Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿ.ಮಾದೇಗೌಡರ ಕೆಲಸಗಳು ಮಾತನಾಡುತ್ತಿವೆ

ರೈತರಿಗಾಗಿ, ನೀರಾವರಿಗಾಗಿ, ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಗಂಧದ ಕೊರಡಿನಂತೆ ತೇಯ್ದ ವ್ಯಕ್ತಿ ಜಿ.ಮಾದೇಗೌಡರು. ಅವರು ಸ್ವಾರ್ಥಕ್ಕಾಗಿ ಎಂದಿಗೂ ಕೆಲಸ ಮಾಡಲಿಲ್ಲ ಎಂಬುದನ್ನು ಅವರು ಮಾಡಿರುವ ಕೆಲಸಗಳೇ ಮಾತನಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ದೂರು ತಾಲೂಕಿನ ಭಾರತೀನಗರದಲ್ಲಿ ಗುರುವಾರ ಸಂಜೆ ಭಾರತೀ ಶಿಕ್ಷಣ ಸಂಸ್ಥೆಯು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಮಾತಿನಲ್ಲಿ ಪ್ರೀತಿ,ವಿಶ್ವಾಸ, ವಿನಯವಿದ್ದರೆ ಎಲ್ಲರ ಹೃದಯವನ್ನು ಗೆಲ್ಲಬಹುದು. ಕೆಲವರು ಕಠೋರವಾಗಿ ಮಾತನಾಡುವುದನ್ನು ಶಕ್ತಿ ಎಂದು ತಿಳಿದಿದ್ದಾರೆ. ಆದರೆ ಮಹಾಭಾರತದಲ್ಲಿ ಪಾಂಡವರು ಎಂದು ದರ್ಪದಿಂದ,ಗರ್ವದಿಂದ ಮಾತನಾಡಲಿಲ್ಲ. ಅಂತೆಯೇ ಜಿ. ಮಾದೇಗೌಡರು ತಮ್ಮ ಇಡೀ ಬದುಕನ್ನು ಜನರಿಗಾಗಿ ಮುಡುಪಾಗಿಟ್ಟರು.ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಯಜಮಾನರಾದ ಮಾದೇಗೌಡರ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ ಎಂದರು.

ನಾನು ಮಾದೇಗೌಡರ ದೊಡ್ಡ ಅಭಿಮಾನಿ. 1978 ರಿಂದ ನಮ್ಮ ತಂದೆ ಅವರ ಜೊತೆ ಒಡನಾಟ ಪ್ರೀತಿ ಮಾದೇಗೌಡರಿಗಿತ್ತು.ಅಂದಿನಿಂದಲೂ ಅವರದ್ದು ಒಂದೇ ಧ್ಯೇಯ. ಅಧಿಕಾರಕ್ಕಾಗಿ ಎಂದೂ ಅವರು ಅದರ ಹಿಂದೆ ಹೋಗಲಿಲ್ಲ. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕಾವೇರಿ ಮತ್ತು ಕೃಷ್ಣಾ ನದಿಗಳ ಹಿತರಕ್ಷಣೆ ಮಾಡುವ ವಿಶ್ವಾಸ ನಿನ್ನಲ್ಲಿದೆ ಎಂದು ಹೇಳಿದ್ದರು ಎಂದರು.

ಜಿ ಮಾದೇಗೌಡರಂತಹ ಬದ್ಧತೆಯುಳ್ಳ ನಾಯಕತ್ವದ ಅವಶ್ಯಕತೆ ಇಂದು ಹೆಚ್ಚಾಗಿದೆ. ಅವರಿಗೆ ಮುಖ್ಯಮಂತ್ರಿ,ಮಂತ್ರಿ ಯಾರೇ ಆಗಿರಲಿ ಗಟ್ಟಿಯಾಗಿ ಪ್ರಶ್ನೆ ಮಾಡುವ ತಾಕತ್ತಿತ್ತು. ಮಂತ್ರಿಯಾಗಿ ನಾನು ಅವರಿಂದ ಪ್ರೇರಣೆ ಪಡೆದಿದ್ದೇನೆ.

2012ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆಗ ಮಾದೇಗೌಡರು ಕನ್ನಂಬಾಡಿಯಲ್ಲಿ ನಮಗೆ ನೀರಿಲ್ಲ, ಹೀಗಿರುವಾಗ ಹೇಗೆ ತಮಿಳುನಾಡಿಗೆ ನೀರು ಬಿಡುವುದು, ಸಾಧ್ಯವಿಲ್ಲ ಎಂದು ಹೇಳಿದ್ದರು‌.

ಆಗ ನಮ್ಮ ವಕೀಲರು ಕನ್ನಂಬಾಡಿ ಕಟ್ಟೆಯಲ್ಲಿ ನೀರಿಲ್ಲ ಎಂಬುವುದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಮನವರಿಕೆ ಮಾಡಿದ ನಂತರ ಎರಡು ತಿಂಗಳಲ್ಲಿ ಹಂತಹಂತವಾಗಿ ನೀರು ಬಿಡಿ ಎಂದು ತೀರ್ಪು ನೀಡಿತು. ಎರಡು ತಿಂಗಳಲ್ಲಿ ಉತ್ತಮ ಮಳೆಯಾಗಿ ಕನ್ನಂಬಾಡಿ ತುಂಬಿ ನಾವು ನೀರು ಬಿಟ್ಟು, ಮಾದೇಗೌಡರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ನಮ್ಮ ಸರ್ಕಾರ 94,000 ಎಕರೆಗೆ ನೀರಾವರಿ ಒದಗಿಸುವ ಮಾಧವಮಂತ್ರಿ ನಾಲೆಯನ್ನು 500 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಮಾಡಿತು. ಕೃಷ್ಣರಾಜಸಾಗರ ಜಲಾಶಯದ 16 ಗೇಟುಗಳನ್ನು ರಿಪೇರಿ ಮಾಡುವ ಮೂಲಕ ವ್ಯರ್ಥವಾಗುತ್ತಿದ್ದ ನೀರನ್ನು ತಪ್ಪಿಸಿದೆವು ಎಂದರು.

ಮೈಷುಗರ್ ಕಾರ್ಖಾನೆ ಸ್ಥಗಿತಗೊಂಡರೆ ಲಕ್ಷಾಂತರ ರೈತರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣದಿಂದ,ಎಷ್ಟೇ ಹಣ ಖರ್ಚಾದರೂ ಸರಿ ಉಳಿಸಿಕೊಳ್ಳುವ ಉದ್ದೇಶದಿಂದ ಮೈಷುಗರ್ ಕಾರ್ಖಾನೆಗೆ ಅನುದಾನ ನೀಡಲಾಗಿದೆ.ಈಗಾಗಲೇ ಕಾರ್ಖಾನೆ ಬಾಯ್ಲರ್ಗೆ ಅಗ್ನಿಸ್ಪರ್ಶ ಮಾಡಲಾಯಿತು.ಇನ್ನು 15 ದಿನಗಳಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ನಾನೇ ಬಂದು ಚಾಲನೆ ಮಾಡುತ್ತೇನೆ‌.ಎಥೆನಾಲ್ ಘಟಕವನ್ನು ಸ್ಥಾಪಿಸಿ ಮೈಷುಗರ್ ಕಾರ್ಖಾನೆಯನ್ನು ರೈತರಿಗೆ ಶಾಶ್ವತವಾಗಿ ಉಳಿಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾದೇಗೌಡರ ನಾಯಕತ್ವ ಎಲ್ಲರಿಗೂ ಆದರ್ಶಪ್ರಾಯವಾಗಿದೆ.ಅವರು ಕಟ್ಟಿರುವ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಿದೆ ಎಂಬುದು ಹೆಮ್ಮೆಯ ವಿಷಯ.ಇಂದು ದುಡ್ಡಿಗಿಂತ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ನಿಮ್ಮ ಬುದ್ಧಿಯ ಮೇಲೆ ವಿಶ್ವಾಸವಿಡಿ,ಆಗ ಜಗತ್ತನೇ ಗೆಲ್ಲಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ,ಚಂದೂಪುರ ಪಾಪಣ್ಣ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!