Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಗಲಭೆ – ನ್ಯಾಯಾಂಗ ತನಿಖೆಗೆ ಸಿಪಿಐಎಂ ಆಗ್ರಹ

ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ, ಗಲಭೆ ಮತ್ತು ಹಿಂಸಾಚಾರ ಕೃತ್ಯಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆಗ್ರಹಿಸಿದ್ದಾರೆ.

ಕಳೆದ ವರ್ಷ ಇಂತಹದ್ದೇ ಘಟನೆಗಳು ವರದಿಯಾಗಿದ್ದಾಗಲೂ, ಆಗಾಗ್ಗೆ ಸಂಘ ಪರಿವಾರ ಪ್ರಚೋದಿತ ದುರ್ಘಟನೆಗಳು ವರದಿಯಾಗುತ್ತಿದ್ದರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆಯ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದಿಂದ ಇಂತಹ ಗಲಭೆಗಳು ಸಂಭವಿಸಿವೆ ಎಂದು ಅವರು ಪ್ರಟಕಣೆಯಲ್ಲಿ ದೂರಿದ್ದಾರೆ.

ಪೊಲೀಸ್ ಇಲಾಖೆ ಎಚ್ಚರ ವಹಿಸಿಲ್ಲ

ಸೌಹಾರ್ದತೆ, ಸಹಿಷ್ಣುತೆ, ಸಾಮರಸ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಸಂಕೇತಗಳಾಗಿರುವ ಹಬ್ಬಗಳನ್ನು ಪರಸ್ಪರ ವೈಷಮ್ಯ, ಧ್ವೇಷ, ಹಿಂಸೆಗಳನ್ನು ಪ್ರಚೋದಿಸಲು ಕೋಮುವಾದಿ -ಮೂಲಭೂತವಾದಿ ಶಕ್ತಿಗಳು ಬಳಸಿಕೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹೊಣೆಗಾರಿಕೆ ಇರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಹಿಸಬೇಕಾದ ಎಚ್ಚರ ವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುವ ಸಂಗತಿಯಾಗಿದೆ. ಇಡೀ ಕೃತ್ಯ ಮತ್ತು ನಂತರದ ಘಟಕಗಳ ಹೊಣೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೊರಬೇಕೆಂದು ಸಿಪಿಐಎಂ ಹೇಳಬಯಸುತ್ತದೆ ಎಂದಿದ್ದಾರೆ.

ಅಶಾಂತಿ, ಗಲಭೆ, ಹಿಂಸಾಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಗಣೇಶ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪೊಲೀಸ್ ಮಾರ್ಗಸೂಚಿಗಳು ಕಡ್ಡಾಯವಾಗಿ ಪಾಲನೆ ಆಗುವಂತೆ, ಇಂತಹ ಧಾರ್ಮಿಕ ಮೆರವಣಿಗೆ ಸಂದರ್ಭದಲ್ಲಿ ಪ್ರಚೋದನಾಕಾರಿಯಾಗಿ ವರ್ತಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ ಮತ್ತು ದುರುದ್ದೇಶ ಹಾಗೂ ಕೋಮುವಾದಿ ಕಿಡಿಗೇಡಿಗಳ ಬಗ್ಗೆ ಸೂಕ್ತ ನಿಗಾ ಇಟ್ಟಿದ್ದರೆ ನಾಗಮಂಗಲದ ದುರ್ಘಟನೆಯನ್ನು ತಪ್ಪಿಸಬಹುದಿತ್ತು. ಮುಂದೆ ಈ ರೀತಿ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಅತೀವ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ವಹಿಸಿರುವ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಗಲಭೆಯಲ್ಲಿ ಆಸ್ತಿ ಪಾಸ್ತಿ ನಷ್ಟ ಅನುಭವಿಸಿರುವ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು. ಅದೇ ಸಂದರ್ಭದಲ್ಲಿ ಜನತೆಯನ್ನು ಅವರ ಬದುಕಿನ ಜ್ವಲಂತ ಸಮಸ್ಯೆಗಳಿಂದ ವಿಮುಖಗೊಳಿಸಿ ಗಲಭೆ ಹಬ್ಬಿಸುವ ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ವಿರುದ್ಧ ಜನತೆ ಜಾಗೃತರಾಗಬೇಕು ಮತ್ತು ಶಾಂತಿ, ಸೌಹಾರ್ದ ಕಾಪಾಡಿಕೊಳ್ಳಬೇಕೆಂದು ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!