ ಕಾರ್ಡ್ ಮುಂತಾದ ಎಲ್ಲವನ್ನೂ ವಿಚಾರಿಸಿ ಅತ್ಯಗತ್ಯವೆಂದು ಕಂಡು ಬಂದಲ್ಲಿ ಆರ್ಥಿಕ ಸಹಾಯನ್ನೂ ನೀಡುತ್ತಾ ಬರುತ್ತಿರುವ ಒಂದು ವೀಡಿಯೋ ಕ್ಲಿಪ್ ನನ್ನ ಗಮನಕ್ಕೆ ಬಂತು.
ಒಂದು ಬಡ ಮನೆಯ ವಿದ್ಯಾರ್ಥಿಗೆ ಅವನ ನಂಬರ್ ಪಡೆದು ಸ್ಪಾಟ್ ನಲ್ಲೇ ಇಪ್ಪತ್ತು ಸಾವಿರ ರೂ. ಗೂಗುಲ್ ಪೇ ಮಾಡಿದ ದೃಶ್ಯ ಕಂಡಾಗ ಇದೇನಪ್ಪಾ ಹೊಸ ರಾಜಕೀಯ ನಾಟಕ ಅಂದುಕೊಂಡೆ. ನಿಮಗೂ ಹೀಗೆ ಅನ್ನಿಸಿರಬೇಕು. ಇಷ್ಟೇನಾ? ಯಾವನೋ ಒಬ್ಬ ರಾಜಕಾರಣಿಯ ಬೋಗಸ್ ಡ್ರಾಮಾ ಕಂಡು ಭಾರೀ ಹೊಗಳ್ತಿದ್ದಾನಲ್ಲಾ ಎಂದು ನಿಮಗನ್ನಿಸಿರುವುದರಲ್ಲಿ ಡೌಟೇ ಇಲ್ಲ. ಆದರೆ ಕುತೂಹಲದಿಂದ ವಿಷಯ ಜಾಲಾಡಿದಾಗ ಅರಿವಿಗೆ ಬಂದ ಮಾಹಿತಿಗಳನ್ನು ಅರಿತಾಗ ನಿಜಕ್ಕೂ ನಿಬ್ಬೆರಗಾಗಿ ಹೋದೆ. ಈ ಬರಹವನ್ನು ಪೂರ್ತಿ ಓದಿದಾಗ ನೀವೂ ನಿಬ್ಬೆರಗಾಗುವುದು ಗ್ಯಾರಂಟಿ!

ಪ್ರದೀಪ್ ಈಶ್ವರ್ ಬರೀ 34 ರ ತರುಣ. ಸಾಧನೆಗೆ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಇವರೇ ಸಾಕ್ಷಿ.
ರಾಜಕೀಯಕ್ಕೆ ಹೊಸಬರಾದ ಇವರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದು ಬಿಜೆಪಿಯ ಘಟಾನುಘಟಿ ಮುಖಂಡ, ಆರೋಗ್ಯ ಸಚಿವ, ಹಣದಲ್ಲೂ ಕುಬೇರ, ಬಿಜೆಪಿಯ 40% ಕಮಿಶನ್ನಿನ ಪಿತಾಮಹ ಎಂದು ಪ್ರದೀಪ್ ಈಶ್ವರ್ ರವರೇ ಪ್ರಚಾರ ಭಾಷಣದಲ್ಲಿ ಕರೆದ ಡಾಕ್ಟರ್ ಕೆ.ಸುಧಾಕರ್ ಅವರ ವಿರುದ್ಧ.
” ಕಾಂಗ್ರೆಸ್ ಆ ಹುಡುಗನನ್ನು ಬೇಕೆಂತಲೇ ಸೋಲಿಸಲು ಕಣಕ್ಕಿಳಿಸಿದೆ” ಎಂಬ ಕುಹಕದ ಮಾತು ಕೂಡಾ ಕೇಳಿ ಬಂದಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಚಿಕ್ಕಬಳ್ಳಾಪುರ ಕ್ಷೇತ್ರದ ಫಲಿತಾಂಶವನ್ನು ಟಿವಿ ಮಾಧ್ಯಮಗಳು ಬಿತ್ತರಿಸಿದ್ದು ” ಶಾಕಿಂಗ್ ರಿಸಲ್ಟ್ ” ಎಂಬ ಒಣಕೆ ದಪ್ಪದ ಶೀರ್ಷಿಕೆಯೊಂದಿಗಾಗಿತ್ತು!!. ಪ್ರದೀಪ್ ಈಶ್ವರ್ 11 ಸಾವಿರ ಮತಗಳ ಅಂತರದಲ್ಲಿ ಬಿಜೆಪಿಯ ಘಟಾನುಘಟಿ ಸಚಿವ ಡಾಕ್ಟರ್ ಸುಧಾಕರ್ ರನ್ನು ಕೆಡವಿ ಹಾಕಿದ್ದರು ! ಈ ವಾರ್ತೆಯಿಂದ ಇಡೀ ಬಿಜೆಪಿ ಪಕ್ಷ ಹೈರಾಣಾಗಿ ಹೋಗಿತ್ತು. ಯಾರೂ ನಿರೀಕ್ಷಿಸಿಯೇ ಇರದ ಈ ಅಚ್ಚರಿಯ ವಿಜಯ ರಾಜ್ಯದ ರಾಜಕಾರಣದ ಇತಿಹಾಸದ ದಾಖಲೆಗಳಲ್ಲೊಂದಾಗಿ ಉಳಿಯಲಿದೆ.
ಮತ್ತಷ್ಟು ಕುತೂಹಲ ಕೆರಳಿ, ಮತ್ತಷ್ಟು ಮಾಹಿತಿ ಕಲೆಹಾಕಿದಾಗ ಪ್ರದೀಪ್ ಈಶ್ವರ್ ಎಂಬ ಈ ತರುಣ ಅದ್ಭುತವಾಗಿ ಕಾಣತೊಡಗುತ್ತಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಅವರ ಮಾತಿನ ಮೋಡಿ ಯಾರನ್ನೇ ಆದರೂ ಲೋಹ ಚುಂಬಕದಂತೆ ಸೆಳೆದು ನಿಲ್ಲಿಸುವಂತಿತ್ತು. ಮಾತಿನ ಹಿಡಿತ, ಸಿದ್ಧರಾಮಯ್ಯನವರ ಹಾಗೆ ಸಭ್ಯತೆ, ಲಘು ಹಾಸ್ಯ, ಪ್ರಾಯಕ್ಕೂ ಮೀರಿದ ಪಕ್ವತೆ, ಬೆರಗು ಹುಟ್ಟಿಸುವಂತಹವುಗಳು. ಅಸ್ಖಲಿತವಾಗಿ ಹರಳು ಹುರಿದಂತೆ ಸ್ವಚ್ಛ ಕನ್ನಡದಲ್ಲಿ ಅವರ ಭಾಷಣ ಕೇಳಿದಾಗ ಭಾಷಣ ಅಂದರೆ ಇದು ಎಂದನ್ನಿಸಿತ್ತು.
ಅವರ ಮಾತಿನ ಮೋಡಿಗೆ ಒಂದು ಉದಾಹರಣೆ:
” ನಾನು ಒಂದು ರೂಪಾಯಿ ಮುಟ್ಟಿದ್ದರೆ ಪ್ರೂವ್ ಮಾಡಲಿ” ಎಂಬ ಎದುರಾಳಿ ಬಿಜೆಪಿಯ ಸುಧಾಕರ್ ರವರ ಮಾತನ್ನು ಉಲ್ಲೇಖಿಸುತ್ತಾ; ಅವರು ಕರೆಕ್ಟಾಗಿ ಹೇಳಿದ್ರು, ಒಂದು ರೂಪಾಯಿ ಯಾರಾದರೂ ತಗೋತರಾ, ಅವರದ್ದು ಏನಿದ್ದರೂ ಲಕ್ಷ, ಕೋಟಿಯ ಲೆಕ್ಕ” ಅಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತ್ತು.
ಅದೇ ಕ್ಷೇತ್ರದಲ್ಲಿ ಮೂರು ಬಾರಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದ ಡಾಕ್ಟರ್ ಸುಧಾಕರ್ ಅವರನ್ನು ” ಅವರು ಮೇ ಹತ್ತರ ತನಕ ಶಾಸಕರು, ನಂತರ ಮಾಜಿ ಶಾಸಕರು “ಅಂದಿದ್ದ ಪ್ರದೀಪ್ ಅವರಲ್ಲಿ ಫಲಿತಾಂಶದ ನಂತರ ಮೀಡಿಯಾದವರು ; ನೀವು ಅಷ್ಟು ನಿಖರವಾಗಿ ಹೇಗೆ ಹೇಳಿದಿರಿ ಅಂದಾಗ ; ಪರೀಕ್ಷೆ ಬರೆದವನಿಗೆ ರಿಸಲ್ಟ್ ಬರುವ ಮೊದಲೇ ಫಲಿತಾಂಶ ಗೊತ್ತಿರುತ್ತಲ್ಲಾ ಅಂದಿದ್ದರು. ಅವರ ಭ್ರಷ್ಟಾಚಾರ, ಪ್ರಶ್ನಿಸಿದವರ ಮೇಲೆ ಕೇಸ್ ಫಿಕ್ಸ್ ಮಾಡಿಸೋದು, ದರ್ಪ ಮುಂತಾದ್ದು ಅವರ (ಡಾ.ಸುಧಾಕರ್) ಸೋಲಿಗೆ ಕೆಲವು ಕಾರಣಗಳಾದರೂ ನನ್ನ ಸಮಾಜ ಸೇವೆಯಿಂದ ಗಳಿಸಿದ ಒಳ್ಳೆಯತನ ನನ್ನ ಭರ್ಜರಿ ಗೆಲುವಿಗೆ ಕಾರಣವಾಯಿತು ಅನ್ನುತ್ತಾರೆ.

ಪ್ರದೀಪ್ ಈಶ್ವರ್ ರಾಜಕೀಯಕ್ಕೆ ಹೊಸಬರಾದರೂ ಚಿಕ್ಕಬಳ್ಳಾಪುರದಲ್ಲಿ ಹೊಸಬರೇನಲ್ಲ, ತನ್ನ ಸಾಧನೆ, ಶೈಕ್ಷಣಿಕ ಕ್ರಾಂತಿ, ಲೆಜೆಂಡ್ ಲೆಕ್ಚರರ್ ಸಮಾಜ ಸೇವೆ ಮುಂತಾದ ಹಲವು ಕಾರ್ಯಗಳ ಮೂಲಕ ಜನಾನುರಾಗಿಯಾಗಿದ್ದವರು. ಪ್ರಚಾರದ ವೇಳೆ ಜನರ ಆವೇಶ, ಪುಷ್ಪಾರ್ಚನೆಗಳು ಅದರ ಸಾಕ್ಷಿಗಳಾಗಿದ್ದವು.
ಚಿಕ್ಕ ಬಳ್ಳಾಪುರದಿಂದ 18 ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಇವರ ಬಾಲ್ಯದಲ್ಲೇ ಕುಟುಂಬವು ಬಡತನಕ್ಕೆ ತಳ್ಳಲ್ಪಟ್ಟಿತ್ತು. ಪಿ.ಯು.ಸಿ. ಓದುತ್ತಿದ್ದಾಗಲೇ ತಾಯಿ ತಂದೆಯರನ್ನು ಕಳಕೊಂಡರು. ಬಡತನ ತಾಳಲಾರದೆ ಹೊಟ್ಟೆಪಾಡಿಗಾಗಿ ಕೋಚಿಂಗ್ ಸೆಂಟರ್ ಪ್ರಾರಂಭಿಸಿದೆ, ಆರಂಭದಲ್ಲಿ ಎರಡು ಖುರ್ಚಿ ಮತ್ತು ಮೂವರು ವಿದ್ಯಾರ್ಥಿಗಳಿದ್ದರು. ಒಂದು ವರ್ಷದಲ್ಲಿ ತೊಂಬತ್ತಕ್ಕೇರಿತ್ತು.
“ನೀವು ಪಿ. ಯು.ಸಿ. ಓದುತ್ತಿದ್ದಾಗಲೇ ಕೋಚಿಂಗ್ ಸೆಂಟರ್ ಸ್ಥಾಪಿಸಲು ನಿಮಗುಂಟಾದ ಸ್ಪೂರ್ತಿ ಏನು” ಎಂದು ಕೇಳಿದ್ದಕ್ಕೆ ಅವರ ಉತ್ತರ; ” ಹೊಟ್ಟೆಪಾಡು. ಹಸಿದ ಹೊಟ್ಟೆ, ಒಡೆದ ಹೃದಯ ಏನ್ ಬೇಕಾದ್ರೂ ಕಲಿಸುತ್ತಲ್ಲಾ ಸಾರ್ ” ಎಂದಾಗಿತ್ತು.
ಈಗ ಅವರ ” ಪರಿಶ್ರಮ” ಕೋಚಿಂಗ್ ಸೆಂಟರ್ ನಲ್ಲಿ ಒಟ್ಟು ಎರಡೂವರೆ ಸಾವಿರ ವಿದ್ಯಾರ್ಥಿಗಳಿದ್ದು ಅವರ ಪೈಕಿ 500 ಮಂದಿ ಮೆಡಿಕಲ್ ವಿದ್ಯಾರ್ಥಿಗಳು. 14 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದು ಕೊಂಡು ಸ್ವಂತ ವೆಚ್ಚದಲ್ಲಿ ಮೆಡಿಕಲ್ ಓದಿಸುತ್ತಿದ್ದಾರೆ. ” ಜಗತ್ತಲ್ಲೇ ಶ್ರೇಷ್ಠ ವೈದ್ಯರು ಭಾರತೀಯರಾಗಿರಬೇಕು, ಅದರಲ್ಲಿ ಹೆಚ್ಚಿನವರು ಕನ್ನಡಿಗರಾಗಿರಬೇಕು ” ಅನ್ನುತ್ತಿರುವ ಅವರಲ್ಲಿ ನಿಮ್ಮನ್ನು ಗಾಡ್ ಆಫ್ ನಾಲೆಜ್ ಅನ್ನಬೇಕಾ, ಮೋಟಿವೇಶನಲ್ ಸ್ಪೀಕರ್ ಅನ್ನಬೇಕಾ ಎಂದು ಕೇಳಿದ್ದಕ್ಕೆ ” ಕನ್ನಡದ ಸ್ವಾಭಿಮಾನಿ ಅನ್ನಿ” ಅಂದಿದ್ದರು.
ಒಬ್ಬ ಮಾಧ್ಯಮದವನು ನಿಮ್ಮ ಒಟ್ಟು ಆಸ್ತಿ ಎಷ್ಟು ಎಂದು ಕೇಳಿದಾಗ ಮುನ್ನೂರು ಕೋಟಿ ಎಂಬ ಇವರ ಉತ್ತರಕ್ಕೆ ಮಾಧ್ಯಮದವನು ತಬ್ಬಿಬ್ಬಾಗಿದ್ದ. ನಂತರ ವಿವರಣೆ ನೀಡಿದ್ದರು: “ಶಾಕ್ ಆಗ್ಬೇಡಿ, ಹೇಳ್ತೀನಿ, 200 ಮಂದಿಗೆ ಸರಕಾರೀ ಫ್ರೀ ಟಿಕೆಟ್ ಕೊಡಿಸಿ ಡಾಕ್ಟರ್ ಮಾಡಿಸಿದ್ದೀನಿ, ಒಂದು ಸೀಟಿಗೆ ಒಂದೂವರೆ ಕೋಟಿಯ ಹಾಗೆ ಮುನ್ನೂರು ಕೋಟಿ ಉಳಿಸಿಲ್ವಾ, ಅದು ನನ್ನ ಆಸ್ತಿಯಲ್ವಾ?”
ಅವರು ಮತ್ತೆ ತನ್ನ ನಿಜವಾದ ಆಸ್ತಿ 25 ಕೋಟಿ ಟರ್ನ್ ಓವರ್, ಮುಂದಿನ ವರ್ಷ ಐವತ್ತು ಕೋಟಿಗೇರಿಸ್ತೀನಿ, ಸಾಧನೆ ಅಂದರೆ ಬದುಕಲ್ಲಿ ನಾವು ಎಷ್ಟು ಉಸಿರಾಡ್ತೇವೆ ಎಂಬುದಲ್ಲ, ನಮ್ಮ ಸಾಧನೆ ಕಂಡು ಎಷ್ಟು ಜನರ ಉಸಿರು ನಿಂತ್ಹೋಗುತ್ತೆ ಅನ್ನುವುದು ಅಂದಿದ್ದರು.
ತನಗೆ ಉಚಿತವಾಗಿ ಎಜ್ಯುಕೇಶನ್ ಕೊಟ್ಟು ಸಾಕಿ ಬೆಳೆಸಿದ ಸಿದ್ಧಗಂಗಾ ಮಠದ ಸ್ವಾಮೀಜಿಯ ಮೇಲೆ ತೀವ್ರ ಋಣಭಾರ ತೋರುತ್ತಿರುವ ಇವರು ಸಿದ್ಧರಾಮಯ್ಯನವರ ಕಟ್ಟಾ ಅಭಿಮಾನಿ.
ಸಾಧನೆಯ ಬಗ್ಗೆ ಅವರಾಡಿದ ಇನ್ನೂ ಕೆಲವು ಮಾತುಗಳು:
” ಸಾಧನೆ ಅನ್ನೋದು ಯು. ಆರ್ ಯು. ಅಂದೋನು ಹೌ ಆರ್ ಯು ಅನ್ನೋದು”
ಸಾಧನೆ ಅಂದರೆ ನಮ್ಮನ್ನು ಅವಮಾನಿಸಿದವರ ಮುಂದೆ ನಾವು ಬೆಳೆಯೋದು ಅನ್ನುತ್ತಿರುವ ಅವರು ಅಂದು ನಾನು ದಿಕ್ಕಿಲ್ಲದೆ ಅಲೆದಾಡಿದಾಗ ” ಎಲ್ಲಾದರೂ ಹೋಗಿ ಡ್ರೈವರಾಗಿ ಬದುಕಯ್ಯ” ಅಂದೋರಲ್ಲಿ ಹದೀನೇಳು ಮಂದಿ ಇದೀಗ ನನ್ನ ಕಂಪೆನಿಯಲ್ಲಿ ಡ್ರೈವರ್ರಾಗಿದ್ದಾರೆ ಅಂತಾರೆ.
ಸಿಲ್ಲಿಯಾಗಿ, ಸಲೀಸಾಗಿ ಮಾತಾಡುವ ಇವರು ಕೆಲವೊಮ್ಮೆ ಭಾವುಕರಾಗುತ್ತಾರೆ. ” ಅಪ್ಪ ಅಮ್ಮ ಇಲ್ಲದಿದ್ರೆ ಬೇರೆ ಏನಿದ್ದೂ ಏನು ಪ್ರಯೋಜನ? ನಾನು ಕಂಪೆನಿಲಿ ದುಡಿದು, ರಾತ್ರಿ ಒಂಬತ್ತು ಗಂಟೆಗೆ ಮನೆ ಸೇರುವಾಗ ಒಂದು ಲೋಟ ನೀರು ಕೊಡಲು ಅಮ್ಮ ಇಲ್ಲ, ಯಾಕೆ ತಡ ಮಾಡಿದೆ ಅಂತ ಗದರಿಸಲು ಅಪ್ಪ ಇಲ್ಲ” ಅಂದಾಗ ಮನಸ್ಸು ತಲ್ಲಣಗೊಂಡಿತ್ತು.
ನಿಜಕ್ಕೂ ಇವರು ಕರ್ನಾಟಕದ ಭವಿಷ್ಯದ ಶ್ರೇಷ್ಠ ನಾಯಕರಾಗಿ ಬೆಳೆದು ಬರುತ್ತಾರೆ, ಬರಲಿ ಎಂದು ಹಾರೈಸೋಣ.




