Friday, September 20, 2024

ಪ್ರಾಯೋಗಿಕ ಆವೃತ್ತಿ

ಪರಪ್ಪನ ಅಗ್ರಹಾರಕ್ಕೆ ಗೃಹ ಸಚಿವ ಪರಮೇಶ್ವರ್‌ ಭೇಟಿ ; ತನಿಖೆ ಆರಂಭ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಸತ್ಕಾರ ನೀಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.‌ ಜಿ.ಪರಮೇಶ್ವರ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕೈದಿಗಳ ದೈನಂದಿನ ಚಟುವಟಿಕೆ ಮೇಲೆ ನಿಗಾವಹಿಸದಿರುವುದು, ಪ್ರಮುಖ‌ ಪ್ರಕರಣಗಳ ಆರೋಪಿಗಳ ಭೇಟಿ ಮಾಡಿ ಹೋದ ನಂತರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸದಿರುವುದಕ್ಕೆ ಜೈಲಿನ ಚೀಫ್ ಸೂಪರಿಂಟ್‌ಡೆಂಡ್, ಸೂಪರಿಡೆಂಟ್ ಹಾಗೂ ಮತ್ತಿತರ ಜೈಲು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾದ ಬಳಿಕ ನಟ ದರ್ಶನನ್ನು ಬಂಧಿಸಿರುವುದು ಹಾಗೂ ಪ್ರಕರಣದ ಸ್ವರೂಪ ಏನೆಂಬುದು ಎಲ್ಲವೂ ಗೊತ್ತಿದೆ. ಆದಾಗ್ಯೂ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳನ್ನು ಪೂರೈಕೆಯಾಗಿದೆ.‌ ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿರುತ್ತಾರೆ. ಘಟನೆ ಎಲ್ಲರ ಕಣ್ತಪ್ಪಿ ನಡೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಯಾವ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬುದು ಕಂಡು ಬಂದಿದೆ. ಹೈಫ್ರಿಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲ ಬಂದೋಬಸ್ತ್,‌ ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಆಕ್ರೋಶವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಬಂಧಿಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ‌ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ‌ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದರು‌.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್‌, “ಈಗಾಗಲೇ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚೀಫ್ ಸೂಪರಿಡೆಂಟ್ ಶೇಷಮೂರ್ತಿ, ಸೂಪರಿಂಟ್‌ಡೆಂಟ್ ಮಲ್ಲಿಕಾರ್ಜುನ್ ಸ್ವಾಮಿ ಬಂಧಿಖಾನೆಯ ಜವಾಬ್ಧಾರಿ ಹೊತ್ತ ಹಿರಿಯ ಅಧಿಕಾರಿಗಳು.‌ ಪರಿಶೀಲನೆ ವೇಳೆ ಈ ಇಬ್ಬರು ಅಧಿಕಾರಿಗಳ ವೈಫಲ್ಯ, ನಿರ್ಲಕ್ಷ್ಯತನ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದರು.

“ಯಾರು ಸಿಗರೇಟ್ ತಂದುಕೊಟ್ಟರು, ಟೀ ತಂದಕೊಟ್ಟವರು ಮತ್ತು ಖುರ್ಚಿ ಹಾಕಿದವರು ಯಾರು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ. ಪ್ರಾಥಮಿಕ ತನಿಖೆಯ ಬಂಧಿಖಾನೆ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗೆ ಸೂಚನೆ‌ ನೀಡಿದ್ದೇನೆ. ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದ ತಂಡ ತನಿಖೆ ನಡೆಸಿ, ವರದಿ ನೀಡಲಿದೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು”‌ ಎಂದರು.

“ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಿಸಿ ಕ್ಯಾಮೆರಾಗಳ ಅಗತ್ಯವಿದ್ದರೆ ಅಳವಡಿಸಲಾಗುವುದು. ಮಾನಿಟರಿಂಗ್ ಮಾಡುವ ಸಂದರ್ಭದಲ್ಲಿ ನಿರ್ಲಕ್ಷ್ಯವಹಿಸಲಾಗಿದೆ.‌ ಆರೋಪಿಗಳನ್ನು ಬೇರೆ ಬಂಧಿಖಾನೆಗೆ ಶಿಫ್ಟ್ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವಿಐಪಿ ಆರೋಪಿಗಳ ಟ್ರೀಟ್ಮೆಂಟ್‌ಗೆ ರೌಡಿಶೀಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಯಾವುದೇ ರೀತಿಯ ತಪ್ಪು ಕಂಡು ಬಂದರು ಕ್ರಮ ಜರುಗಲಿದೆ. ವರಧಿ ಆಧರಿಸಿ ಅಧಿಕಾರಿಗಳನ್ನು ಅಮಾನತು ಅಥವಾ ಸೇವೆಯಿಂದ ವಜಾಗೊಳಿಸಲಾಗುವುದು.‌ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿರುವ ವರದಿಯನ್ನು ಪಡೆಯಲಾಗುವುದು” ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ ರವಿಕುಮಾರ್, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!