Friday, October 25, 2024

ಪ್ರಾಯೋಗಿಕ ಆವೃತ್ತಿ

ಬಾನಾಡಿಗಳ ಪ್ರೀತಿ, ಪ್ರೇಮ, ಪ್ರಣಯ……

ಸಂಗ್ರಹ: ಅರವಿಂದ ಪ್ರಭು

Alpine Swift ಹಕ್ಕಿಗಳೆರೆಡು ಮೈಸೂರಿನ ಆಕಾಶದ ಮಧ್ಯದಲ್ಲಿ ಜತೆಗೂಡುವುದನ್ನು ಮೊದಲು ಗುರುತಿಸಿದವರು ಡಾ.ಸಲೀಂ ಅಲಿ. ಸೂರ್ಯಾಸ್ತದ ನಂತರ ಕ್ರಮೇಣ ಎತ್ತರೆತ್ತರಕ್ಕೆ ಹಾರುತ್ತಾ ಪರಸ್ಪರ ಹತ್ತಿರಕ್ಕೆ ಬಂದು ಪರ್ವತ ಬಾನಾಡಿಗಳೆರೆಡು ಜತೆಗೂಡುವುದನ್ನು ಅವರು 1942ರಲ್ಲಿ ಗುರುತಿಸಿದರು. “ಈ ಜೋಡಿಹಕ್ಕಿಗಳ ಮಿಲನ ಮಹೋತ್ಸವ, ಪ್ರಸ್ತದ ಹಾರಾಟ, ಜೀವಜಗತ್ತಿನಲ್ಲೇ ಅತ್ಯಂತ ಅಚ್ಚರಿಯಾದದ್ದು” ಎಂದು ಅವರು ತಮ್ಮ ಪ್ರಬಂಧದಲ್ಲಿ ಅಭಿಪ್ರಾಯಪಡುತ್ತಾರೆ.

22 ಸೆ.ಮೀ ಉದ್ದದ ಈ ಪರ್ವತ ಬಾನಡಿಗಳು ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನು ಗಾಳಿಯಲ್ಲೇ ಕಳೆಯುತ್ತವೆ. ಹಾರುವಾಗಲೇ ನೀರು ಕುಡಿಯುತ್ತವೆ. ಲಂಬವಾದ ಬಂಡೆಗಳು ಅಥವಾ ಗೋಡೆಗಳ ಮೇಲೆ ವಿಶ್ರಮಿಸುತ್ತವೆ. 2013ರಲ್ಲಿ ಪ್ರಕಟವಾದ ಮೈಸೂರಿನ ಪಕ್ಷಿ ಅಧ್ಯಯನದ ಪ್ರಕಾರ, ಪರ್ವತ ಬಾನಾಡಿಗಳು ಸತತ ಆರು ತಿಂಗಳಗಳ ಕಾಲ ನಿರಂತರವಾಗಿ ಹಾರಬಲ್ಲವು. ನಿದ್ರೆ, ಊಟ, ಮಿಥುನ ಸೇರಿದಂತೆ ಎಲ್ಲ ಶಾರೀರಿಕ ಪ್ರಕ್ರಿಯೆಗಳನ್ನು ಗಾಳಿಯಲ್ಲಿಯೆ ನಿರ್ವಹಿಸಬಲ್ಲವು.

ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಇವು ಬಯಲು ಸೀಮೆಯ ಮೈಸೂರು, ಶ್ರೀರಂಗಪಟ್ಟಣದ ಕಾವೇರಿ ನದಿಕಣಿವೆಯ ಸುತ್ತಮುತ್ತ ಮಳೆಗಾಲದಲ್ಲಿ ಕಾಣಸಿಗುತ್ತವೆ. ನೀವು ಜೋಗ ಜಲಪಾತ ನೋಡಿದ್ದರೆ ಅದರ ಎತ್ತರಕ್ಕೆ ದಂಗಾಗಿರುತ್ತೀರಿ. ಜೋಗದ ಕಡಿದಾದ ಕಮರುಗಳಲ್ಲಿ ಪರ್ವತ ಬಾನಾಡಿಗಳು ಗೂಡು ನಿರ್ಮಿಸುತ್ತವೆ. ಭಾರೀ ವೇಗದಲ್ಲಿ ಗಾಳಿಯ ದಿಕ್ಕಿನಲ್ಲಿ ಹಾರುವ ಈ ಹಕ್ಕಿಗಳು ಅದೇ ವೇಗದಲ್ಲಿ ದಿಕ್ಕು ಬದಲಿಸಿಯೂ ಹಾರಬಲ್ಲವು. ಗಂಟೆಗೆ 220 ಕಿ.ಮೀ ವೇಗದಲ್ಲಿ ಹಾರಬಲ್ಲವು ಎಂದು ಪಕ್ಷಿತಜ್ಞರು ಅಂದಾಜಿಸಿದ್ದಾರೆ.

ಡಾ.ಸಲೀಂ ಅಲಿಯವರು 1942ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ನಿಯತಕಾಲಿಕದಲ್ಲಿ “ಮೈಸೂರಿನ ಪಕ್ಷಿಗಳು” ಎಂಬ 5 ಕಂತಿನ ಲೇಖನ ಪ್ರಕಟಿಸಿದ್ದರು. 22 ಪ್ರಮುಖ ವೈಜ್ಞಾನಿಕ ಆವಿಷ್ಕಾರಗಳನ್ನು ಪಟ್ಟಿ ಮಾಡಿದ್ದರು. ಅವರ ಕೆಲವು ಆವಿಷ್ಕಾರಗಳಿಂದ ಶತಮಾನಗಳಿಂದ ಮಾಡದೇ ಉಳಿದಿದ್ದ ಮಹತ್ವದ ಕೆಲಸಗಳು ಆದವು. ಅವರ ಶೋಧಗಳಲ್ಲಿ ಈ ಪರ್ವತ ಬಾನಾಡಿಗಳ ಪ್ರಣಯದಾಟವೂ ಒಂದು.

ಈ ಜಗತ್ತು ವಿಸ್ಮಯಗಳ ಅಕ್ಷಯಪಾತ್ರೆ. ನಾವು ತಂಟೆ ಮಾಡದೆ, ಸುಮ್ಮನೆ ನೋಡುತ್ತಾ ಹೋಗಬೇಕು ಅಷ್ಟೇ.‌ ಸಮೃದ್ಧ ಮಳೆಯಿಂದಾಗಿ ಭೂರಮೆ ಹಸಿರ ಸೀರೆಯುಟ್ಟು ಕಂಗೊಳಿಸುತ್ತಿದ್ದಾಳೆ. ಜೀವಜಗತ್ತಿಗೀಗ ಪರ್ವ ಕಾಲ. ಮನುಷ್ಯನಿಗಿಂತ ತುಸು ಹೆಚ್ಚೇ ಅನ್ನಿಸುವಂತೆ ಸಂಗಾತಿಯನ್ನು ಪ್ರೇಮಿಸುವ ಹಕ್ಕಿಗಳು ನಮಗೆ ಏನನ್ನೋ ಕಲಿಸುತ್ತಿವೆ. ಹೆಚ್ಚು ಸದ್ದು ಮಾಡದೆ, ನಿಸರ್ಗದ ಕೌತುಕಗಳಿಗೆ ಕಣ್ಣಾಗುವ.. ಕಿವಿಯಾಗುವ..

Source: Natural History Society, Bombay
BirdLife International, Cambridge

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!