Saturday, October 19, 2024

ಪ್ರಾಯೋಗಿಕ ಆವೃತ್ತಿ

ಎಚ್. ಡಿ.ಕುಮಾರಸ್ವಾಮಿ ವಿರುದ್ಧ ದೂರು : ಎಡಿಜಿಪಿ ಚಂದ್ರಶೇಖರ್

  • ಮಾಜಿ ಸಿಎಂ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಐಪಿಎಸ್‌ ಅಧಿಕಾರಿ
  • ಬೆದರಿಕೆ, ಸುಳ್ಳು ಆರೋಪ: ಎಚ್‌ಡಿಕೆ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು
  • ದೂರನ್ನು ದಾಖಲಿಸಿಕೊಂಡಿರುವ ಬೆಂಗಳೂರಿನ ಸಂಜಯ್ ನಗರ ಪೊಲೀಸರು

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್, ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಎಡಿಜಿಪಿ ಚಂದ್ರಶೇಖರ್, ಮಾಜಿ ಸಿಎಂ ಕುಮಾರಸ್ವಾಮಿಯವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ಮೌಖಿಕವಾಗಿ ಬೆದರಿಸಿದ್ದಾರೆ. ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದ ವಿರುದ್ಧವೂ ಸಹ ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ನಾನು ಲಂಚ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.

“ಕ್ರಿಮಿನಲ್ ಮೊಕದ್ದಮೆ ಸಂಖ್ಯೆ 16/2014ರಲ್ಲಿ ಆರೋಪಿಯಾಗಿರುವ ಕುಮಾರಸ್ವಾಮಿಯವರು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್‌ಐಟಿ ಕಳಿಸಿರುವ ಪತ್ರವನ್ನು ಮತ್ತು ದಾಖಲೆಗಳನ್ನು ಪತ್ರಿಕಾಗೋಷ್ಠಿಗಳಲ್ಲಿ ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಕಳುಹಿಸಲಾದ ಈ ದಾಖಲೆಗಳು, ಅದೇ ಪ್ರಕರಣದಲ್ಲಿ ಆರೋಪಿಯಾದ ಕುಮಾರಸ್ವಾಮಿಯವರ ಕೈಗೆ ಸಿಕ್ಕಿದ್ದಾದರೂ ಹೇಗೆ? ಅವರು ತಮ್ಮ ಕೇಂದ್ರ ಮಂತ್ರಿ ಪದವಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ” ಎಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಕೀಳುಮಟ್ಟದ ಕ್ರಿಮಿನಲ್‌ಗಳು ಕೂಡ ಕುಟುಂಬ ಮತ್ತು ಮಕ್ಕಳನ್ನು ತಮ್ಮ ದ್ವೇಷ ವ್ಯವಹಾರದಿಂದ ದೂರವಿಡುತ್ತಾರೆ. ಆದರೆ, ಕುಮಾರಸ್ವಾಮಿಯವರು ನನ್ನ ಕುಟುಂಬದ ಮೇಲೆಯೂ ಸುಳ್ಳು ಆರೋಪ ಹೊರಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

“ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿಯವರು ನನ್ನ ವಿರುದ್ಧ ಸುಳ್ಳು ಮತ್ತು ದುರುದ್ಧೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿಯವರ ಆಪ್ತ ಸುರೇಶ್ ಬಾಬು ಕೂಡ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಬೆದರಿಕೆ ಹಾಕಿದ್ದಾರೆ” ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ಅವರು ಸಂಜಯ್ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರನ್ನು ದಾಖಲಿಸಿಕೊಂಡಿರುವ ಬೆಂಗಳೂರಿನ ಸಂಜಯ್ ನಗರ ಪೊಲೀಸರು, ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!