Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಗಗನಚುಕ್ಕಿ ಜಲಪಾತೋತ್ಸವ ; ಅನ್ನದಾನಿ ಹೇಳಿಕೆಗೆ ‘ಕೈ’ ಮುಖಂಡರ ಖಂಡನೆ

ಗಗನಚುಕ್ಕಿ ಜಲಪಾತೋತ್ಸವದಲ್ಲಿ ಭಾಗವಹಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡುತ್ತೇವೆಂದು ನೀಡಿರುವ ಮಾಜಿ ಶಾಸಕ ಡಾ. ಕೆ.ಅನ್ನದಾನಿ ಹೇಳಿಕೆಯನು ಖಂಡಿಸುವುದಾಗಿ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಮಳವಳ್ಳಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣವಾಗಿ ತುಂಬಿರುವುದರಿಂದ ಒಳ ಬರುವ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿದ್ದು, ಆ ನೀರಿನಿಂದಲೇ ಜಲಪಾತೋತ್ಸವವನ್ನು ಮಾಡಲಾಗುತ್ತಿದೆ, ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ಅನ್ನದಾನಿ ಆಗಿಂದಾಗೆ ಪತ್ರಿಕೆ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸುತ್ತಿರುವುದು ಸರಿಯಲ್ಲ ಎಂದರು.

ಗಗನಚುಕ್ಕಿ ಜಲಪಾತೋತ್ಸವವನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡುತ್ತೇವೆಂದು ಅನ್ನದಾನಿ ಹೇಳಿಕೆ ನೀಡಿರುವುದು ಸರಿಯಲ್ಲ, ಕಪ್ಪು ಭಾವುಟ ಪ್ರದರ್ಶನ ಮಾಡುವ ಸ್ಥಳದಲ್ಲಿಯೇ ಕಾಂಗ್ರೆಸ್ ಬಾವುಟ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಅನ್ನದಾನಿ ವಿರುದ್ದ ಪ್ರತಿಭಟನೆಗೆ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹತಾಶೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ಮಾಜಿ ಶಾಸಕ ಡಾ. ಕೆ. ಅನ್ನದಾನಿ ಹತಾಶೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಕಳೆದ ಬಾರಿ ಬರದ ನಡುವೆಯೂ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗಿತ್ತು. ಅನ್ನದಾನಿ ಅಧಿಕಾರದಲ್ಲಿದ್ದಾಗ ಒಂದು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸದೇ ನಿರ್ಲಕ್ಷ್ಯ ತೋರಿದರು. ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಲಗೂರು ಹೋಬಳಿ ನೀರಾವರಿ ಯೋಜನೆಗೆ ಬಿಡುಗಡೆ ಮಾಡಿದ 650 ಕೋಟಿ ಎಲ್ಲಿಗೆ ಹೋಯಿತು ಎಂದು ಮಾಜಿ ಶಾಸಕರು ಸ್ವಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಮಳವಳ್ಳಿಯಿಂದ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವವರಿಗೆ ತಾಲ್ಲೂಕಿನ ಕೆರೆ ಕಟ್ಟೆಗಳು ಕಣ್ಣಿಗೆ ಕಾಣಿಸಿಲ್ಲವೇ ? ಜಿಲ್ಲೆಯ ಜನರಿಗೆ ಸಮರ್ಪಕ ನೀರು ಕೊಡಬೇಕೆಂಬುವುದು ಸಂಸದರಿಗೂ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಮಾಜಿ ಶಾಸಕರು ಕೊಟ್ಟಿರುವ ಹೇಳಿಕೆಯನ್ನು ವಾಸಪ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ನೈತಿಕತೆ ಪ್ರದರ್ಶನ ಮಾಡಲಿ

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಎನ್ ವಿಶ್ವಾಸ್ ಮಾತನಾಡಿ, ರೈತರಿಗೆ ನೀರು ಕೊಡಿಸುವಲ್ಲಿ ಕೇಂದ್ರ ಮಂತ್ರಿಗಳಿಗೂ ಜವಾಬ್ದಾರಿ ಇದೆ, ಆದರೇ ಸಂಸದರಾಗಿ ಕೇಂದ್ರ ಸಚಿವರಾದ ಮೇಲೆ ಎಚ್‌ಡಿ ಕುಮಾರಸ್ವಾಮಿ ಒಂದು ಬಾರಿಯೂ ಕ್ಷೇತ್ರಕ್ಕೆ ಆಗಮಿಸದೇ ನಿರ್ಲಕ್ಷ್ಯ ತೋರಿದ್ದಾರೆ, ಕ್ಷೇತ್ರಕ್ಕೆ ಬಾರದಿರಲು ಮಾಜಿ ಶಾಸಕರ ಮೇಲಿನ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆ, ಮಾಜಿ ಶಾಸಕ ಅನ್ನದಾನಿ ಕಪ್ಪು ಬಾವುಟ ಪ್ರದರ್ಶನ ಮಾಡುವುದಾದರೇ ಮುಖ್ಯಮಂತ್ರಿಗಳ ಜೊತೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದವೂ ಕಪ್ಪು ಪ್ರದರ್ಶನ ಮಾಡುವುದರ ಮೂಲಕ ನೈತಿಕತೆ ಪ್ರದರ್ಶನ ಮಾಡಲಿ ಎಂದು ಆಗ್ರಹಿಸಿದರು.

ಹಾಡು ಹೇಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿ

ತಾ.ಪಂ ಮಾಜಿ ಉಪಾಧ್ಯಕ್ಷ ಸಿ. ಮಾಧು ಮಾತನಾಡಿ, ಅನ್ನದಾನಿ ಜಲಪಾತೋತ್ಸವ ಮಾಡುವ ಸಂದರ್ಭದಲ್ಲಿ ಕೆ.ಆರ್.ಎಸ್ ತುಂಬಿರಲ್ಲಿಲ್ಲ, ಸಾರ್ವಜನಿಕರ ವಿರೋಧದ ನಡುವೆಯೂ ಜಲಪಾತೋತ್ಸವವನ್ನು ಮಾಡಿದರು. ಆದರೇ ಪ್ರಸಕ್ತ ವರ್ಷ ಕಟ್ಟೆ ತುಂಬಿದೆ, ಪ್ರವಾಸಿ ತಾಣವನ್ನು ಅಭಿವೃದ್ದಿಗೊಳಿಸಲು ಜಲಪಾತೋತ್ಸವವನ್ನು ಆಚರಿಸಲಾಗುತ್ತಿದೆ, ನಿಗಧಿತ ನೀರಿಗಿಂತಲೂ ಹೆಚ್ಚಾಗಿ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ, ಮಂಡ್ಯ ಜಿಲ್ಲೆಯಲ್ಲಿ ಮಳೆ ಇಲ್ಲದ ಕಾರಣ, ಸ್ವಲ್ಪ ನೀರಿನ ಸಮಸ್ಯೆ ಉದ್ಬವವಾಗಿದ್ದರೂ ಸಮರ್ಪಕ ನೀರು ಕೊಡಿಸಲು ಶಾಸಕರು ಶ್ರಮ ವಹಿಸುತ್ತಿದ್ದಾರೆ, ಮಾಜಿ ಶಾಸಕರು ಅಭಿವೃದ್ದಿ ಕಾರ್ಯಕ್ರಮಗಳಿಗೆ ಕೈ ಜೋಡಿಸುವ ಬದಲು ಗೊಂದಲಪಡಿಸುವುದು ಸರಿಯಲ್ಲ, ಸೋತರೇ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತೇನೆಂದು ಮಾತುಕೊಟ್ಟಂತೆ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಬಂದು ಹಾಡು ಹೇಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್ ಮಾತನಾಡಿ, ಪ್ರವಾಸೋಧ್ಯಮವನ್ನು ಅಭಿವೃದ್ದಿ ಪಡಿಸಲು ಸರ್ಕಾರ ಕೊಟ್ಯಾಂತರ ರೂ ಹಣವನ್ನು ಖರ್ಚು ಮಾಡಿ ಹಲವು ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುತ್ತದೆ, ಅದರ ಭಾಗವಾಗಿ ಮಳವಳ್ಳಿ ತಾಲ್ಲೂಕಿನಲ್ಲಿ ಜಲಪಾತೋತ್ಸವ ಕಾರ್ಯಕ್ರಮ ನಡೆಯುತ್ತಿದೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ನಂತರ ಮಾಜಿ ಶಾಸಕ ಅನ್ನದಾನಿ ಅಸ್ಥಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದೇನೆ ಎನ್ನುವುದನ್ನು ತೋರಿಸಲು ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆಂದು ದೂರಿದರು.

ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿ.ಪಂ ಮಾಜಿ ಸದಸ್ಯೆ ಸುಜಾತ ಕೆ.ಎಂ ಪುಟ್ಟು ಮಾತನಾಡಿದರು.

ಗೋಷ್ಠಿಯಲ್ಲಿ ಮುಖಂಡರಾದ ದೇವರಾಜು, ಬಸವೇಶ್, ಕಿರಣ್‌ಶಂಕರ್, ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಶಿವಸ್ವಾಮಿ, ಶಿವಮಾದೇಗೌಡ, ಅಜೀಜ್, ಕೃಷ್ಣ, ರೋಹಿತ್, ಲಿಂಗರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!