Friday, May 17, 2024

ಪ್ರಾಯೋಗಿಕ ಆವೃತ್ತಿ

ದುದ್ದ ಹೋಬಳಿ ಜನರ ಬೇಡಿಕೆ ಈಡೇರಿದೆ : ಸಿ.ಎಸ್ ಪುಟ್ಟರಾಜು

ಕಳೆದ ಹಲವು ವರ್ಷಗಳಿಂದ ದುದ್ದ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಬೇಕೆಂಬ
ಈ ಭಾಗದ ಜನರ ಬೇಡಿಕೆ ಈಡೇರಿದ್ದು, ನೀರಾವರಿ ವಂಚಿತ ಪ್ರದೇಶಕ್ಕೆ ನೀರು ಒದಗಿಸಲಾಗಿದೆ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಹುಲಿಕೆರೆ ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಆಯೋಜಿಸಿದ್ದ ದುದ್ದ ಏತ ನೀರಾವರಿ ಯೋಜನೆ ಮೂಲಕ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಏತ ನೀರಾವರಿ ಯೋಜನೆಯಲ್ಲಿಯೇ ಪೈಪ್‌ಲೈನ್ ಅಳವಡಿಸುವ ಮೂಲಕ ಮತ್ತಷ್ಟು ಕೆರೆಗಳನ್ನು ತುಂಬಿಸಲಾಗುವುದು.ಈ ಯೋಜನೆ ಮಾಡಲು ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಆದರೆ ಕೆಲವರು ಇದನ್ನು ನಮ್ಮ ಯೋಜನೆ ಎಂದು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಾನು ಇಲಾಖೆಯ ಸಚಿವನಾಗಿ ಸಚಿವ ಸಂಪುಟದಲ್ಲಿ ಯೋಜನೆಗೆ ಅನುಮೋದನೆ ಮಾಡಿಸಿಕೊಂಡು ಬಂದಿದ್ದೇನೆ. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆ ಜಾರಿಗೊಳಿಸಲು ಅನುಮೋದನೆ ನೀಡಿದರು ಎಂದರು.

ಬದಲಾದ ರಾಜಕಾರಣದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಸಚಿವ ಮಾಧುಸ್ವಾಮಿ ಅವರು ನನ್ನ ಕ್ಷೇತ್ರದ ಎಲ್ಲ ಯೋಜನೆಗಳಿಗೂ ಯಾವುದೇ ತಡೆ ನೀಡದೆ ಅನುಷ್ಠಾನಗೊಳಿಸಲು ಸಹಕರಿಸಿದರು. ಯೋಜನೆಗೆ ಬೇಕಾದ 185 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಸಹಕಾರ ನೀಡಿದರು. ಯೋಜನೆ ಒಂದು ವರ್ಷ ಮುಂಚೆಯೇ ಅನುಷ್ಠಾನವಾಗಬೇಕಾಗಿತ್ತು. ಕೆಲವು ಹಲವು ಎಡರು ತೊಡರುಗಳು ಬಂದವು. ರೈತರ ತೊಂದರೆ ಇದ್ದರೂ ಯೋಜನೆಯ ಒತ್ತಾಸೆ ಮೇರೆಗೆ ಜವಾಬ್ದಾರಿ ನಿರ್ವಹಿಸಿ ಯೋಜನೆ ಇಂದು ಸಂಪೂರ್ಣಗೊಂಡಿದ್ದು, ಎಲ್ಲ ಕೆರೆಗಳಿಗೂ ನೀರು ಹರಿಯುವಂತಾಗಿದೆ ಎಂದು ತಿಳಿಸಿದರು.

ಈ ಯೋಜನೆಯು 2 ಹಂತಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಪ್ರತಿ ಕೆರೆಗಳಿಗೆ ಗುಣಮಟ್ಟದ ನೀರನ್ನು ಪಂಪ್ ಮಾಡಲು ಸಂಗ್ರಹಕಾರ ಘಟಕವನ್ನು ಕಾಳೇನಹಳ್ಳಿ  ಗ್ರಾಮದಲ್ಲಿ ನಿರ್ಮಾಣ ಮಾಡಿದ್ದು, 21 ಕಿ.ಮೀ ಗಳ ಪೈಪ್ ಲೈನ್ ಅಳವಡಿಸಿದ್ದು 18 ಕಿ. ಮೀ ವ್ಯಾಪ್ತಿಯ 54 ಕೆರೆಗಳ ಅಭಿವೃದ್ಧಿಗೆ ನೆರವಾಗಿದೆ, ಹಾಗೆಯೇ ಮುಂದಿನ ದಿನಗಳಲ್ಲಿ  ಇನ್ನೂ ಅನೇಕ ಕೆರೆಗಳ ಪುನಶ್ಚೇತನಕ್ಕೆ ಅಡಿಪಾಯ ಹಾಕಲಾಗುವುದು ಎಂದರು.

ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ, ಮನ್ಮುಲ್ ಅಧ್ಯಕ್ಷ ರಾಮಚಂದ್ರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಿ ಮೃತ್ಯುಂಜಯಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಶ್, ಭಾರತಿ, ರಾಧಾಮಣಿ ಹಾಗೂ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!