Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕಿನ ವಿಲೀನಕ್ಕೆ ಹುನ್ನಾರ: ಸುಜಾತ

ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕನ್ನು ವಿಜಯನಗರ ಜಿಲ್ಲೆಯ ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬ್ಯಾಂಕಿನ ನಿರ್ದೇಶಕಿ ಸಿಜೆ ಸುಜಾತ ದೂರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ ಪಾವನಿ ಮಹಿಳಾ ಬ್ಯಾಂಕ್ ಸ್ಥಾಪಿಸಿ 28 ವರ್ಷಗಳು ಕಳೆದಿದೆ. ಈಗಿನ ಆಡಳಿತ ಮಂಡಳಿ ಬ್ಯಾಂಕ್ ನಷ್ಟದಲ್ಲಿದೆ ಅನ್ನುತ್ತಿದೆ. 16 ಮಂದಿ ಸುಸ್ತಿದಾರರು ಇದ್ದಾರೆ ಎನ್ನುತ್ತಿದೆ. ಈ ಎಲ್ಲರಿಗೂ ತಲಾ 10 ಲಕ್ಷ ರೂಪಾಯಿ ಸಾಲ ನೀಡಿದ್ದು, ಈ ಸಾಲವನ್ನು ವಸೂಲಿ ಮಾಡದೇ ಬ್ಯಾಂಕ್ ನಷ್ಟದ ಹಿನ್ನೆಲೆಯಲ್ಲಿ ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ಲೋಕ ಪಾವನಿ ಬ್ಯಾಂಕನ್ನು ವಿಲೀನಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ, ಆದರೆ ವಿಲೀನಕ್ಕೆ ಬ್ಯಾಂಕಿ ಬಹುತೇಕ ನಿರ್ದೇಶಕರು ಹಾಗೂ ಸದಸ್ಯರ ಪ್ರಬಲ ವಿರೋಧವಿದೆ ಎಂದು ವಿವರಿಸಿದರು.

ಸುಸ್ತಿದಾರರಿಂದ ಸಾಲ ವಸೂಲಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ .ಆದರೆ ಈಗಿನ ಆಡಳಿತ ಮಂಡಳಿ ಸಾಲ ವಸೂಲಾತಿಗೆ ಮುಂದಾಗದ ಸಬೂಬು ಹೇಳುತ್ತಿದೆ. ಇತ್ತೀಚಿಗೆ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನಲ್ಲಿ ಮೋಸ ನಡೆಯುತ್ತಿರುವ ಬಗ್ಗೆ ಸದಸ್ಯರ ಗಮನಕ್ಕೆ ತಂದಿದ್ದೇವೆ. ಬ್ಯಾಂಕ್ ವಿಲೀನಗೊಳಿಸುವ ವಿಚಾರವನ್ನು ತಿಳಿಸಿದ್ದೇವೆ. ವಿಲೀನಕ್ಕೆ ಸದಸ್ಯರು ಒಪ್ಪಿಗೆ ನೀಡಿಲ್ಲ. ನಮ್ಮಲ್ಲಿಯೇ ಬ್ಯಾಂಕ್ ಉಳಿಯಲಿ ಎನ್ನುವ ಆಶಯ ಅವರಲ್ಲಿದೆ ಎಂದರು.

ಬ್ಯಾಂಕಿನ ನಿರ್ದೇಶಕರಾದ ವಿಜಯಲಕ್ಷ್ಮಿ ರಘುನಂದನ್, ಪ್ರಮೀಳಾ ಧರಣೇಂದ್ರಯ್ಯ ,ಗೀತಾ ರಾಜಶೇಖರ್, ಸಿ ಸೌಭಾಗ್ಯ, ಸುನಂದ , ಯಶೋಧ ರಮೇಶ್, ವಿ.ಆರ್ ಲೀಲಾ, ವೇದವಲ್ಲಿ, ಶಾರದಾ ರಮೇಶ ರಾಜು, ಬಿ ಎಸ್ ಸೌಮ್ಯ ,ಸುನಿಲ್ ಕುಮಾರ್ ಸೇರಿದಂತೆ ಹಲವರು ಸಾಲ ಪಡೆದಿದ್ದು ಆದರೆ ಇವರಿಂದ ಸಾಲ ವಸೂಲಾತಿ ಮಾಡಿಲ್ಲ ಎಂದು ದೂರಿದರು.

ಮತ್ತೊಬ್ಬ ನಿರ್ದೇಶಕಿ ಜಯಶೀಲಮ್ಮ ಮಾತನಾಡಿ, ಬ್ಯಾಂಕಿನಿಂದ 247 ಮಂದಿ ಸಾಲ ಪಡೆದಿದ್ದಾರೆ. ಆದರೆ ಈಗಿನ ಆಡಳಿತ ಮಂಡಳಿ ಪ್ರತಿಯೊಬ್ಬರಿಗೂ ತಲಾ 20 ಸಾವಿರದಿಂದ 50,000 ರೂಪಾಯಿ ಸಾಲ ನೀಡಿದ್ದು, ಸಾಲ ವಸೂಲಾತಿ ಮಾಡದೆ ಸಾಲ ಮನ್ನಾ ಆಗಿದೆ ಎಂದು ಎನ್ ಓ ಸಿ ನೀಡಿದ್ದಾರೆ, ಇದರಲ್ಲಿ ಅಕ್ರಮ ನಡೆದಿದ್ದು, ಆಡಳಿತ ಮಂಡಳಿ ಶಾಮೀಲಾಗಿದೆ ಎಂದು ವಿವರಿಸಿದರು.

2008- 2009 ರಿಂದ ಬ್ಯಾಂಕ್ ನಷ್ಟ ಅನುಭವಿಸುತ್ತ ಬರುತ್ತಿದೆ. ಈ ನಡುವೆ ಅಂದಿನ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು .ಆ ಸಂದರ್ಭದಲ್ಲಿ ಅವರು ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ನಂತರ ನಿರೀಕ್ಷಣಾ ಜಾಮೀನು ಪಡೆದು ಕೊಂಡು ಕೆಲವರು ಆಡಳಿತ ಮಂಡಳಿಯಲ್ಲೇ ಇದ್ದಾರೆ ಎಂದು ದೂರಿದರು.

ಸಾರ್ವಜನಿಕರ ಮತ್ತು ಷೇರುದಾರರ ಒತ್ತಾಯದ ಮೇರೆಗೆ ಇಲಾಖೆಯಿಂದ ಕಲಂ 64ರ ಅಡಿ ಕೂಲಂಕುಶ ವಿಚಾರಣೆ ನಡೆದು ದುರುಪಯೋಗದ ಹಣವನ್ನು ಅಂದಿನ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕರು ಪಾವತಿಸಬೇಕೆಂದು ಆದೇಶವಾಗಿದೆ. ನಂತರ ಕಲಂ 68ರ ಅಡಿ ವಸೂಲಾತಿಗೂ ಆದೇಶವಾಗಿದೆ .ಆದರೆ ಈ ಪ್ರಕ್ರಿಯೆಗಳು ನಡೆದಿಲ್ಲ. ಆದ್ದರಿಂದ ತಪ್ಪಿತಸ್ಥರ ಕ್ರಮ ತೆಗೆದುಕೊಂಡು ಸಾಲ ವಸೂಲಾತಿ ಮಾಡಬೇಕು. ಯಾವುದೇ ಕಾರಣಕ್ಕೂ ಲೋಕ ಪಾವನಿ ಮಹಿಳಾ ಸಹಕಾರ ಬ್ಯಾಂಕನ್ನು ವಿಕಾಸ ಸೌಹಾರ್ದ ಬ್ಯಾಂಕಿನೊಂದಿಗೆ ವಿಲೀನ ಮಾಡಬಾರದು ಎಂದು ಒತ್ತಾಯಿಸಿದರು .

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಸುನಂದ ಜಯರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಕೆ ಸಿ ನಾಗಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೌಭಾಗ್ಯ ಮಹಾದೇವ, ಸುಜಾತ ಸಿದ್ದಯ್ಯ ,ಎ ಜೆ ವತ್ಸಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!