Thursday, September 19, 2024

ಪ್ರಾಯೋಗಿಕ ಆವೃತ್ತಿ

ದುಡಿಯುವ ಜನರ ಶ್ರಮ ದೋಚುತ್ತಿದ್ದಾರೆ

ಇಂದು ದೇಶದಲ್ಲಿ ದುಡಿಯುವ ವರ್ಗದ ಜನರ ಶ್ರಮವನ್ನು ದೋಚಿ ಕೆಲವೇ ಕೆಲವು ಬಂಡವಾಳಶಾಹಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಹಿರಿಯ ರೈತನಾಯಕಿ ಅನುಸೂಯಮ್ಮ ಅರಳಾಳುಸಂದ್ರ ಕಳವಳ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ದಶಮಾನೋತ್ಸವ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ದಲಿತರು, ರೈತರು, ಕೃಷಿ ಕಾರ್ಮಿಕರ ಶ್ರಮವನ್ನು ದೋಚಿ ಕೆಲವು ಬಂಡವಾಳಶಾಹಿಗಳು ಶ್ರೀಮಂತರಾಗುತ್ತಿದ್ದಾರೆ. ದೇಶದಲ್ಲಿ ಅನಿಷ್ಟ ಶಕ್ತಿಗಳು ಅಧಿಕಾರಕ್ಕೆ ಬಂದು ದುಡಿಯುವ ವರ್ಗವನ್ನು ದೋಚುವ ಹುನ್ನಾರ ನಡೆಸಿದ್ದು, ಅವರನ್ನು ಜೀತದಾಳಿನಂತೆ ನಡೆಸಿಕೊಳ್ಳುತ್ತಿವೆ. ನಮ್ಮ ಜನರ ಶ್ರಮದಿಂದ ಶ್ರೀಮಂತರು ಶ್ರೀಮಂತರಾಗುತ್ತಿದ್ದರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂದು ಎಂದು ವಾಗ್ದಾಳಿ ನಡೆಸಿದರು.

80ರ ದಶಕದಲ್ಲಿ ರೈತ ಹಾಗೂ ದಲಿತ ಚಳುವಳಿ ಉಚ್ಛ್ರಾಯವಾಗಿದ್ದ ಸಂದರ್ಭದಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆದಿರಲಿಲ್ಲ. ಈಗ ಸಂಘಟನೆಗಳ ಶಕ್ತಿ ಕಡಿಮೆಯಾದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಜಾಗತೀಕರಣ ಬಂದಮೇಲೆ ದೇಶದಲ್ಲಿ ದುಡಿಯುವ ವರ್ಗದ ಅಸ್ತಿತ್ವ ನಾಶವಾಗಿದೆ. ಜಾಗತೀಕರಣದ ವಿರುದ್ಧ ಅಂದೇ ಎಲ್ಲಾ ಸಂಘಟನೆಗಳು ಒಟ್ಟಾಗಿ ಹೋರಾಟ ರೂಪಿಸಿದ್ದರೆ ಇವತ್ತು ಇಂತಹ ಕಠಿಣ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

2014ರಲ್ಲಿ ನರಿಬುದ್ಧಿ ತೋರಿಸಿ ಬಂದ ಸರ್ಕಾರ ದುಡಿಯುವ ವರ್ಗದದವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ, ಕಪ್ಪು ಹಣ ತರುತ್ತೇವೆ, ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಬಂದ ಸರ್ಕಾರ ಅವೆಲ್ಲವನ್ನು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಆರೆಸ್ಸೆಸ್ ನಿಂದ ಬಂದಂತಹ ವ್ಯಕ್ತಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದಾನೆ. ಮಕ್ಕಳಲ್ಲಿ ವೈಚಾರಿಕತೆ, ಸೈದ್ಧಾಂತಿಕತೆ, ಹೋರಾಟದ ಮನೋಭಾವ ಎಲ್ಲವನ್ನು ತುಂಬುವ ಪಠ್ಯಪುಸ್ತಕದ ಬದಲು ಮೂಢನಂಬಿಕೆ, ದೇವರು-ಧರ್ಮ, ಯಜ್ಞ,ಯಾಗ, ವೇದ, ಉಪನಿಷತ್ ಎಂದೆಲ್ಲ ಮಕ್ಕಳಿಗೆ ಮೂಢನಂಬಿಕೆ, ಅಂಧ ಶ್ರದ್ಧೆಯನ್ನು ತುಂಬಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಜನಾಂದೋಲನ ನಡೆಯಬೇಕಿದೆ ಎಂದರು.

ಇಂದು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಮುಸ್ಲಿಮರ ಮಸೀದಿಗಳಲ್ಲಿ ಹಿಂದೂ ದೇವರನ್ನು ಹುಡುಕುವ ಮೂಲಕ ಸಮಾಜದ ನೆಮ್ಮದಿಗೆ ಕೊಳ್ಳಿಯಿಡುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ದೇಶ ಮತ್ತೆ ನಾಶವಾಗುತ್ತಾ ಹೋಗುತ್ತಿದ್ದು ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಕೀಲ, ಪ್ರಗತಿಪರ ಚಿಂತಕ ಬಿ.ಟಿ. ವಿಶ್ವನಾಥ್ ಮಾತನಾಡಿ, ಇಂದು ಸಂಘಟನೆಗಳಲ್ಲಿ ಚಲನಶೀಲತೆ ಕಡಿಮೆಯಾಗಿದೆ.ಮೊಳೆ ಹೊಡೆದುಕೊಂಡು ಹಲವಾರು ವರ್ಷಗಳಿಂದ ಕೆಲವರು ಕೂತಲ್ಲೇ ಕೂತಿದ್ದಾರೆ. ಅದರೆ ಕರ್ನಾಟಕ ಜನಶಕ್ತಿ ಸಂಘಟನೆಯಲ್ಲಿ ಹೊಸ ಹೊಸ ಸದಸ್ಯರಿಗೆ ನಾಯಕತ್ವ ನೀಡಲಾಗುತ್ತದೆ. ಹಾಗಾಗಿ ನನಗೆ ಈ ಸಂಘಟನೆ ಮೇಲೆ ವಿಶ್ವಾಸವಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!