ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಿಪ್ಪೂರು ಗ್ರಾಮದ ಟಿ.ಸಿ.ರಾಜಣ್ಣ ಸಾವಿಗೆ ಕಾರಣರಾದವರನ್ನು ಬಂಧಿಸಿ, ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಾಗೃತಿ ಅಭಿಯಾನ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಾಯ ಪೂರ್ವಕವಾಗಿ ಟಿ.ಸಿ.ರಾಜಣ್ಣ ಅವರನ್ನು ಒತ್ತಾಯ ಪೂರ್ವಕವಾಗಿ ವಿದ್ಯುತ್ ಕಂಬಕ್ಕೇರಿಸಿ ಪ್ರಜ್ಞಾಹೀನರನ್ನಾಗಿಸಿ, ಚಿಕಿತ್ಸೆ ಫಲಕಾರಿಯಾಗದೇ ಅವರ ಸಾವಿಗೆ ಕಾರಣರಾದವರಿಗೆ ಕಾನೂನಿನನ್ವಯ ಶಿಕ್ಷೆಯಾಗಬೇಕಿದೆ ಎಂದರು.
ಹಲವು ಪ್ರಯತ್ನಗಳ ಫಲವಾಗಿ ಮೇ 20ರಂದು ಕ್ರಿಮಿನಲ್ ಮೊಕದ್ದಮೆ ಮತ್ತು ಪಿಓಎ ಆಕ್ಟ್ 1989 ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಪೊಲೀಸ್ ಇಲಾಖೆಯ ಸಹಭಾಗಿತ್ವ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಆರೋಪಿಗಳು ದೂರುದಾರರಾದ ಮೃತರ ಕುಟುಂಬದವರಿಗೆ ತೊಂದರೆ ನೀಡುವ ಅವಕಾಶಗಳು ಹೆಚ್ಚಿದ್ದು, ಆರೋಪಿಗಳಾದ ಟಿ.ಎಲ್.ಸ್ವಾಮಿ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಿ, ಮೃತರ ಕುಟುಂಬದವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂತ್ರಸ್ತೆರಾದ ಮಹಾಲಕ್ಷ್ಮಮ್ಮ, ಸುಶೀಲಮ್ಮ, ಟಿ.ಆರ್.ಅರ್ಪಿತ, ಪಿ.ಆನಂದ್ ಉಪಸ್ಥಿತರಿದ್ದರು.




