Monday, September 23, 2024

ಪ್ರಾಯೋಗಿಕ ಆವೃತ್ತಿ

ಹಿಂದೂ ಧಾರ್ಮಿಕ ಆಚರಣೆಗಳು ಬಿಜೆಪಿಯವರ ಸ್ವತ್ತಲ್ಲ; ಚಲುವರಾಯಸ್ವಾಮಿ

ಹಿಂದೂ ಧಾರ್ಮಿಕ ಆಚರಣೆ, ಹಿಂದೂ ಸಂಪ್ರದಾಯಗಳು, ಗಂಗಾರತಿ, ಕಾವೇರಿ ಆರತಿ ಇವೆಲ್ಲವೂ ಬಿಜೆಪಿಗರ ಗುತ್ತಿಗೆ ಅಲ್ಲ. ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ವಾರಾಣಸಿ, ಹರಿದ್ವಾರಗಳಲ್ಲಿ ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ  ಎಂದು ಕೃಷಿ ಸಚಿವ ಹಾಘೂ ಕಾವೇರಿ ಆರತಿ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಅನ್ನೋ ಪಕ್ಷ, ಹಿಂದೂ ಮಹಾ ಸಭಾಗಳಂತಹ ಸಂಘಟನೆಗಳು ಹುಟ್ಟುವುದಕ್ಕಿಂತ ಮೊದಲೇ ಈ ಧಾರ್ಮಿಕ ಆಚರಣೆಗಳು ಇವೆ. ಈ ಮೊದಲು ಗಂಗಾರತಿ, ಅಯೋಧ್ಯೆಯೂ ಇತ್ತು. ಇವೆಲ್ಲವೂ ಬಿಜೆಪಿ ಬಂದ ಮೇಲೆ ಬಂದಿದ್ದಲ್ಲ. ಸಂಪ್ರದಾಯ, ಧಾರ್ಮಿಕ ಆಚರಣೆಗಳು ಬಿಜೆಪಿ ಮತ್ತು ಅಶೋಕ್ ಅವರ ಗುತ್ತಿಗೆ ಅಲ್ಲ. ಎಲ್ಲ ಪರಂಪರೆಗಳನ್ನು ಕಾಂಗ್ರೆಸ್ ಪಕ್ಷವು ಮುಂದುವರಿಸಿಕೊಂಡು ಬಂದಿರುವುದಕ್ಕೆ ಇಂದು ಬಿಜೆಪಿಯವರು ಈ ವಿಷಯವನ್ನು ಇಟ್ಟುಕೊಂಡು ಎಗರಾಡುತ್ತಿದ್ದಾರೆ. ಇದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಧಾರ್ಮಿಕ ಆಚರಣೆ ನೆಪದಲ್ಲಿ ಕಿಡಿಗೇಡಿ ಕೆಲಸ ಮಾಡಿದರೆ ಕಾನೂನು ಕ್ರಮವನ್ನು ಕೈಗೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿಯಾಗುತ್ತದೆ. ಇದು ಅವರ ಸರ್ಕಾರ ಇದ್ದರೂ ಸರಿ, ನಮ್ಮ ಸರ್ಕಾರ ಇದ್ದರೂ ಸರಿ. ಕಾನೂನು ಬಾಹಿರ ಘಟನೆಗಳು ಆದಾಗ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದು ಗಣೇಶ ಕಾರ್ಯಕ್ರಮವಾಗಲಿ ಅಥವಾ ಇನ್ಯಾವುದೇ ಕಾರ್ಯಕ್ರಮಗಳಾಗಲಿ, ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಅದನ್ನು ಹಾಗೆ ಪಾಲನೆ ಮಾಡಲಾಗಿದೆ, ಹೀಗೆ ಪಾಲನೆ ಮಾಡಲಾಗಿದೆ ಎಂದು ವ್ಯಂಗ್ಯವಾಡುವುದು ಈ ಹಿಂದೆ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿದ್ದ ಅಶೋಕ್ ಅವರಿಗೆ ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ಗಂಗಾರತಿ ಇರಲಿ, ದಸರಾ ಆಚರಣೆ ಇರಲಿ, ಜಾತ್ರೆ ಸಮಾರಂಭಗಳಿದ್ದರೂ ಸಹ ಬಿಜೆಪಿಯವರು ತಮ್ಮ ಸ್ವತ್ತು ಎಂಬ ರೀತಿ ನೋಡುತ್ತಿದ್ದಾರೆ. ಇದು ಈ ನೆಲದ ವಾಸಿಗಳ ಹಕ್ಕಾಗಿದೆ. ಇದನ್ನು ಎಲ್ಲರೂ ಮಾಡುವಂತದ್ದಾಗಿದೆ. ಉತ್ತರ ಭಾರತದಲ್ಲಿ ಮಾಡುತ್ತಿರುವುದನ್ನು ದಕ್ಷಿಣ ಭಾರತದಲ್ಲಿ ಮಾಡಬೇಕು. ಅದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಅದನ್ನು ಅಶೋಕ್ ಅವರು ಅಭಿನಂದನೆ ಮಾಡುತ್ತಾರೆ, ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಇವರು ಹೀಗೆ ಮಾತನಾಡುತ್ತಾರೆ ಎಂದರೆ ಅದರ ಬಗ್ಗೆ ಇವರಿಗೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರ ಈ ವರ್ತನೆಯನ್ನು ಗಮನಿಸಿದರೆ ಇವರು ನಿಜವಾದ ಧಾರ್ಮಿಕ ವಿರೋಧಿಗಳು ಎಂಬುದು ಗೊತ್ತಾಗುತ್ತದೆ. ಇವರು ಎಲ್ಲ ವಿಷಯಕ್ಕೂ ರಾಜಕೀಯ ಬಣ್ಣ ರಾಜಕೀಯ ಲೇಪನ ಮಾಡುತ್ತಾರೆಂದು ಅನಿಸುತ್ತದೆ. ಕಾಂಗ್ರೆಸ್ ನವರು ಇಂಥದ್ದೊಂದು ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಂತೂ ಮಾಡಲು ಆಗಲಿಲ್ಲ. ಇದನ್ನು ನಾವು ಬೆಂಬಲಿಸಬೇಕು, ಪ್ರಶಂಸೆ ವ್ಯಕ್ತಪಡಿಸೋಣ ಎಂದು ಅಶೋಕ್ ಅವರು ಹೇಳಬಹುದಿತ್ತು. ಆದರೆ ಇವರು ಮಾಡುತ್ತಿರುವುದೇನು? ಬರೀ ಟೀಕೆ, ವ್ಯಂಗ್ಯ!! ಎಂದು ಮೂದಲಿಸಿದ್ದಾರೆ.

ಇವರ ಒಂದು ಕೀಳುಮಟ್ಟದ ಮನಸ್ಥಿತಿ ಜನಕ್ಕೆ ಗೊತ್ತಾಗುತ್ತಿದೆ. ಕೇವಲ ಘೋಷಣೆಗಳನ್ನು ಕೂಗಿದರೆ, ಕೇಸರಿ ಶಾಲು ಹಾಕಿಕೊಂಡರೆ, ಮೆರವಣಿಗೆಗಳನ್ನು ಮಾಡಿದರೆ ಹಿಂದುತ್ವ ಅಲ್ಲ. ವ್ಯವಸ್ಥಿತವಾಗಿ ಆಚರಣೆಗಳನ್ನು ಮಾಡುವುದು, ಧಾರ್ಮಿಕ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವುದು ಮುಖ್ಯವಾಗಿದೆ. ಈ ಕೆಲಸವನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಇದನ್ನು ಅಭಿನಂದಿಸುವ ಕೆಲಸವನ್ನು ನೀವು ಮೊದಲು ಮಾಡಿ. ನೀವು ನಿಜವಾಗಿ ಸಂಸ್ಕಾರವಂತರಾಗಿದ್ದರೆ ಇದನ್ನು ಬೆಂಬಲಿಸಬೇಕಿತ್ತು. ಆದರೆ ಆ ಸಂಸ್ಕಾರ ಬಿಜೆಪಿಯವರಿಗೆ ಇದ್ದಂತೆ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!