Sunday, November 22, 2026

ಪ್ರಾಯೋಗಿಕ ಆವೃತ್ತಿ

ಎಸಿಬಿ ಬಲೆಗೆ ಬಿದ್ದ ಮುಖ್ಯ ಪೇದೆ


ವಿ.ಎಸ್. ಪ್ರಭು, ಮದ್ದೂರು

ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿ ವಿರುದ್ಧ ನ್ಯಾಯಾಲಯ ಹೊರಡಿಸಿದ್ದ ಬಂಧನ ರಹಿತ ವಾರಂಟ್ ಜಾರಿಗೊಳಿಸಲು ವ್ಯಕ್ತಿಯೋರ್ವನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಮುಖ್ಯ ಪೇದೆಯನ್ನು ಎಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ಮದ್ದೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಶ್ರೀಕಾಂತ್ ಎಂಬಾತ ಇಂದು ಮದ್ದೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಆರ್.ಟಿ.ಐ ಕಾರ್ಯಕರ್ತ ಆನಂದ್ ಎಂಬುವರಿಂದ 1500ರೂ.ಗಳ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮದ್ದೂರು ಪಟ್ಟಣದ ವಿವೇಕಾನಂದ ನಗರ ನಿವಾಸಿ ಆನಂದ್ ಎಂಬುವರು ವ್ಯಕ್ತಿಯೊಬ್ಬರಿಗೆ ಸಾಲ ನೀಡಿದ್ದರು. ಸಾಲಕ್ಕೆ ಆಧಾರವಾಗಿ ಅವರು ಬ್ಯಾಂಕ್ ಚೆಕ್ ನೀಡಿದ್ದರು. ಸಕಾಲಕ್ಕೆ ಸಾಲ ಪಡೆದ ವ್ಯಕ್ತಿ ಹಣವನ್ನು ಮರುಪಾವತಿ ಮಾಡದಿದ್ದುರಿಂದ ಅವರು ನೀಡಿದ್ದ ಚೆಕ್ ಅನ್ನು ಆನಂದ್ ಬ್ಯಾಂಕ್ ಗೆ ಹಾಜರುಪಡಿಸಿದಾಗ ಹಣವಿಲ್ಲದೆ ಕಾರಣ ಚೆಕ್ ಅಮಾನ್ಯಗೊಂಡಿತ್ತು.

ಆನಂದ್ ಚೆಕ್ ಕೊಟ್ಟ ವ್ಯಕ್ತಿಯ ವಿರುದ್ಧ ಮದ್ದೂರಿನ ಜೆ.ಎಂ ಎಫ್.ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಚೆಕ್ ನೀಡಿದ ವ್ಯಕ್ತಿಯ ವಿರುದ್ಧ ನ್ಯಾಯಾಲಯ ಹಲವಾರು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಸಹ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಚೆಕ್ ಕೊಟ್ಟ ವ್ಯಕ್ತಿಯ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ಹೊರಡಿಸಿತ್ತು.ವಾರೆಂಟ್ ಜಾರಿ ಮಾಡದೆ ಮುಖ್ಯಪೇದೆ ಶ್ರೀಕಾಂತ್ ಕರ್ತವ್ಯ ಲೋಪ ಮಾಡಿದ್ದರು.ಅಂತಿಮವಾಗಿ ಆನಂದ್ ವಾರೆಂಟ್ ಜಾರಿ ಮಾಡದ ಬಗ್ಗೆ ಕಾರಣ ಕೇಳಿದಾಗ ಮುಖ್ಯಪೇದೆ ಆನಂದ್ ಅವರ ಬಳಿ 1500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಬಗ್ಗೆ ಆನಂದ್ ಮುಖ್ಯ ಪೇದೆ ಶ್ರೀಕಾಂತ್ ವಿರುದ್ಧ ಆ.1 ರಂದು ಮಂಡ್ಯ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರಲ್ಲದೆ, ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ ಆನಂದ್ ಅವರಿಂದ ಪೇದೆ ಶ್ರೀಕಾಂತ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಡಿವೈಎಸ್ಪಿ ಮಾಥ್ಯೂ ಥಾಮಸ್ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳಾದ ವಿನೋದ್ ರಾಜ್, ಪುರುಷೋತ್ತಮ್ ಹಾಗೂ ಸಿಬ್ಬಂದಿಗಳಾದ ಕುಮಾರ್, ವೆಂಕಟೇಶ್, ಮಹದೇವ, ಪಾಪಣ್ಣ, ಮಹೇಶ್ ಅವರುಗಳ ನೇತೃತ್ವದ ತಂಡ ಮುಖ್ಯಪೇದೆ ಶ್ರೀಕಾಂತ್ ನನ್ನು ಹಣದ ಸಮೇತ ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಂಧಿತ ಪೊಲೀಸ್ ಪೇದೆಯನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ