Tuesday, October 22, 2024

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ | ಮೆರವಣಿಗೆ ಸಂಘಟಿಸಲು 95 ಲಕ್ಷ ರೂ.ಗಳ ಅಂದಾಜು ಬಜೆಟ್

ಡಿ.20 ರಿಂದ ಮೂರು ದಿನ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ವ್ಯವಸ್ಥಿತಿ ಮತ್ತು ವರ್ಣರಂಜಿತವಾಗಿ ಸಂಘಟಿಸಲು ಒಟ್ಟು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಬಜೆಟ್ ಅನ್ನು ಮೆರವಣಿಗೆ ಸಮಿತಿಯ ಉಪ ಸಮಿತಿಗಳು ಮಂಡಿಸಿದವು.

ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅ. 23ರಂದು ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಭೆಯ ಹಿನ್ನೆಲೆಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಅವರು ಸಮಿತಿಗೆ ಬೇಕಾಗಬಹುದಾದ ಅನುದಾನ ಕೋರಲು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಪ ಸಮಿತಿಗಳ ಸಂಚಾಲಕರ ಸಭೆ ನಡೆಸಿದರು.

ಈ ವೇಳೆ 10 ವಿವಿಧ ಉಪ ಸಮಿತಿಗಳ ಸಂಚಾಲಕರು ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ತಮ್ಮ ಸಮಿತಿಗಳಿಗೆ ಬೇಕಾಗಬಹುದಾದ ಅಂದಾಜು ವೆಚ್ಚದ ಮಾಹಿತಿಯನ್ನು ಮಂಡಿಸಿದರು.

ಕಲಾತಂಡ ಆಯ್ಕೆ ಉಪ ಸಮಿತಿ ರೂ. 31.45 ಲಕ್ಷ; ಸ್ತಬ್ಧಚಿತ್ರ ಉಪ ಸಮಿತಿ ರೂ. 21 ಲಕ್ಷ; ಪೂರ್ಣಕುಂಭ ಉಪ ಸಮಿತಿ ರೂ. 1 ಲಕ್ಷ; ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ ರೂ. 1.30 ಲಕ್ಷ; ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಎನ್.ಸಿ.ಸಿ. ತಂಡಗಳ ಸಂಯೋಜನಾ ಉಪ ಸಮಿತಿ ರೂ.1.50 ಲಕ್ಷ; ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ ರೂ. 6 ಲಕ್ಷ; ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ ರೂ. 1.75 ಲಕ್ಷ; ಸಂಘ-ಸಂಸ್ಥೆಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ; ಶಾಲಾ-ಕಾಲೇಜುಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ ಹಾಗೂ ಸಮ್ಮೇಳನ ಅಧ್ಯಕ್ಷರ ರಥ, ಜಿಲ್ಲಾ ಅಧ್ಯಕ್ಷರ ರಥ ಸೇರಿದಂತೆ ಇನ್ನಿತರೆ ವೆಚ್ಚ ಸೇರಿ ರೂ. 30 ಲಕ್ಷ ಸೇರಿದಂತೆ ಒಟ್ಟು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಮಾಹಿತಿಯನ್ನು ಉಪ ಸಮಿತಿಗಳ ಸಂಚಾಲಕರು ಮಂಡಿಸಿದರು.

ಸಮಿತಿಯ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಸಾಕಷ್ಟು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನವನ್ನು ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ, ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಸಮಿತಿಯ ಕಾರ್ಯಾಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಸದಸ್ಯ ಕಾರ್ಯದರ್ಶಿ ನಂದೀಶ್ ಬಿ.ವಿ. ಸಂಚಾಲಕ ಕಾರಸವಾಡಿ ಮಹದೇವು ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು ಸಭೆಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!