Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ: ಕೇಂದ್ರ ಸರ್ಕಾರ

ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ ಬದ್ದವಾಗಿ ಇರಲಿದೆ ಎಂದು ನಿನ್ನೆ (ಆ.9) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, “ಡಾ. ಬಿಆರ್ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯಲ್ಲಿ ಕೆನೆಪದರಕ್ಕೆ ಯಾವುದೇ ಅವಕಾಶವಿಲ್ಲ” ಎಂದು ಹೇಳಿದ್ದಾರೆ.

“ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಕುರಿತು ಕೆಲವು ಸಲಹೆಗಳನ್ನು ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿವರವಾದ ಚರ್ಚೆ ನಡೆದಿದೆ” ಎಂದು ವೈಷ್ಣವ್ ತಿಳಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆ ಸಚಿವರು ಈ ವಿಷಯ ಎತ್ತಿದರೇ? ಎಂಬ ಪ್ರಶ್ನೆಗೆ ಉತ್ತರಿಸಲು ವೈಷ್ಣವ್ ನಿರಾಕರಿಸಿದ್ದಾರೆ. ಸಂಪುಟ ಸಭೆಯಲ್ಲಿ ಕೆನೆಪದರ ವಿಷಯವನ್ನು ಒಂದು ವಿಷಯವನ್ನಾಗಿ ಎತ್ತಿಕೊಳ್ಳಲಾಗಿತ್ತು. ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ. ಈ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ ಇರಲಿದೆ ಎಂದು ಪುನರುಚ್ಚರಿಸಿದ್ದಾರೆ.

ಒಳ ಮೀಸಲಾತಿ ಸಂಬಂಧ ಶಾಸಕಾಂಗದ ಕಡೆಯಿಂದ ಯಾವುದಾದರು ಬದಲಾವಣೆಗಳನ್ನು ಯೋಜಿಸಲಾಗಿದೆಯೇ? ಎಂಬ ಪ್ರಶ್ನೆಗೆ, ” ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ನಾನು ನಿಮಗೆ ಹೇಳಿದ್ದೇನೆ” ಎಂದು ವೈಷ್ಣವ್ ಜಾರಿಕೊಂಡಿದ್ದಾರೆ.

ಶುಕ್ರವಾರ ಸಂಪುಟ ಸಭೆಗೂ ಮುನ್ನ ಎಸ್‌ಸಿ ಮತ್ತು ಎಸ್‌ಟಿ ಸಂಸದರ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ “ಇಂದು ಎಸ್‌ಸಿ, ಎಸ್‌ಟಿ ಸಂಸದರ ನಿಯೋಗ ನನ್ನನ್ನು ಭೇಟಿ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯಗಳ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ನಾವು ಬದ್ದರಾಗಿದ್ದೇವೆ” ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು 6:1 ಬಹುಮತದ ತೀರ್ಪಿನಲ್ಲಿ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಎಸ್‌ಸಿ ಸಮುದಾಯಗಳನ್ನು ಉಪ-ವರ್ಗೀಕರಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ಇದೆ ಎಂದಿತ್ತು.

ತೀರ್ಪು ಪ್ರಕಟಿಸುವ ವೇಳೆ ಎಸ್‌ಸಿ, ಎಸ್‌ಟಿಯಲ್ಲಿ ಕೆನೆಪದರವನ್ನು ಗುರುತಿಸುವ ನೀತಿಯನ್ನು ರಾಜ್ಯಗಳು ರೂಪಿಸಬೇಕು ಮತ್ತು ಅವರಿಗೆ ಮೀಸಲಾತಿಯ ಪ್ರಯೋಜನವನ್ನು ನಿರಾಕರಿಸಬೇಕು ಎಂದು ನ್ಯಾಯಮೂರ್ತಿ ಬಿ ಆರ್ ಗವಾಯಿ ಹೇಳಿದ್ದರು.

ಪ್ರಧಾನಿಯನ್ನು ಭೇಟಿಯಾದ ನಿಯೋಗದ ಭಾಗವಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಸಿಕಂದರ್ ಕುಮಾರ್ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದು, “ಕೆನೆಪದರ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ನಾವೆಲ್ಲರೂ ಚಿಂತಿತರಾಗಿದ್ದೆವು. ಈ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿ ಜನರು ನಮಗೆ ಕರೆ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ಫಗ್ಗನ್ ಸಿಂಗ್ ಕುಲಸ್ತೆ ಮಾತನಾಡಿ, “ಕೆನೆಪದರದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಅವಲೋಕನವನ್ನು ಕಾರ್ಯಗತಗೊಳಿಸಬಾರದು ಎಂದು ನಿಯೋಗವು ಪ್ರಧಾನಿಗೆ ತನ್ನ ಜ್ಞಾಪಕ ಪತ್ರದಲ್ಲಿ ಒತ್ತಾಯಿಸಿದೆ” ಎಂದಿದ್ದಾರೆ.

“ಪ್ರಧಾನಿ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದು, ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಚಿಂತಿಸಬೇಡಿ, ಎಸ್‌ಸಿ-ಎಸ್‌ಟಿಯಲ್ಲಿ ಕೆನೆಪದರ ಜಾರಿಗೆ ತರುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ” ಎಂದು ಕುಲಸ್ತೆ ಪಿಟಿಐಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!