Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಮಕ್ಕಳ ನಡುವೆ 3 ವರ್ಷ ಅಂತರವಿರಲಿ: ಬೆನ್ನೂರ

ಮಕ್ಕಳ ನಡುವೆ ಕಡ್ಡಾಯವಾಗಿ 3 ವರ್ಷಗಳಿಗಿಂತ ಹೆಚ್ಚಿನ ಅಂತರವಿರಲಿ, ಇದರಿಂದ ತಾಯಿ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಹದೇವಪುರ ಆಯುಷ್ಮಾನ್ ಆರೋಗ್ಯ ಮಂದಿರ ಸಂಯುಕ್ತಾಶ್ರಯದಲ್ಲಿ 2024 ರ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ದಂಪತಿ ಸಂಪರ್ಕ ಪಾಕ್ಷಿಕ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸರಿಯಾದ ವಯಸ್ಸಿಗೆ ಮದುವೆ, ಮಕ್ಕಳ ನಡುವೆ ಅಂತರ ಕಾಪಾಡಿಕೊಳ್ಳುವುದು ಹಾಗೂ ಪ್ರಮುಖವಾಗಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಾದ ತಾತ್ಕಾಲಿಕ, ಆಧುನಿಕ ಅಲ್ಪಾವಧಿ ಮತ್ತು ದೀರ್ಘ ಕಾಲಿನ ಗರ್ಭನಿರೋಧಕಗಳನ್ನು ಹಾಗೂ ಶಾಶ್ವತ ವಿಧಾನಗಳನ್ನು ಪ್ರತಿ ದಂಪತಿ ಬಳಸಿಕೊಳ್ಳಬೇಕು. ಒಟ್ಟಾರೆ
ತಾಯಿ ಮತ್ತು ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಅರ್ಹ ತಾಯಂದಿರು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್ ಮಾತನಾಡಿ, ಪುರುಷರಿಗೆ ಶಾಶ್ವತ ವಿಧಾನಗಳಲ್ಲಿ ಅತ್ಯಾಧುನಿಕ ಎನ್‌ಎಸ್‌ ವಿ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಸೇವೆ ಲಭ್ಯವಿದ್ದು, ಇವುಗಳ ಪ್ರಯೋಜನವನ್ನು ಪಡೆದು ಜನಸಂಖ್ಯಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕುಟುಂಬ ಕಲ್ಯಾಣ ವಿಧಾನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ವೇಳೆ ಗ್ರಾ.ಪಂ. ಸದಸ್ಯ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎನ್ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ಶರತ್ ಕುಮಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ತಸ್ಮಿಯಾಬಾನು, ಅಂಗನವಾಡಿ ಕಾರ್ಯಕರ್ತೆ ದುಂಡಮ್ಮ, ಆಶಾ ಹಾಗೂ ಆಶಾ ಕಾರ್ಯಕರ್ತೆಯರಾದ ಮಹಾಲಕ್ಷ್ಮಿ,ಭಾಗ್ಯಲಕ್ಷ್ಮಿ, ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!