Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ| ಸ್ಥಳೀಯ ಕಲಾವಿದರ ಜೊತೆಗೆ ಹೊರರಾಜ್ಯ, ವಿದೇಶದ ಕಲಾವಿದರಿಗೆ ಅವಕಾಶ

ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ, ಮುಂದೆ ನಡೆಯುವಂತಹ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳಿಗೆ ಮಂಡ್ಯ ರೋಲ್ ಮಾಡೆಲ್ ಆಗಬೇಕು. ಆ ನಿಟ್ಟಿನಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕು ಎಂದು ಶಾಸಕರು ಹಾಗೂ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷ ದಿನೇಶ್ ಗೂಳಿಗೌಡ ಹೇಳಿದರು.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ರಚನೆ ಮಾಡಿರುವ ಸಾಂಸ್ಕೃತಿಕ ಸಮನ್ವಯ ಸಮಿತಿಯ ಸದಸ್ಯರು, ಸಂಚಾಲಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಹೃದಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಅತಿ ಹೆಚ್ಚು ಕಲಾಪ್ರಕಾರಗಳಿವೆ. ಸ್ಥಳೀಯ ಕಲಾವಿದರ ಜೊತೆಗೆ ಹೊರರಾಜ್ಯ, ವಿದೇಶದ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಜಿಲ್ಲೆಯ ಜನತೆಗೆ ಕಲೆಯ ರಸದೌತಣ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಕರೆಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ. ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರೇ ಬೆನ್ನೆಲುಬು, ಅವರೇ ಶಕ್ತಿ. ಕಲಾವಿದರ ಆಯ್ಕೆ, ಕಾರ್ಯಚಟುವಟಿಕೆಗಳಿಗೆ ಸ್ಪಷ್ಟ ರೂಪ ಕೊಡಬೇಕು. ಈ ನೆಲ, ಜಲ, ಭಾಷೆ ಹೆಸರು ವಿಶ್ವಮಟ್ಟದಲ್ಲಿ ಪಸರಿಸಲು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ವೈಯಕ್ತಿಕವಾಗಿ ಯಾವುದೇ ಹೆಸರನ್ನು ಶಿಫಾರಸು ಮಾಡುವುದಿಲ್ಲ. ಕಲಾವಿದರ ಆಯ್ಕೆ, ಕಲಾವಿದರಿಗೆ ಊಟ ವಸತಿ, ಗೌರವಧನ, ಯಾವ ವೇದಿಕೆಗಳಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು ಎಂಬುದರ ಸಂಬಂಧ 5-6 ಉಪಸಮಿತಿಗಳನ್ನು ರಚನೆ ಮಾಡಲಾಗುವುದು. ಸ್ವಯಂಸೇವೇಕರ ಅವಶ್ಯಕತೆಯಿದ್ದು ಕನ್ನಡ ಹಬ್ಬಕ್ಕೆ ಉಚಿತ ಸೇವೆ ಸಲ್ಲಿಸುವವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಾಂಸ್ಕೃತಿಕ ಸಮನ್ವಯ ಸಮಿತಿ

ಉಪಾಧ್ಯಕ್ಷರು ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ  ಮಾತನಾಡಿ, ಮಂಡ್ಯದ ನಾಯಕತ್ವ ಪ್ರಭಾವಶಾಲಿ. ನಾವೆಲ್ಲರೂ ಒಂದು ಎಂದು ಅರಿತು ಎಲ್ಲರನ್ನೂ ಒಳಗೊಳ್ಳಬೇಕು. ನಮ್ಮ ತನವನ್ನು ಅಳಿಸಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಕಲಾವಿದರಿಗೆ ಅವಮಾನ ಆಗದಂತೆ ಎಚ್ಚರ ವಹಿಸಬೇಕು. ಮಂಡ್ಯದ ಜನಪದ ಕಲೆಯಾದ ಪಟ್ಟಾ ಕುಣಿತ, ಕೋಲಾಟಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಇದೆ. ಅತಿ ಹೆಚ್ಚು ಕಲಾಪ್ರಕಾರ ಇರುವುದು ನಮ್ಮ ಜಿಲ್ಲೆಯಲ್ಲಿ. ಎಲ್ಲಾ ತಂಡಗಳಿಂದ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗೀತೆ ಎಲ್ಲಾ ವೇದಿಕೆಗಳಲ್ಲಿ ಮೊಳಗಬೇಕು ಎಂದರು.

ಸಭೆ ಆರಂಭಕ್ಕೂ ಮುನ್ನ ಹುಲುವಾಡಿ ರಾಮಯ್ಯ ತಂಡದಿಂದ ಕನ್ನಡ ಗೀತೆ ಗಾಯನ ಮಾಡಲಾಯಿತು. ಸಭೆಯಲ್ಲಿ ಕಲಾತಂಡಗಳ ಆಯ್ಕೆ, ಕಾರ್ಯಕ್ರಮ ಆಯೋಜನೆ, ಕಲಾವಿದರಿಗೆ ಆಹ್ವಾನ, ಗೌರವ ಸನ್ಮಾನ
ಕಲಾತಂಡಗಳಿಗೆ ಗೌರವ ಸಂಭಾವನೆ, ಊಟ, ವಸತಿ ಆಯೋಜನೆ ಕುರಿತ ವಿಷಯಗಳನ್ನು ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಾಕರಾದ ಮೀರಾ ಶಿವಲಿಂಗಯ್ಯ, ಸಮಿತಿ ಸದಸ್ಯ ಕಾರ್ಯದರ್ಶಿ ಉದಯ್ ಕುಮಾರ್, ಸಂಚಾಲಕರಾದ ಶಿವರಾಮೇಗೌಡ, ಗೌರವ ಕಾರ್ಯದರ್ಶಿಗಳಾದ ಕೃಷ್ಣೇಗೌಡ, ಅಪ್ಪಾಜಿ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಸಮ್ಮೇಳನದ ಸಾಕ್ಷಿಗುಡ್ಡೆ

ಈ ಹಿಂದೆ ಜಿಲ್ಲೆಯಲ್ಲಿ ಎರಡು ಸಾಹಿತ್ಯ ಸಮ್ಮೇಳನ ನಡೆದರೂ ಅದರ ನೆನಪಿನ ಉಳಿಯುವಂತಹ ಯಾವುದೇ ಭವನ ನಿರ್ಮಿಸಲಿಲ್ಲ. ಈ ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದ ಸಾಕ್ಷಿಗುಡ್ಡೆ ನಿರ್ಮಿಸಲು ಪ್ರಯತ್ನಿಸಲಾಗುತ್ತದೆ. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 30 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಿದೆ. ಇದರಲ್ಲಿ ಉಳಿಯುವ ಹಣವನ್ನು ಶಾಶ್ವತ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ದಿನೇಶ್ ಗೂಳಿಗೌಡ ತಿಳಿಸಿದರು.

ದೇಶದ ಹೊರಭಾಗದಲ್ಲಿರುವ ಮಂಡ್ಯದ ಕಲಾವಿದರಿಗೆ ಅವಕಾಶ ನೀಡಬೇಕು, ಹೊರ ರಾಜ್ಯದ ಕಲಾವಿದರಿಗೆ ಮನ್ನಣೆ ಸಿಗಬೇಕು, ಗಡಿನಾಡ ಕಲಾವಿದರಿಗೆ ಹೆಚ್ಚಿನ ಆದ್ಯತೆ ನಿಡಿ, ಮುಂಚೂಣಿಗೆ ತರುವ ಕೆಲಸವಾಗಬೇಕು, ಒತ್ತಡಕ್ಕೆ ಒಳಗಾಗಿ ಸಮಯವಕಾಶ ಕಡಿತ ಬೇಡ, ಜಿಲ್ಲೆಯ ಮೂಡಲಪಾಯ, ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಬೇಕು, ಸೋಭಾನೆಪದ, ಗೀಗಿಪದ, ನಾಟಕ ಸೇರಿದಂತೆ ಸ್ಥಳೀಯ ಕಲಾಪ್ರಕಾರ, ಕಲಾವಿದರಿಗೆ ಅವಕಾಶ ನೀಡಬೇಕೆಂಬ ವಿಷಯಗಳು ಚರ್ಚೆಗೆ ಬಂದವು.

ಬೀದಿನಾಟಕ ಕಲಾತಂಡಗಳು ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಿ ಜನಜಾಗೃತಿ ಮಾಡಿಸಬೇಕು. ನಾಗಲ್ಯಾಂಡ್, ಮೇಘಾಲಯ ಕಲಾವಿದರಿಗೆ ಅವಕಾಶ ಕಲ್ಪಿಸಿ ಅವರ ಕಲೆಯ ರಸದೌತಣ ನೀಡಬೇಕು. ಗೌರವಧನದಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು ಹಾಗೂ ಮಹಿಳಾ ಕಲಾವಿದರಿಗೆ ಹೆಚ್ಚು ಅವಕಾಶ ಸಿಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!