Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರಮಪಟ್ಟರೆ 4-5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ

ನಮ್ಮ ಪಕ್ಷದ ನಾಯಕರು ಒಗ್ಗಟ್ಟಿನಿಂದ ಶ್ರಮಪಟ್ಟು ಜನರ ವಿಶ್ವಾಸ ಗಳಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 4 ರಿಂದ 5 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.

ಮಂಡ್ಯ ನಗರದ ಸೋಮೇಶ್ವರ ಸಮುದಾಯ ಭವನದಲ್ಲಿ ಆ.15ರಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ಬೃಹತ್ ಪಾದಯಾತ್ರೆ ಮತ್ತು ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದೇವೆ. ಆದರೆ ಈ ಬಾರಿ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ನಾಯಕರು ಒಗ್ಗಟ್ಟಿನಿಂದ ಪಂಚಾಯಿತಿ ಮತ್ತು ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಿ ಕನಿಷ್ಠ 4 ರಿಂದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಕೇಂದ್ರದ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ಮಹಿಳೆಯರು, ಯುವಕರು, ಕಾರ್ಮಿಕರು ವಿಶೇಷವಾಗಿ ರೈತರಿಗೆ ಬೆಲೆ ಏರಿಕೆ ಬಿಸಿ ಹೆಚ್ಚು ತಟ್ಟಿದೆ. ರಸಗೊಬ್ಬರದ ಬೆಲೆ ದುಪ್ಪಟ್ಟಾಗಿದೆ. ಈ ಎಲ್ಲ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು ಮುಂದಾಗಬೇಕೆಂದು ಕರೆ ನೀಡಿದರು.

ಕೆಲವು ಮುಖಂಡರು ಮತ್ತು ನಾಯಕರು ದೊಡ್ಡ ದೊಡ್ಡ ಹಾರ ಹಾಕಿದರೆ ನನಗೆ ಖುಷಿಯಾಗಲ್ಲ. ಪಕ್ಷ ಬಲಿಷ್ಠವಾಗಿ ಚುನಾವಣೆಯಲ್ಲಿ ಗೆದ್ದಾಗ ಮಾತ್ರ ನನಗೆ ಖುಷಿಯಾಗುತ್ತದೆ. ಕಳೆದ ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದಕ್ಕೆ ದಿನೇಶ್‌ಗೂಳಿಗೌಡ ಮತ್ತು ಮಧು ಜಿ. ಮಾದೇಗೌಡ ಗೆದ್ದರು. ಆಗ ನನಗೆ ಖುಷಿಯಾಯಿತು. ಹಾರ ತುರಾಯಿಗಳಿಂದ ಖುಷಿಪಡಿಸಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಜಿಲ್ಲೆಯಲ್ಲಿ ಜಾ.ದಳವನ್ನು ಮಣಿಸಲು ಸಾಧ್ಯ ಎಂದು ಹೇಳಿದರು.

ಶಿವಪುರ ಧ್ವಜಸತ್ಯಾಗ್ರಹ ಮತ್ತು ಶ್ರೀರಂಗಪಟ್ಟಣಕ್ಕೆ ಇತಿಹಾಸದ ಕುರುಹು ಇದೆ. ಬಿಜೆಪಿ ಮತ್ತು ಜಾ.ದಳದವರಿಗೆ ಸ್ವಾತಂತ್ರ್ಯ ದ ದುಡಿಮೆ ಮತ್ತು ಅರ್ಥ ಗೊತ್ತಿಲ್ಲ. ಅದು ಕಾಂಗ್ರೆಸ್ಸಿಗರಿಗೆ ಮಾತ್ರ ಗೊತ್ತಿರುವುದು. ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಳ್ಳಲು ಪುಣ್ಯ ಮಾಡಿರಬೇಕು. ಇದು ದೇಶದ ಸ್ವಾತಂತ್ರ್ಯದ ಸಂಕೇತ ಎಂದರು.

ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಾದಯಾತ್ರೆ ಮತ್ತು ಬೃಹತ್ ಸಮಾವೇಶಕ್ಕೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ 2 ಸಾವಿರ ಜನರಂತೆ ಒಟ್ಟು 15 ಸಾವಿರ ಮಂದಿ ಬರಬೇಕೆಂದು ಮನವಿ ಮಾಡಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಮಂಡ್ಯದಲ್ಲಿ ಸಂಚರಿಸಲಿದ್ದು,ಈ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಮಾತನಾಡಿ, ಆ. ೧೫ರಂದು ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಸುಮಾರು ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಸುವರ್ಣ ಸ್ವಾತಂತ್ರ್ಯೋ ತ್ಸವದ ಪಾದಯಾತ್ರೆ ಮಾಡಲಾಗುತ್ತಿದೆ.

ಹಿರಿಯರ ತ್ಯಾಗ, ಬಲಿದಾನ ಮತ್ತು ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ಹೋರಾಟಕ್ಕೆ ಕಾಂಗ್ರೆಸ್ ನಾಂದಿಯಾಡಿದೆ. ಅದರಿಂದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರನ್ನು ನೆನಪು ಮಾಡಿ ಮುಂದಿನ ಪೀಳಿಗೆಗೆ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ತಿಳಿಸಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರಮಪಟ್ಟು ದುಡಿಯುತ್ತಿದ್ದಾರೆ. ಆ ಮೂಲಕ ಪಕ್ಷದ ಸಂಘಟನೆಗೆ ಬಲ ತುಂಬಿದ್ದಾರೆ. ಮಂಡ್ಯ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಬಾಲರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ದಡದಪುರ ಶಿವಣ್ಣ, ಗಣಿಗ ರವಿಕುಮಾರ್, ಡಾ. ಕೃಷ್ಣ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!