Wednesday, September 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೈಕ್ರೋ ಫೈನಾನ್ಸ್ ಗಳು ದಬ್ಬಾಳಿಕೆ ನಡೆಸುವಂತಿಲ್ಲ: ಜಿಲ್ಲಾಧಿಕಾರಿ ಎಚ್ಚರಿಕೆ

ಮೈಕ್ರೋ ಫೈನಾನ್ಸ್ ಗಳು ಸಾಲ ನೀಡುವಾಗ, ವಸೂಲಾತಿ ಮಾಡುವಾಗ ಕಡ್ಡಾಯವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್.ಬಿ.ಐ) ನಿಯಮ ಪಾಲಿಸಿ, ಸಾಲ ವಸೂಲಾತಿ ಮಾಡಲು ನಿಗದಿಯಾಗಿರುವ ಸಮಯದಲ್ಲೇ ತೆರಳಿ ವಸೂಲಿ ಮಾಡಬೇಕು, ಆ ಸಮಯದಲ್ಲಿ ದಬ್ಬಾಳಿಕೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಖಡಕ್ ಸೂಚನೆ ನೀಡಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಭೆ ನಡೆಸಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ನೀಡಿದ ನಂತರ ಸಾಲದ ಕಂತು ಹಿಂಪಡೆಯಲು ಹೋಗುವ ಸಿಬ್ಬಂದಿಗಳು ಸಭ್ಯವಾಗಿ ವರ್ತಿಸಬೇಕು. ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಬ್ಬಾಳಿಕೆ ಮಾಡಿದರೆ ಕ್ರಮ

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆಯುವವರು ಬಡ ಕುಟುಂಬದವರು ಹಾಗೂ ಅವರು ಸಾಲ ಪಡೆಯುವುದು ಕೇವಲ ಒಂದರಿಂದ ಎರಡು ಲಕ್ಷ ಆಗಿರುತ್ತದೆ. ಅವರು ಸಾಲದ ಕಂತು ಪಾವತಿ ಕೇವಲ ಸಾವಿರ ಇರುತ್ತದೆ. ಅವರನ್ನು ಸಾಲ ಮರುಪಾವತಿ ಮಾಡಿಲ್ಲ ಎಂದು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು, ದಬ್ಬಾಳಿಕೆ ಮಾಡುವುದರಿಂದ ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಕೃತ್ಯ ಸಂಭವಿಸುತ್ತಿವೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿ ಮಾಡುತ್ತಿದೆ ಎಂದರು.

ಸಾಲದ ಕಂತು ಪಡೆಯಲು ಮನೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಬೇಕು. ಮನೆಯಲ್ಲಿ ನೆಂಟರು ಅಥವಾ ಮಕ್ಕಳ ಮುಂದೆ ಸಾಲದ ಕಂತು ಮರುಪಾವತಿ ಮಾಡಿ ಎಂದು ಕೇಳಿದಾಗ ಸಾರ್ವಜನಿಕವಾಗಿ ಅವಮಾನವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಬಡ್ಡಿಯ ಬಗ್ಗೆ ಮಾಹಿತಿ

ಸಾಲದ ಮೇಲೆ ವಿಧಿಸುವ ಬಡ್ಡಿಯ ಬಗ್ಗೆ ಮಾಹಿತಿ ನೀಡಬೇಕು, ಸಾರ್ವಜನಿಕರಿಗೆ ಸಾಲವನ್ನು ಮಂಜೂರಾತಿ ಮಾಡುವಾಗ ಸಾಲದ ಮೇಲೆ ವಿಧಿಸುವ ಬಡ್ಡಿ, ಪ್ರೊಸೆಸಿಂಗ್ ಶುಲ್ಕದ ಬಗ್ಗೆ ಕನ್ನಡದಲ್ಲಿ ತಿಳಿಸಿ. ಸಾಲ ಮರುಪಾವತಿಗೆ ವಿಧಿಸಿರುವ ಷರತ್ತುಗಳನ್ನು ಕನ್ನಡದಲ್ಲಿ ತಿಳಿಸಬೇಕು. ಸಾಲದ ಕಂತು ಮರುಪಾವತಿ ಮಾಡಲು ತಡ ಮಾಡಿದರೆ ಲಿಖಿತವಾಗಿ ನೊಟೀಸ್ ಜಾರಿ ಮಾಡಿ, ಅವರ ಕಷ್ಟಗಳ ಬಗ್ಗೆ ತಿಳಿದುಕೊಂಡು ಸಮಯಾವಕಾಶ ನೀಡಿ ಎಂದರು.

ದೂರು ಕೇಂದ್ರ ತೆರೆಯಿರಿ

ಮೈಕ್ರೋ ಫೈನಾನ್ಸ್ ಕುರಿತು ಹಲವಾರು ದೂರುಗಳು ಜಿಲ್ಲಾಡಳಿತಕ್ಕೆ ಬರುತ್ತದೆ. ಅವುಗಳನ್ನು ‌ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಒಂದು ದೂರು ಕೇಂದ್ರ ಹಾಗೂ ತಾಲ್ಲೂಕು ಮಟ್ಟದಲ್ಲಿ ಒಬ್ಬರು ನೋಡಲ್ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.

ತರಬೇತಿ ನೀಡಿ ಹಾಗೂ ವರದಿ ಸಲ್ಲಿಸಿ

ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್ ಗಳು ತಮ್ಮ ಸಿಬ್ಬಂದಿಗಳಿಗೆ ಸಾಲ ವಸೂಲಾತಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಬಗ್ಗೆ ತರಬೇತಿ ನೀಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದರು.

ಮೈಕ್ರೋ ಫೈನಾನ್ಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಬೇಕು. ಅವರು ತಮ್ಮ ಸಂಸ್ಥೆಯ ಕಚೇರಿಯ ಮುಂದೆ ನಾಮಫಲಕಗಳನ್ನು ಅಳವಡಿಸಬೇಕು‌ ಎಂದರು.

ಮುಖಂಡರಾದ ವೆಂಕಟಗಿರಿಯಯ್ಯ ಮಾತನಾಡಿ, ಡಿ.ಸಿ.ಸಿ. ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ. ಇಲ್ಲಿ ಅವರೇ ಖುದ್ದು ಬ್ಯಾಂಕಿಗೆ ಹೋಗಿ ಸಾಲ ಮರುಪಾವತಿ ಮಾಡುತ್ತಾರೆ. ಇಲ್ಲಿ ಇರುವ ಒಳ್ಳೆಯ ನೀತಿಗಳನ್ನು ಮೈಕ್ರೋ ಫೈನಾನ್ಸ್ ಗಳು ಬಳಸಿಕೊಳ್ಳಬೇಕು ಎಂದರು.

ಸಾಲ ನೀಡುವಾಗ ಅವರಿಗೆ ಮರುಪಾವತಿ ಮಾಡುವ ಶಕ್ತಿಯನ್ನು ಪರಿಶೀಲಿಸದೆ ಸಾಲ ನೀಡುವುದು. 4-5 ಮೈಕ್ರೋ ಫೈನಾನ್ಸ್ ಗಳು ಒಬ್ಬರಿಗೆ ಸಾಲ ನೀಡುವುದು, ನಂತರ ದಬ್ಬಳಿಕೆಯ ಅಸ್ತ್ರ ಪ್ರಯೋಗಿಸುವುದು ಕಂಡುಬರುತ್ತಿದೆ. ಇವುಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಸಹಾಯಕವಾಗುವ ರೀತಿ ಕಾರ್ಯನಿರ್ವಹಿಸಿ ಎಂದರು‌.

ಸಭೆಯಲ್ಲಿ ಮಂಡ್ಯ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ ಎನ್, ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಮಂಜುನಾಥ್, ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!