Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರು ಹಾಗೂ ಮುಸಲ್ಮಾನರ ನಡುವೆ ವೈಷಮ್ಯ ಹುಟ್ಟುಹಾಕಬೇಡಿ

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನನಕಾರಿ ಮಾತುಗಳನ್ನಾಡುವ ಮೂಲಕ ಒಕ್ಕಲಿಗರು ಹಾಗೂ ಮುಸಲ್ಮಾನರ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ. ಎರಡೂ ಸಮುದಾಯ ಅನ್ಯೋನ್ಯತೆಯಿಂದ ಬಾಳುತ್ತಿದ್ದು,ಅವರ ಮಧ್ಯೆ ವೈಷಮ್ಯ ಹುಟ್ಟು ಹಾಕಬೇಡಿ ಎಂದು ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಎಚ್ಚರಿಕೆ ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಜಮೀರ್ ಅಹಮದ್ ಅವರಿಗೆ ಬುದ್ಧಿ ಸ್ಥಿಮಿತ ಕಳೆದುಕೊಂಡು
ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಸರಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಒಳ್ಳೆಯ ನಡವಳಿಕೆ ಬೆಳೆಸಿಕೊಳ್ಳಲಿ. ಅದನ್ನು ಬಿಟ್ಟು ಮತ್ತೆ ಸಮುದಾಯದ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆಂದು ಕಿಡಿಕಾರಿದರು.

ಜಿಲ್ಲೆಯಲ್ಲಷ್ಟೇ ಅಲ್ಲದೆ ರಾಜ್ಯದಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯದವರು ಅನ್ಯೋನ್ಯತೆಯಿಂದ ಜೀವನ ಮಾಡುತ್ತಿದ್ದಾರೆ. ಜಮೀರ್ ಹೇಳಿಕೆಯಿಂದ ಸಮುದಾಯಗಳ ನಡುವೆ ವೈಮನಸ್ಯ ಬೆಳೆಯುವಂತಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದರು.

ಇನ್ನು ಜಮೀರ್ ಅವರೇ ಹೇಳಿಕೊಂಡಂತೆ ಶಾಸಕ ಹಾಗೂ ಸಚಿವರಾಗಲು ಭೈರವೈಕ್ಯ ಚುಂಚಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾರಣ. ಆದರೆ ಇತ್ತೀಚಿನ ದಿನದಲ್ಲಿ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ.

ಅಂತೆಯೇ ಅವರೇ ಹೇಳಿಕೊಂಡಂತೆ ಒಕ್ಕಲಿಗ ಸಮುದಾಯ ಅಲ್ಪಸಂಖ್ಯಾತರಿಗಿಂತ ಕಡಿಮೆ ಇದ್ದರೆ, ಅಲ್ಲಸಂಖ್ಯಾತರ ಕೋಟಾದಡಿ ನೀಡಲಾಗುತ್ತಿರುವ ಸೌಲಭ್ಯವನ್ನು ಒಕ್ಕಲಿಗ ಸಮುದಾಯಕ್ಕೆ ಕೊಡಿಸಲಿ. ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಸೌಲಭ್ಯವನ್ನು ರದ್ದುಪಡಿಸಲಿ. ಸುಮ್ಮನೆ ಲಘುವಾಗಿ ಹೇಳಿಕೆ ನೀಡುವುದನ್ನು ಬಿಟ್ಟು ಗಂಭೀರತೆ ಕಲಿತುಕೊಳ್ಳಬೇಕು. ಇಲ್ಲದಿದ್ದರೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ಎಲ್.ಕೃಷ್ಣ, ಕಾಂಗ್ರೆಸ್ ಮುಖಂಡರಾದ ಚಿದಂಬರ್, ಕೆ.ಸಿ.ರವೀಂದ್ರ, ಹರೀಶ್, ಸೌಭಾಗ್ಯ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!