Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿವಿಯ 30 ಮಂದಿ ಬೋಧಕರಿಗೆ ಮಾತೃ ಇಲಾಖೆಗೆ ಹಿಂದಿರುಗುವ ಇಚ್ಚೆ : ಮಧು ಜಿ.ಮಾದೇಗೌಡ ಪ್ರಶ್ನೆ ಸಚಿವರ ಉತ್ತರ

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ 30 ಮಂದಿ ಬೋಧಕರು ತಮ್ಮ ಮಾತೃ ಇಲಾಖೆಯಾದ ಕಾಲೇಜು ಶಿಕ್ಷಣ ಇಲಾಖೆಗೆ ಹಿಂದಿರುಗಲು ಇಚ್ಛಿಸಿರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಶಾಸಕ ಮಧು ಜಿ.ಮಾದೇಗೌಡ ಅವರ ಲಿಖಿತ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಮಂಡ್ಯ ವಿಶ್ವವಿದ್ಯಾಲಯಕ್ಕೆ ಯಾವುದೇ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಮಂಜೂರಾಗಿಲ್ಲ. ಆದರೆ, ಸರ್ಕಾರಿ ಕಾಲೇಜು (ಸ್ವಾಯತ್ತ), ಮಂಡ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

66 ಬೋಧಕರ ಹುದ್ದೆಗಳು ಖಾಲಿ

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ್ದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೋಧಕರ ಸಂಖ್ಯೆ 30 ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಖ್ಯೆ 2 ಇದೆ. ಉಳಿದಂತೆ, 66 ಬೋಧಕರ ಹುದ್ದೆಗಳು ಹಾಗೂ 44 ಬೋಧಕೇತರ ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದ್ದಾರೆ.

ಪ್ರಸ್ತುತ, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಬೋಧಕರು ಕಾಲೇಜು ಶಿಕ್ಷಣ ಇಲಾಖೆಗೆ ವಾಪಸ್ಸು ಆದರೆ, ಬೋಧಕರ ಕಾರ್ಯಭಾರಕ್ಕಾಗಿ ವಿಶ್ವವಿದ್ಯಾಲಯದಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ, ಪ್ರಸ್ತುತ ಮಂಡ್ಯ ವಿಶ್ವವಿದ್ಯಾಲಯದ ಅಡಿಯಲ್ಲಿ 47 ಕಾಲೇಜುಗಳು ಸಂಯೋಜನೆಗೊಳ್ಳುವುದರಿಂದ ಅವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಕಾಲಿಕ ಅಧ್ಯಾಪಕರುಗಳನ್ನು ಕೂಡ ಅಗತ್ಯತೆಗೆ ತಕ್ಕಂತೆ ನಿಯೋಜನೆ ಮುಖಾಂತರ ಅವರುಗಳ ಸೇವೆಯನ್ನು ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಸೇವೆಯಲ್ಲಿ ಇರಲು ಇಚ್ಛಿಸದೆ ಕಾಲೇಜು ಶಿಕ್ಷಣ ಇಲಾಖೆಯ ಸೇವೆಯಲ್ಲಿ ಮುಂದುವರೆಯಲು ಇಚ್ಛಿಸುವ ಬೋಧಕರನ್ನು ಕಾಲೇಜು ಶಿಕ್ಷಣ ಇಲಾಖೆಯ ಕಾರ್ಯಭಾರವಿರುವ ಕಾಲೇಜುಗಳಲ್ಲಿ ಸ್ಥಳ ನಿಯುಕ್ತಿಗೊಳಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ.

ಹೊಸ ಕೋರ್ಸ್

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮತ್ತು ಎಂಸಿಎ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!