Sunday, October 27, 2024

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣ | ಬರೋಬರಿ 50 ಜನರಿಂದ 62 ನಾಮಪತ್ರ ಸಲ್ಲಿಕೆ ; ಡಮ್ಮಿ ಅಭ್ಯರ್ಥಿಗಳೇ ಹೆಚ್ಚು !

ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿರುವ ಚನ್ನಪಟ್ಟಣ ಉಪ ಚುನಾವಣೆಗೆ ಬರೋಬ್ಬರಿ 50 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇವರಿಂದ ಒಟ್ಟು 62 ನಾಮಪತ್ರ ಸಲ್ಲಿಕೆಯಾಗಿವೆ. ಇದೇ ಮೊದಲ ಸಲ 50 ಅಭ್ಯರ್ಥಿಗಳು ಕಣದಲ್ಲಿರುವುದು ವಿಶೇಷವಾಗಿದ್ದರೂ, ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಡಮ್ಮಿ ಅಭ್ಯರ್ಥಿಗಳೇ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದುವರೆಗಿನ ಚುನಾವಣೆಗಳಲ್ಲಿ ಅಬ್ಬಾಬ್ಬ ಎಂದರೆ 20 ಮಂದಿ ಕಣದಲ್ಲಿದ್ದರೆ ಹೆಚ್ಚು. ಆದರೆ, ಇದೇ ಮೊದಲ ಸಲ 50 ಮಂದಿ ಸ್ಪರ್ಧಿಸಿರುವುದು ವಿಶೇಷ. ನಾಮಪತ್ರ ಹಿಂಪಡೆಯಲು ಅ.30ರವರೆಗೂ ಕಾಲಾವಕಾಶ ಇದೆ. ಅಷ್ಟರೊಳಗೆ ಬಹುತೇಕರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಆದರೆ, ನಾಮಪತ್ರ ಸಲ್ಲಿಕೆಯಲ್ಲಿಯೇ 50 ಮಂದಿ ಇರುವುದು ಅತಿ ಹೆಚ್ಚಿನ ಸಂಖ್ಯೆಯಾಗಿದೆ.

ಬೇರೆ ಜಿಲ್ಲೆಗಳಿಂದಲೂ ನಾಮಪತ್ರ ಸಲ್ಲಿಕೆ

ಚಾಮರಾಜನಗರಿಂದಲೇ 7 ಅಭ್ಯರ್ಥಿಗಳಿದ್ದರೆ, ಚಿಕ್ಕಮಗಳೂರಿನಿಂದಲೂ ಒಬ್ಬರು ಅಭ್ಯರ್ಥಿ ಇದ್ದಾರೆ. ಇನ್ನುಳಿದ ಮದ್ದೂರು, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದಲೂ ನಾಮಪತ್ರ ಸಲ್ಲಿಕೆಯಾಗಿವೆ. 30ರಷ್ಟು ಅಭ್ಯರ್ಥಿಗಳು ಸ್ಥಳೀಯರು ಇದ್ದಾರೆ. ಪ್ರಜಾಕೀಯ, ಐಪಿಸಿಪಿ ಸೇರಿದಂತೆ 7 ಮಂದಿ ಪಕ್ಷದಿಂದ ಸ್ಪರ್ಧಿಸಿದರೆ, ಇನ್ನುಳಿದವರೆಲ್ಲರೂ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಚನ್ನಪಟ್ಟಣಲ್ಲೇ ಹೆಚ್ಚು

ರಾಜ್ಯದಲ್ಲಿ ಒಟ್ಟು ಮೂರು ಅಂದರೆ ಶಿಗ್ಗಾವಿ, ಸಂಡೂರು, ಚನ್ನಪಟ್ಟಣಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಅದರಲ್ಲೂ ಚನ್ನಪಟ್ಟಣ ಕಣ ಇಡೀ ರಾಜ್ಯದಲ್ಲಿ ತೀವ್ರ ಹಣಾಹಣಿಯ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿ ನಾಮಪತ್ರ ಸಲ್ಲಿಕೆ ಹೆಚ್ಚಾಗಿವೆ. ಕೆಲವರಿಗೆ ಎಲ್ಲ ಚುನಾವಣೆಗಳಲ್ಲಿಯೂ ನಾಮಪತ್ರ ಸಲ್ಲಿಸುವುದೇ ಹವ್ಯಾಸವಾಗಿದೆ. ಕೆಲವರು ಬ್ಯಾಲೆಟ್‌ನಲ್ಲಿ ಹೆಸರು, ಫೋಟೊ ಕಾಣಿಸಲಿ ಎಂಬ ಉದ್ದೇಶದಿಂದಲೂ ನಾಮಪತ್ರ ಸಲ್ಲಿಸುತ್ತಾರೆ. ಇನ್ನೊಂದಷ್ಟು ಅಭ್ಯರ್ಥಿಗಳನ್ನು ನೇರಾನೇರ ಹೋರಾಟದಲ್ಲಿರುವ ಅಭ್ಯರ್ಥಿಗಳೇ ‘ಡಮ್ಮಿ ಕ್ಯಾಂಡಿಡೆಟ್‌’ ನೆಪದಲ್ಲಿ ಸ್ಪರ್ಧಿಸುವಂತೆ ಮಾಡುತ್ತಾರೆ. ಚುನಾವಣಾ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಈ ಉಪಾಯ ಮಾಡುತ್ತಾರೆ. ಆದರೆ, ಕೆಲವರು ನಾಮಪತ್ರ ಸಲ್ಲಿಸಿದ ಬಳಿಕ ಹಣಕ್ಕೆ ಬೇಡಿಕೆ ಇಡುವುದು ಗುಟ್ಟಾಗಿ ಉಳಿದಿಲ್ಲ.

ಒಂದು ಬ್ಯಾಲೆಟ್‌ ನಲ್ಲಿ 15 ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಹೀಗಾಗಿ ಗೆಲ್ಲುವ ಸಾಧ್ಯತೆಗಳಿರುವ ಅಭ್ಯರ್ಥಿಗಳು ಇನ್ನುಳಿದವರ ನಾಮಪತ್ರ ಹಿಂಪಡೆಸುವ ಕೆಲಸ ಮಾಡುತ್ತಾರೆ. ಈ ವೇಳೆ ಹಣದ ಹಂಚಿಕೆಯು ನಡೆಯುತ್ತದೆ. ಈ ಕಾರಣಕ್ಕೆ ಕೆಲವರು ನಾಮ ಪತ್ರ ಸಲ್ಲಿಸಿ, 50 ಸಾವಿರದಿಂದ 2 ಲಕ್ಷದವರೆಗೂ ಮಾರಾಟವಾಗುವ ಸಾಧ್ಯತೆ ಇದೆ.

ನಾನಾ ಪಕ್ಷಗಳ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವವರು ಅ.28ರಂದು ಬೆಳಗ್ಗೆ 10.59ಗಂಟೆಯೊಳಗೆ ‘ಬಿ’ ಫಾರಂ ಸಲ್ಲಿಸಬೇಕಿದೆ. ನೇರ ಎದುರಾಳಿಯಾಗಿರುವ ಸಿ.ಪಿ.ಯೋಗೇಶ್ವರ್‌ ಹಾಗು ನಿಖಿಲ್‌ ಕುಮಾರಸ್ವಾಮಿ ಅವರು ಈಗಾಗಲೇ ‘ಬಿ’ ಫಾರಂ ಸಲ್ಲಿಸಿದ್ದಾರೆ.

ನಾಮಪತ್ರ ಹಿಂಪಡೆಯಲು ಅ.30 ಕೊನೆ ದಿನ. ಅಂದು ನಾಮಪತ್ರ ಹಿಂಪಡೆದವರ ಆಧಾರದ ಮೇಲೆ ಅಂತಿಮ ಕಣದಲ್ಲಿಎಷ್ಟು ಮಂದಿ ಉಳಿದಿದ್ದಾರೆ ಎಂಬುದು ಸ್ಪಷ್ಟಗೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!