Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಚ್ಚಿದಾನಂದ ರಾಜಕೀಯ ಭವಿಷ್ಯಕ್ಕೆ ಹೆಗಲಾಗಿರುತ್ತೇನೆ

ಅಧಿಕಾರ ಇಲ್ಲದಿದ್ದರೂ ನಿರಂತರವಾಗಿ ಜನರ ಸೇವೆ ಮಾಡಿಕೊಂಡು ಅವರ ಕಷ್ಟ-ಸುಖದಲ್ಲಿ ಭಾಗಿಯಾಗುವ ಇಂಡುವಾಳು ಸಚ್ಚಿದಾನಂದ ಆದಷ್ಟು ಬೇಗ ಬಿಜೆಪಿ ಸೇರಿದರೆ ಅವರ ರಾಜಕೀಯ ಭವಿಷ್ಯಕ್ಕೆ ಹೆಗಲಾಗಿರುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು.

ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶಂಕರೇಗೌಡ ಚಾರಿಟಬಲ್‌ ಟ್ರಸ್ಟಿನ ಪ್ರಥಮ ವಾರ್ಷಿಕೋತ್ಸವ, ನಾಡಪ್ರಭು ಕೆಂಪೇಗೌಡ ಜಯಂತಿ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಟ ಅಂಬರೀಶ್ ಕುಟುಂಬದ ಆಪ್ತರಾದ ಇಂಡುವಾಳು ಸಚ್ಚಿದಾನಂದ ತಮ್ಮ ತಂದೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ವರ್ಷಗಳಿಂದ ಬಡಜನರ ಸೇವೆ ಮಾಡುತ್ತಿದ್ದಾರೆ.ಜನರ ಕಷ್ಟ- ಸುಖಗಳಿಗೆ ಸ್ಪಂದಿಸುತ್ತಿರುವ ಸಚ್ಚಿದಾನಂದ ಅಧಿಕಾರವಿಲ್ಲದಿದ್ದರೂ ನಿರಂತರವಾಗಿ ಬಡಜನರ ಮಧ್ಯೆ ಇದ್ದು ಸೇವೆ ಮಾಡುತ್ತಿದ್ದಾರೆ. ಅವರಿಗೂ ಒಂದು ಅವಕಾಶ ನೀಡಿದರೆ ಇಡೀ ಕ್ಷೇತ್ರದ ಜನರ ಸೇವೆ ಮಾಡಲು ಮತ್ತಷ್ಟು ಶಕ್ತಿ ಸಿಗುತ್ತದೆ. ಹಾಗಾಗಿ ಸಚ್ಚಿದಾನಂದ ಅವರಿಗೂ ಜನರು ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕ್ರಿಯಾಶೀಲ ಸಂಸದೆ

ಸುಮಲತಾ ಅಂಬರೀಶ್ ಅವರು ಮಂಡ್ಯ ಸಂಸದೆಯಾಗಿ ಆಯ್ಕೆಯಾದ ನಂತರ ಸಾಕಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಅಶೋಕ್ ಹಾಡಿ ಹೊಗಳಿದರು. ಮಂಡ್ಯದ ಗಂಡು ರೀತಿಯಲ್ಲೇ ಸಂಸತ್ತಿನಲ್ಲಿ ಅವರು ಮಾತನಾಡುತ್ತಿದ್ದಾರೆ.

ಜಿಲ್ಲೆಯ ಅಭಿವೃದ್ದಿ ಬಗ್ಗೆ ಸಂಕೋಚವಿಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಅಭಿವೃದ್ದಿಗೆ ಪೂರಕವಾದ ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ಇನ್ನು ಅವರ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ಅವರು ಕೂಡ ಶ್ರೀರಂಗಪಟ್ಟಣದ ಅಭಿವೃದ್ದಿಗೆ ಮುಂದಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅವರ ಪರವಾಗಿ ಈ ಕ್ಷೇತ್ರದ ಜನತೆ ನಿಲ್ಲಬೇಕು ಎಂದರು.

ಬೇಗ ದಡ ಸೇರಿ

ಆದಷ್ಟು ಬೇಗ ದಡ ಸೇರಿ ಎನ್ನುವ ಮೂಲಕ ಪರೋಕ್ಷವಾಗಿ ಸಂಸದೆ ಸುಮಲತಾ ಹಾಗೂ ಅವರ ಬೆಂಬಲಿಗರಿಗೆ ಬಿಜೆಪಿ ಪಕ್ಷಕ್ಕೆ ಬರುವಂತೆ ಮುಕ್ತ ಆಹ್ವಾನ ನೀಡಿದರು.
ಕಳೆದ ಒಂದು ತಿಂಗಳಿಂದ ಹೇಳುತ್ತಿದ್ದೇನೆ ಆದಷ್ಟು ಬೇಗ ನಮ್ಮ ನರೇಂದ್ರ ಮೋದಿಯವರ ದಡಕ್ಕೆ ಬನ್ನಿ ಎಂದು ಆಹ್ವಾನಿಸಿದರು.

ಕುಟುಂಬ ರಾಜಕಾರಣ ಮಾಡಲ್ಲ

ನಾನು ಕುಟುಂಬ ರಾಜಕಾರಣ ಮಾಡಲ್ಲ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡುತ್ತೇನೆಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಾನು ನನ್ನ ಪುತ್ರ ಅಭಿಷೇಕ್ ಪರ ಯಾರ ಬಳಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ನನ್ನ ಗಂಡ ಅಂಬರೀಶ್ ಯಾರು ಬಳಿ ಟಿಕೇಟಿಗೆ ಕೈ ಚಾಚಿಲ್ಲ. ಅವರ ಧರ್ಮಪತ್ನಿಯಾಗಿ ನಾನು ಕೂಡ ಅವರದೇ ದಾರಿಯಲ್ಲಿ ನಡೆಯುತ್ತೇನೆ. ಜಿಲ್ಲೆಯಲ್ಲಿ ನನ್ನ ಮಗ ಅಭಿಷೇಕ್ ಗಿಂತ ನಾನು ಸಚ್ಚಿಯನ್ನು ರಾಜಕೀಯದಲ್ಲಿ ಬೆಳೆಸಲು ಆಸೆ ಪಡುತ್ತೇನೆ. ನನಗೆ ಸಚ್ಚಿದಾನಂದ ಅವರೇ ಮುಖ್ಯ ಎಂದರು.

ಕಲ್ಲುಗಣಿ ಸ್ಥಗಿತ ಮತ್ತು ಮೈಶುಗರ್ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಹಲವು ಬಾರಿ ಹೋರಾಟ ಮಾಡಿದ್ದೇನೆ. ಆ ಹೋರಾಟಕ್ಕೆ ಗೌರವ ಸಿಕ್ಕಿದೆ.ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಅರಣ್ಯ ಭೂಮಿ ಕಬಳಿಸುತ್ತಿದ್ದು,ಕನ್ನಂಬಾಡಿ ಜಲಾಶಯಕ್ಕೆ ಅಪಾಯ ಒಡ್ಡಿದ್ದು,ಸಚಿವರು ಇದನ್ನು ತಡೆಯಬೇಕು ಎಂದರು. ನನಗೊಂದು ಅವಕಾಶ ಕೊಡಿ

ಇಂಡವಾಳು ಸಚ್ಚಿದಾನಂದ ಅವರು ಮಾತನಾಡಿ, ನಮ್ಮ ತಂದೆ ಹೆಸರಿನಲ್ಲಿ ಟ್ರಸ್ಟ್ ನಿರ್ಮಿಸಿಕೊಂಡು ಸ್ನೇಹಿತರ ಜೊತೆಗೂಡಿ ಶ್ರೀರಂಗಪಟ್ಟಣ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ.ಕ್ಷೇತ್ರದ ಅಭಿವೃದ್ದಿಯ ಆಸೆ ಹೊತ್ತು ಬಂದಿರುವ ನನ್ನಂತ ಹೊಸ ಪೀಳಿಗೆಗಳಿಗೆ ಜನರು ಅವಕಾಶ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಶ್ರೀರಂಗಪಟ್ಟಣದಲ್ಲಿ ಒಕ್ಕಲಿಗರ ಹಾಗೂ ಮಡಿವಾಳ ಮಾಚಿದೇವ ಭವನ ನಿರ್ಮಾಣಕ್ಕೆ ನಿವೇಶನ ನೀಡಬೇಕು. ತಾಲ್ಲೂಕಿನ  ಮೊಗರಹಳ್ಳಿ,ಚಿನ್ನಾಯಕನಹಳ್ಳು,ಬೊಮ್ಮೂರು ಅಗ್ರಹಾರ ಗ್ರಾಮಗಳ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡವರಿಗೆ ಹಕ್ಕು ಪತ್ರ ನೀಡಬೇಕು.ಪ್ರವಾಸಿ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ,ರೇಷ್ಮೆ,ಕ್ರೀಡಾ ಸಚಿವ ನಾರಾಯಣಗೌಡ ಮಾತನಾಡಿದರು.

ಆಶಾ ಕಾರ್ಯಕರ್ತರು, ಅಂಗವಿಕಲರಿಗೆ ಫುಡ್ ಕಿಟ್ ವಿತರಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನಿಂದ ಒಂದು ಲಕ್ಷ ರೂಗಳ ಚೆಕ್ ನೀಡಲಾಯಿತು.

ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು,ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಬಿಜೆಪಿ ಮುಖಂಡರಾದ,ಅಶೋಕ್ ಜಯರಾಂ,ಚಂದಗಾಲು ಶಿವಣ್ಣ, ಸಿದ್ದರಾಮಯ್ಯ, ಟಿ.ಶ್ರೀಧರ್. ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್, ದರ್ಶನ್ ಲಿಂಗರಾಜು ಮಮತಾ, ನಂದಮಣಿ, ದೇವೀರಮ್ಮ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!