Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ: ಜಿಲ್ಲಾಧಿಕಾರಿ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಇಲಾಖೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯರ ತಡೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 60 ಬಾಲ್ಯ ವಿವಾಹ ಕುರಿತು ಬಂದ ದೂರುಗಳಲ್ಲಿ 46 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಮಂಡ್ಯ ತಾಲ್ಲೂಕಿನಲ್ಲಿ – 12, ಮದ್ದೂರು – 3, ಮಳವಳ್ಳಿ – 1, ಶ್ರೀರಂಗಪಟ್ಟಣ – 4, ಕೆ ಆರ್ ಪೇಟೆ – 12, ನಾಗಮಂಗಲ – 5, ಪಾಂಡವಪುರ ತಾಲ್ಲೂಕಿನಲ್ಲಿ – 9 ಪ್ರಕರಣಗಳನ್ನು ತಡೆಯಲಾಗಿದ್ದು, ಉಳಿದ 14 ಪ್ರಕರಣಗಳನ್ನು ಎಫ್ ಐ ಆರ್ ನಲ್ಲಿ ದಾಖಲು ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 14 ಬಾಲ್ಯ ವಿವಾಹ ಪ್ರಕರಣಗಳು ಜರುಗಿರುವುದು ತಲೆ ತಗ್ಗಿಸುವ ಸಂಗತಿಯಾಗಿದೆ. ಈ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಸಂಬಂಧಪಟ್ಟವರನ್ನು ವಿಚಾರಿಸಿದರು.

ಬಾಲ್ಯ ವಿವಾಹದ ಕಾರಣ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು ಹೆಚ್ಚಾಗಿದ್ದಾರೆ. ಜಿಲ್ಲೆಯಲ್ಲಿ ಶಾಲೆಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆಯನ್ನು ಪಟ್ಟಿಮಾಡಿ ಹಾಗೂ 15 ದಿನಗಳಿಗಿಂತ ಹೆಚ್ಚು ಸತತವಾಗಿ ಶಾಲೆಗೆ ಗೈರು ಹಾಜರಾಗುವ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಎಲ್ಲಾ ತಾಲ್ಲೂಕಿನ ಬಿಇಒ ಗಳಿಗೆ ತಿಳಿಸಿದರು.

18 ವರ್ಷದೊಳಗಿನ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ವಯಸ್ಸನ್ನು ಬದಲಾಯಿಸಿಕೊಂಡು ಸುಳ್ಳು ವಯಸ್ಸಿನ ದಾಖಲೆಗಳನ್ನು ಆಸ್ಪತ್ರೆಗೆ ನೀಡುತ್ತಿರುವುದು ಕೇಳಿ ಬರುತ್ತಿದೆ. ಈ ರೀತಿಯ ಆಧಾರ್ ಕಾರ್ಡ್ ನಲ್ಲಿ ಸುಳ್ಳು ವಯಸ್ಸನ್ನು ಬದಲಾವಣೆ ಮಾಡುವುದು ಕಂಡು ಬಂದಲ್ಲಿ ಅಥವಾ ಸಹಕರಿಸುವವರು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಪ್ರತಿ ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ಸಮನ್ವಯ ಸಮಿತಿಯನ್ನು ಈ ಹಿಂದೆಯೇ ರಚಿಸಲಾಗಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿ ಹಾಗೂ ಹೆಣ್ಣು ಭ್ರೂಣ ಪತ್ತೆಯ ವಿಚಾರಗಳ ಬಗ್ಗೆ ಪ್ರತಿ 2 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದರು.

ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ತೀವ್ರ ನಿಗಾ

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಿ. ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ತೀವ್ರ ನಿಗಾ ಇಟ್ಟು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು.

ಕೆಲವು ತಂದೆ ತಾಯಿಗಳಿಗೆ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಅನ್ನೋ ಭಾವನೆ, ಶಿಕ್ಷಣದ ಕೊರತೆ, ಮೂಡ ನಂಬಿಕೆಗಳಿಂದ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮನಸೋಲುತ್ತಾರೆ. ಕೆಲವು ವೇಳೆ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರು ಸೃಷ್ಟಿಯಾಗುತ್ತಾರೆ. ಕಾರಣ ಯಾವುದೇ ಇರಲಿ, 18 ವರ್ಷ ತುಂಬುವುದಕ್ಕಿಂತಾ ಮೊದಲು ಗರ್ಭಿಣಿ ಆಗುವ ಬಾಲಕಿಯರು ಹಲವು ದೈಹಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಾರೆ ಎಂದು ಹೆಣ್ಣು ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

ಬಾಲ ಗರ್ಭಿಣಿಯರಿಗೆ ರಕ್ತಹೀನತೆ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಕಡಿಮೆ ಜನನ ತೂಕ, ಶಿಶು ಮರಣದ ಹೆಚ್ಚಿನ ಪ್ರಮಾಣ, ಖಿನ್ನತೆ, ಪ್ರಿ-ಎಕ್ಲಾಂಪ್ಸಿಯಾ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನವಜಾತ ಶಿಶುವಿನ ಸಾವು ಸಂಭವಿಸುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಅವರು ಸಹ ಜಾಗೃತಿ ಮೂಡಿಸಿ ಎಂದರು

ಬಾಲ ತಾಯಂದಿರ ಪ್ರಕರಣಗಳಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆ ಮಾಡುವಂತೆ ಸೂಚಿಸಿದರು. ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

ಜಿಲ್ಲೆಯಲ್ಲಿರುವ ಶಾಲೆಗಳ ಮುಖ್ಯಸ್ಥರು, ವಸತಿ ನಿಲಯಗಳ ಮೇಲ್ವಿಚಾರಕರು,ದೇವಸ್ಥಾನದ ಮುಖ್ಯಸ್ಥರು, ಮುದ್ರಣಾಲಯದ ಮಾಲೀಕರಿಗೆ, ಕಲ್ಯಾಣ ಮಂಟಪಗಳ ವ್ಯವಸ್ಥಾಪಕರು, ಸಾಮೂಹಿಕ ವಿವಾಹಗಳ ಆಯೋಜಕರು, ಧಾರ್ಮಿಕ ಮುಖಂಡರುಗಳಿಗೆ ಬಾಲ್ಯ ವಿವಾಹ ತಡೆಗಟ್ಟಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಭೆ ಕರೆದು ತಿಳಿಸಿ ಎಂದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್ ಅವರು ಮಾತನಾಡಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪಿಯುಸಿ ನಲ್ಲಿ ಪ್ರವೇಶ ಪಡೆಯದೆ ಇರುವ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿ ಮುಖ್ಯವಾಗಿ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಈಗಾಗಲೇ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇನ್ನೂ ಹೆಚ್ಚಾಗಿ ಬಲವರ್ಧನೆಯಾಗಬೇಕು ಎಂದರು.

ಸಭೆಯಲ್ಲಿ ಡಿ.ವೈ.ಎಸ್.ಪಿ ಗಂಗಾಧರ ಸ್ವಾಮಿ, ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕರಾದ ರಾಜಮೂರ್ತಿ ಎಸ್, ಆರ್ ಸಿ ಎಚ್ ಒ ಅಧಿಕಾರಿ ಡಾ ಅನಿಲ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!