ರಾಜ್ಯ ಸರಕಾರವು `ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯ ಮೂಲಕ ರಾಜ್ಯ ೪೦,೦೦೦ ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಡ್ಸ್ ಆರ್ಗನೈಜೇಷನ್(ಎಐಡಿಎಸ್ಓ) ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಸ್ವಾತಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಈ`ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಯೋಜನೆಯಾಗಿದೆ. ಈ ಮೂಲಕ ಬಡವರ್ಗದ ಶಿಕ್ಷಣ ಹಕ್ಕಿನ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ಖಂಡಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್) ಮೂಲಕ ಹೆಚ್ಚಿನ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ `ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯನ್ನು ತಂದು ಪ್ರತಿ ಗ್ರಾಮ ಪಂಚಾಯಿತಿಯ ೧ರಿಂದ ೬ ಕಿ.ಮೀ ವ್ಯಾಪ್ತಿಯಲ್ಲಿನ ಶಾಲೆಗಳನ್ನು ವಿಲೀನಗೊಳಿಸುವುದು ಬಡವರನ್ನು ಶಿಕ್ಷಣದಿಂದ ವಿಮುಖ ಮಾಡಿದಂತಾಗುತ್ತದೆ. ಗ್ರಾ.ಪಂ ಒಂದರಂತೆ ೬೦೦೦ `ಕೆಪಿಎಸ್ ಮ್ಯಾಗ್ನೆಟ್” ಶಾಲೆಗಳನ್ನು ತೆರೆಯುವ ಗುರಿ ನಿಗದಿಪಡಿಸಿದೆ. ಮೊದಲ ಹಂತದಲ್ಲಿ ರಾಜ್ಯದ ೮೦೦ ಶಾಲೆಗಳನ್ನು `ಕೆಪಿಎಸ್ ಮ್ಯಾಗ್ನೆಟ್’ ಶಾಲೆಗಳೆಂದು ಗುರುತಿಸಿ ಇದೇ ಅ.೧೫ರಂದು ಸುತ್ತೇಲೆ ಹೊರಡಿಸಿದೆ ಎಂದು ಹೇಳಿದರು.
ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಶಾಲೆಯನ್ನು`ಕೆಪಿಎಸ್ ಮ್ಯಾಗ್ನೆಟ್’ ಶಾಲೆಯೆಂದು ಗುರುತಿಸಿ, ೬ ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ತುರ್ತಾಗಿ ವಿಲೀನಗೊಳಿಸಲು ಅ.೨೩ರಂದು ಆದೇಶ ನೀಡಲಾಗಿದೆ. ಈ ರೀತಿ ಮುಂದುವರೆದರೆ ರಾಜ್ಯದ ೪೦ ಸಾವಿರಕ್ಕೂ ಅದಿಕ ಶಾಲೆಗಳು ವಿಲೀನಗೊಂಡು ಮುಚ್ಚಲ್ಪಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿಯೂ`ಕೆಪಿಎಸ್ ಮ್ಯಾಗ್ನೆಟ್’ ಶಾಲೆಯನ್ನು ಆರಂಭಿಸಿ ಇತರ ಸರಕಾರಿ ಶಾಲೆಗಳ ೯೦೦ ವಿದ್ಯಾರ್ಥಿಗಳನ್ನು ವಿಲೀನಗೊಳಿಸಲಾಗಿದೆ. ಶಿಕ್ಷಕರ ನೇಮಕಕ್ಕೆ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ ೫೦೦೦ ರೂ ಪಡೆಯಲಾಗುತ್ತಿರುವುದಾಗಿ ಎಐಡಿಎಸ್ಓಗೆ ಮಾಹಿತಿ ದೊರೆತಿದೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ವಿ.ಚಂದ್ರಿಕ ಇದ್ದರು.




