ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಚೆಸ್ ಲೋಕದ ಹೊಸ ಚಾಂಪಿಯನ್ ಆಗಿದ್ದಾರೆ.18 ವರ್ಷ, 8 ತಿಂಗಳು ,14 ದಿನಗಳ ವಯಸ್ಸಿನ, ಅತಿ ಕಿರಿಯ ವ್ಯಕ್ತಿ ವಿಶ್ವ ಚೆಸ್ ಚಾಂಪಿಯನ್ ಆದ ಹಿರಿಮೆ ತಮಿಳುನಾಡು ರಾಜ್ಯದ ಚೆನೈನ್ ಗುಕೇಶ್ ಅವರದ್ದಾಗಿದ್ದು, ಇದು ಭಾರತೀಯರ ಸಂಭ್ರಮಕ್ಕೆ ಕಾರಣವಾಗಿದೆ.

ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (World Chess Championship) ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಗುಕೇಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.ನಿರ್ಣಾಯಕವಾಗಿದ್ದ 14 ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರು ಜಯ ಸಾಧಿಸಿ ಚೆಸ್ ಲೋಕದ ನೂತನ ಸಾಮ್ರಾಟನಾಗಿ ಡಿ.ಗುಕೇಶ್ ಉದಯಿಸಿದ್ದಾರೆ.ಈ ಪ್ರಶಸ್ತಿ ಗೆಲ್ಲುವ ಮೂಲಕ ಗುಕೇಶ್ ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
Stunning emotions as Gukesh cries after winning the World Championship title! #DingGukesh pic.twitter.com/E53h0XOCV3
— chess24 (@chess24com) December 12, 2024
“>
ಗುರುವಾರ, ಡಿಸೆಂಬರ್ 12 ರಂದು, ಚಾಂಪಿಯನ್‌ಶಿಪ್‌ನ 14 ನೇ ಮತ್ತು ಕೊನೆಯ ಸುತ್ತಿನಲ್ಲಿ ಇಬ್ಬರ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು, ಆದರೆ 18 ವರ್ಷದ ಗುಕೇಶ್ ವಿಶ್ವ ಚಾಂಪಿಯನ್ ಆಗುವ ಮೂಲಕ ದಾಖಲೆ ಬರೆದರು. ಸಿಂಗಾಪುರದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಮತ್ತು ಭಾರತದ ಗುಕೇಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಡಿಂಗ್ ಕಳೆದ ವರ್ಷ ಈ ಚಾಂಪಿಯನ್‌ಶಿಪ್ ಗೆದ್ದಿದ್ದರು. ಅವರು ಹಾಲಿ ಚಾಂಪಿಯನ್ ಆಗಿ ಈ ಚಾಂಪಿಯನ್‌ಶಿಪ್ ಪ್ರವೇಶಿಸಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆಲ್ಲುವ ಮೂಲಕ ಗುಕೇಶ್ ಈ ಚಾಂಪಿಯನ್ಶಿಪ್ಗೆ ಚಾಲೆಂಜರ್ ಆಗಿ ಪ್ರವೇಶಿಸಿದ್ದರು.
ವಿಶ್ವನಾಥನ್ ಆನಂದ್ ನಂತರ ವಿಶ್ವ ಚಾಂಪಿಯನ್ಶಿಪ್ಗೆ ತಲುಪಿದ ಎರಡನೇ ಭಾರತೀಯ ಮತ್ತು ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದರು.ಗುರುವಾರ ಡಿಸೆಂಬರ್ 12 ರಂದು, ಚಾಂಪಿಯನ್‌ಶಿಪ್‌ನ 14 ನೇ ಮತ್ತು ಕೊನೆಯ ಸುತ್ತು ಗುಕೇಶ್ ಮತ್ತು ಡಿಂಗ್ ನಡುವೆ ನಡೆಯಿತು. ಈ ಹಿಂದೆ ಆಡಿದ 13 ಸುತ್ತುಗಳಲ್ಲಿ ಇಬ್ಬರೂ ತಲಾ 2 ಪಂದ್ಯ ಗೆದ್ದಿದ್ದರೆ, ಉಳಿದ 9 ಪಂದ್ಯಗಳು ಡ್ರಾ ಆಗಿದ್ದವು.
ಸ್ಪರ್ಧೆಯಲ್ಲಿ ಇಬ್ಬರೂ 6.5 ಅಂಕಗಳನ್ನು ಪಡೆದಿದ್ದರು. ಹಾಗಾಗಿ ಈ ಪಂದ್ಯ ನಿರ್ಣಾಯಕವಾಗಿತ್ತು. ಒಂದು ವೇಳೆ ಈ ಪಂದ್ಯವೂ ಡ್ರಾ ಆಗಿದ್ದರೆ ಇಬ್ಬರೂ ತಲಾ 7 ಅಂಕ ಗಳಿಸಿ ಟೈಬ್ರೇಕರ್ ಮೂಲಕ ಚಾಂಪಿಯನ್ ಯಾರು ಎಂಬ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಚೆನ್ನೈನ ಅದ್ಭುತ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಇದಕ್ಕೆ ಅವಕಾಶ ನೀಡಲಿಲ್ಲ. ಭಾರತೀಯ ಸೆನ್ಷೇಷನಲ್ ಗುಕೇಶ್ ಚೀನಾದ ಗ್ರ್ಯಾಂಡ್‌ಮಾಸ್ಟರ್ ವಿರುದ್ಧ 7.5 – 6.5 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಗೆಲುವಿನೊಂದಿಗೆ, ಗುಕೇಶ್ ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ ಅವರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಗ್ಯಾರಿ ತಮ್ಮ 22ನೇ ವಯಸ್ಸಿನಲ್ಲಿ ವಿಶ್ವಚಾಂಪಿಯನ್ಶಿಪ್ ಗೆದ್ದಿದ್ದರು.




