Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ: ಆರ್. ಅಶೋಕ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಿವೇಶನ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಹಗರಣದ ವಿಚಾರಣೆ ಎದುರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಮುಡಾದಲ್ಲಿ 500ಕ್ಕೂ ಹೆಚ್ಚು ಸೈಟುಗಳನ್ನು ಅಕ್ರಮವಾಗಿ ಪಡೆದಿದ್ದು ಇದೊಂದು ದೊಡ್ಡ ಹಗರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಇದ್ದರೆ ತಾವು ಅಕ್ರಮವಾಗಿ ಪಡೆದಿರುವ 14 ನಿವೇಶನಗಳನ್ನು ವಾಪಸ್ ಮಾಡಿ,ರಾಜೀನಾಮೆ ನೀಡಿ ವಿಚಾರಣೆ ಎದುರಿಸಬೇಕು. ಅಲ್ಲಿಯವರೆಗೂ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದುಗೂಡಿ ಹೋರಾಟ ನಡೆಸಲಿವೆ ಎಂದರು.

ಚರ್ಚೆಗೆ ಅವಕಾಶ ನೀಡಲಿಲ್ಲ

ಮುಡಾದಲ್ಲಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ತಮ್ಮ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಅರಿಶಿಣ ಕುಂಕುಮದ ಭಾಗವಾಗಿ 3.16 ಎಕರೆ ಜಾಗವನ್ನು ದಾನವಾಗಿ ಪಡೆದಿದ್ದಾರೆ. ನಂತರ ಈ ಭೂಮಿಯನ್ನು ಮುಡಾ ಪಡೆದುಕೊಂಡು ಲೇ ಔಟ್ ಮಾಡಲು ಎಲ್ ಅಂಡ್ ಟಿ ಕಂಪನಿಗೆ ಕಾಮಗಾರಿ ವಹಿಸಿತ್ತು.ಆದರೂ ಪಾರ್ವತಿ ಅವರು ತಮ್ಮ ಜಮೀನು ಇದ್ದ ಕೆಸೆರೆ ಗ್ರಾಮದಲ್ಲಿ ಬದಲಿ ನಿವೇಶನವಿದ್ದರೂ ಸಾಕಷ್ಟು ಬೆಲೆ ಬಾಳುವ ವಿಜಯನಗರದಲ್ಲಿ 14 ನಿವೇಶನ ಪಡೆದಿರುವುದರ ಹಿಂದೆ ಸಿದ್ದರಾಮಯ್ಯ ಅವರ ಪ್ರಭಾವವಿದೆ.ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ, ಪ್ರತಿಪಕ್ಷಗಳಿಗೆ ಉತ್ತರಿಸಲು ಸಾಧ್ಯವಾಗದೆ ಮುಖ ತೋರಿಸದೆ ಪಲಾಯನ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಇದಾದ ಮರುದಿನ ಸುದ್ದಿಗೋಷ್ಠಿ ನಡೆಸಿ “ಪಿಕ್ ಅಂಡ್ ಚೂಸ್” ರೀತಿ ತಮಗೆ ಅನುಕೂಲ ಅನ್ನಿಸಿದ ದಾಖಲಾತಿಗಳನ್ನು ಪ್ರದರ್ಶಿಸಿ ಸಮರ್ಥಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ.ಸಿದ್ದರಾಮಯ್ಯ
ಅವರು ಸತ್ಯವಂತರು, ಪ್ರಾಮಾಣಿಕರು, ಕಾನೂನು ಬಾಹಿರವಾಗಿ ಮೂಡಾದಲ್ಲಿ ಲಾಭ ಮಾಡಿಕೊಂಡಿಲ್ಲ ಎಂದಾದರೆ ಅಧಿವೇಶನದಲ್ಲಿ ಅದನ್ನೇ ಹೇಳಬಹುದಿತ್ತು. ಹಗರಣದಲ್ಲಿ ಸಂಪೂರ್ಣ ಮುಳುಗಿ ಹೋಗಿರುವ ಅವರಿಗೆ ಬಹುಶಃ ನೈತಿಕತೆ ಕಾಡುತ್ತಿರಬೇಕು ಎಂದರು.

ಚರ್ಚೆಗೆ ಅವಕಾಶ ನೀಡಿದರೆ ತಾವು ಮಾಡಿರುವ ಅಕ್ರಮ ಕಡತಗಳಲ್ಲಿ ದಾಖಲಾಗಿ ಶಾಸಕಾಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂದು ಹೆದರಿ ಪಲಾಯನ ಮಾಡಿದರು. ಸಿದ್ದರಾಮಯ್ಯ ಅವರು
ಸುದ್ದಿಗೋಷ್ಟಿ ಜತೆಗೆ ಪತ್ರಿಕೆಗಳಿಗೆ ಒಂದು ಪುಟ ಜಾಹಿರಾತು ನೀಡಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಇದು “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ” ಎಂಬಂತಿದೆ ಅವರ ವರ್ತನೆ ಎಂದು ಕಿಡಿಕಾರಿದರು.

ಸತ್ಯ ಮರೆ ಮಾಚಲು ಸಾಧ್ಯವಿಲ್ಲ

ಸಿದ್ದರಾಮಯ್ಯನವರು ಏನೇ ಜಾಹಿರಾತು ನೀಡಿದರೂ, ಸುದ್ದಿಗೋಷ್ಠಿ ನಡೆಸಿ ಸಮರ್ಥನೆ ಮಾಡಿಕೊಂಡರೂ ಸತ್ಯ ಸತ್ಯವೇ. ಅದನ್ನು ಮುಚ್ಚಿಡಲು, ಮರೆ ಮಾಚಲು ಆಗುವುದಿಲ್ಲ.ಅವರು ತಪ್ಪಿತಸ್ಥರು ಎಂದು ತೋರಿಸಲು ನಮ್ಮ ಬಳಿ ಅಧಿಕೃತ ದಾಖಲೆಗಳಿವೆ.

ಸತ್ಯಕ್ಕೆ ಯಾವತ್ತಿಗೂ ಸಾವಿಲ್ಲ

ಈ ಪ್ರಕರಣ ಸಿಎಂ ಅವರ ರಾಜಕೀಯ ಜೀವನದ ಕಪ್ಪು ಚುಕ್ಕೆಯಾಗಿದ್ದು,ನಾವು ಈ ಹಗರಣದಲ್ಲಿ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ದುರುದ್ದೇಶದಿಂದ, ನಿಯಮಬಾಹಿರವಾಗಿ ನಿಲುವಳಿ ಸೂಚನೆ ತಂದಿದ್ದವು ಎಂದಿದ್ದಾರೆ. ಇದು ಅಪ್ಪಟ ಸುಳ್ಳು. ಇದರಲ್ಲಿ ರಾಜಕೀಯ ದುರುದ್ದೇಶ ಏನಿದೆ? ಸಾವಿರಾರು ಕೋಟಿ ಹಗರಣವನ್ನು ಅಧಿವೇಶನದಲ್ಲಿ ಚರ್ಚೆ ಮಾಡಬಾರದೇ?ತಮ್ಮ ಬಣ್ಣ ಬಯಲಾಗುತ್ತದೆ. ಭ್ರಷ್ಟಾಚಾರದ ಮುಖವಾಡ ಕಳಚಿ ಬೀಳುತ್ತದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಅಧಿವೇಶನದ ಹಿಂದಿನ ದಿನ ಮೂಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ, ಇದು ಸಿಎಂ ಅವರ ರಾಜಕೀಯ ದುರುದ್ದೇಶ, ನಮ್ಮದಲ್ಲ ಎಂದರು.

4 ಸಾವಿರ ಕೋಟಿ ಹಗರಣ

ಮುಡಾ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಮರೀಗೌಡರೆ ಶೇ. 50:50 ರ ಅನುಪಾತದಲ್ಲಿ ಅಕ್ರಮವಾಗಿ ಬದಲಿ ನಿವೇಶನ ಪಡೆಯುವ ಮೂಲಕ ಸುಮಾರು ನಾಲ್ಕು ಸಾವಿರ ಕೋಟಿ ರೂ.ಗಳಿಗೂ ದೊಡ್ಡ ಹಗರಣ ಮಾಡಲಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದು ತನಿಖೆ ಮಾಡುವಂತೆ ಆಗ್ರಹಿಸಿದ್ದರು. ಅವರ ಪಕ್ಷದ ಮುಖಂಡರೇ ಇದನ್ನು ಹಗರಣ ಎಂದು ಕರೆದಿದ್ದು, ಈ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ಈ ಆಯೋಗದ ವರದಿ ಆರು ತಿಂಗಳಿರಲಿ, ಆರು ವರ್ಷವಾದರೂ ಬರುವುದಿಲ್ಲ. ಈ ಹಿಂದೆ ಅರ್ಕಾವತಿ ರೀ-ಡೂ ಹಗರಣವನ್ನು ಇದೇ ರೀತಿ ಹಳ್ಳ ಹಿಡಿಸಿದ್ದಾರೆ. ಅದೇ ರೀತಿ ಮುಡಾ ಹಗರಣವನ್ನು ಮುಚ್ಚಿ ಹಾಕುತ್ತಾರೆ ಎಂದರು.

ಮುಡಾ ವಿಚಾರದಲ್ಲಿ ಸಿಎಂ ತಪ್ಪೇ ಮಾಡಿಲ್ಲ ಎಂದು ಹೇಳುವ ಮೂಲಕ ಆಯೋಗದ ವರದಿ ಬರುವ ಮುಂಚೆಯೇ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ.ಪಿಎಸ್ಐ ಹಗರಣದಲ್ಲಿ ನಮ್ಮ ಪಕ್ಷದ ಮೇಲೆ ಆರೋಪ ಮಾಡಿದ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಪಿಎಸ್ಐ ಒಬ್ಬರು 30 ಲಕ್ಷ ಲಂಚ ನೀಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಸಿದ್ದರಾಮಯ್ಯನವರೇ ರಕ್ಷಣೆ ಮಾಡುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪನವರ ಮೇಲೆಯೂ ಖಾಸಗಿ ದೂರಿನ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ವಿಚಾರಣೆ ನಡೆಸಲು ಅನುಮತಿ ನೀಡಿದ್ದಾಗ ಚಪ್ಪಾಳೆ ಹೊಡೆದ ಸಿದ್ದರಾಮಯ್ಯನವರೇ ಈಗ ಟಿ.ಜೆ. ಅಬ್ರಹಾಂರವರು ಮುಡಾ ಹಗರಣದಲ್ಲಿ ರಾಜ್ಯಪಾಲರಿಗೆ ದೂರು ನೀಡಿದರೆ, ಆತನನ್ನು ಬ್ಲಾಕ್ ಮೇಲರ್ ಎಂದು ಹೇಳುತ್ತಿರುವುದು ಎಷ್ಟು ಸರಿ? ಅವರ ಮೇಲೆ ಹಳೆಯ ಕೇಸು ದಾಖಲಿಸುವ ಮೂಲಕ ಬೆದರಿಕೆಯ ತಂತ್ರ ಹಾಕುತ್ತಿದ್ದಾರೆ ಎಂದರು.

ಎಲ್ಲರ ಮೇಲೂ ತನಿಖೆ ನಡೆಯಲಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಅಕ್ರಮವಾಗಿ ನಿವೇಶನ ಮಂಜೂರು ಮಾಡಲಾಗಿದೆ ಎಂಬ ಬಗ್ಗೆ ಈ ಹಿಂದೆಯೇ ಬಿಜೆಪಿ ಜಾಹೀರಾತು ನೀಡಿ ಆರೋಪ ಮಾಡಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ಹಗರಣದಲ್ಲಿ ಕುಮಾರಸ್ವಾಮಿ ಸೇರಿದಂತೆ ಯಾವ ಪಕ್ಷದ ನಾಯಕರೇ ಪಾಲ್ಗೊಂಡಿರಲಿ ಅವರ ಮೇಲೆ ತನಿಖೆ ನಡೆದು ಶಿಕ್ಷೆ ಆಗಬೇಕೆಂಬುದು ನಮ್ಮ ಒತ್ತಾಯ ಎಂದರು.

ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಅಶ್ವಥ್ ನಾರಾಯಣ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅರವಿಂದ ಬೆಲ್ಲದ್, ಮುಖಂಡರಾದ ಸಿ.ಟಿ. ಮಂಜುನಾಥ್, ರಮೇಶ್ ಗೌಡ, ಶ್ರೀಧರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!