ಮಂಡ್ಯ ಜಿಲ್ಲೆಯಲ್ಲಿ ನವೆಂಬರ್ 3 ರಂದು ಪಂಚ ಗ್ಯಾರಂಟಿ ಯೋಜನೆ ಕುರಿತು ಜಿಲ್ಲಾ ಗ್ಯಾರಂಟಿ ಸಮಾವೇಶ ಮತ್ತು ಗ್ಯಾರಂಟಿ ಸಂವಾದ ನಡೆಸಲು ನಿರ್ಧರಿಸಿದ್ದು, ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ. ಆರ್ ನಂದಿನಿ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾವೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಮಂಡ್ಯ ಜಿಲ್ಲೆಯಲ್ಲಿ ಆದಂತಹ ಬದಲಾವಣೆ ಹಾಗೂ ಫಲಾನುಭವಿಗಳಿಗಾದ ಅನಾನುಕೂಲತೆ ಕುರಿತು ಸಾಕ್ಷ್ಯ ಚಿತ್ರಗಳ ಪ್ರದರ್ಶನವಾಗಬೇಕಾಗಿದೆ. ಗೃಹಲಕ್ಷ್ಮಿ ಮತ್ತು ಶಕ್ತಿಯೋಜನೆಯಿಂದ ಬದುಕಿನಲ್ಲಿ ಬದಲಾವಣೆ, ಉಳಿತಾಯ ಕಂಡಂತಹ ಜಿಲ್ಲೆಯಲ್ಲಿನ ಮಹಿಳೆಯರನ್ನು ಗುರುತಿಸಿ ಯಶೋಗಾಥೆ ತಯಾರಿಸಿ ಎಂದು ತಿಳಿಸಿದರು.
ಯುವನಿಧಿ ಮತ್ತು ಯುವನಿಧಿ ಪ್ಲಸ್ ಯೋಜನೆಯಿಂದ ವಿದ್ಯಾರ್ಥಿಗಳಿಗಾದಂತಹ ಉಪಯೋಗ ಹಾಗೂ ಯುವನಿಧಿ ಪ್ಲಸ್ ಯೋಜನೆಯಿಂದ ಉದ್ಯೋಗ ಅವಕಾಶ ಕಲ್ಪಿಸುವ ಬಗ್ಗೆ ಪ್ರತ್ಯೇಕ ಸಾಕ್ಷ್ಯಚಿತ್ರ ತಯಾರಿಸಿ ಎಂದರು.
ತಾಲೂಕುವಾರು ಪ್ರತ್ಯೇಕ ಸಭೆಯನ್ನು ನಡೆಸಿ ಪಂಚ ಗ್ಯಾರಂಟಿ ಅನುಷ್ಠಾನವಾದ ನಂತರ ಜಿಲ್ಲೆಯಲ್ಲಿ ಆಗಿರುವಂತಹ ಬದಲಾವಣೆ, ಖರ್ಚು – ವೆಚ್ಚ, ಅನುಧಾನ ಮತ್ತು ಸೌಲಭ್ಯ ಪಡೆದ ಫಲಾನುಭವಿಗಳ ಸಂಖ್ಯೆ ಕುರಿತು ತಾಲ್ಲೂಕುವಾರು ಮಾಹಿತಿಗಳನ್ನು ಪಡೆದು ಸಾಕ್ಷ್ಯಚಿತ್ರ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳಿಗಿಂತಲೂ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುವುದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಸಾರ್ವಜನಿಕರಿಂದ ಮಾಹಿತಿ ಪಡೆದು ಸಾಕ್ಷ್ಯಚಿತ್ರ ಚಿತ್ರಿಸುವಲ್ಲಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕ ಪ್ರದರ್ಶನಗಳನ್ನು ಸಹ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಕ್ರಮಕೈಗೊಳ್ಳಿ. ಗ್ಯಾರಂಟಿ ಸಮಾವೇಶ ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರು ಮಾತನಾಡಿ ಜಿಲ್ಲಾ ಪಂಚ ಗ್ಯಾರಂಟಿ ಸಮಾವೇಶ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಿ ಮತ್ತು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಗ್ಯಾರಂಟಿ ಸಮಾವೇಶ ಯಶಸ್ವಿಗೋಳಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್, ಉಪಾಧ್ಯಕ್ಷರಾದ ಪ್ರಶಾಂತ್ ಬಾಬು, ರಾಜೇಂದ್ರ ಪ್ರಸಾದ್, ಸದಸ್ಯ ಮಹಮ್ಮದ್ ಅನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಆಶಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




