Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೃಷಿ ಸಮ್ಮಾನ್ ಯೋಜನೆಯಿಂದ ರೈತರಿಗೆ ಅನುಕೂಲ : ಗೋಪಾಲಯ್ಯ

ಕೃಷಿ ಸಮ್ಮಾನ್ ಯೋಜನೆಯಿಂದಾಗಿ ರಾಜ್ಯದಲ್ಲಿ ಸುಮಾರು 2.60 ಲಕ್ಷ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ 6 ಸಾವಿರ ರಾಜ್ಯ ಸರ್ಕಾರ 4 ಸಾವಿರ ಸೇರಿದಂತೆ ಒಟ್ಟಾರೆ ಪ್ರತಿ ರೈತ ಕುಟುಂಬಕ್ಕೆ 10 ಸಾವಿರ ರೂ.ಗಳ ಯೋಜನೆ ದೊರೆಯುತ್ತಿದೆ ಎಂದು  ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ  ಚಾಲನೆ ನೀಡಿ  ಮಾತನಾಡಿದ ಅವರು,  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಉತ್ತಮವಾಗಿ ಆಡಳಿತ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಇದರೊಂದಿಗೆ ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ವಿಶ್ವಮನ್ನಣೆ ಗಳಿಸಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷಗಳಿಂದಲೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ನಿಬ್ಬೆರಗಾಗುವ ರೀತಿಯಲ್ಲಿ ಭಾರತ ಸರ್ಕಾರ ಕಾರ‍್ಯ ನಿರ್ವಹಿಸಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗಿತ್ತು. ಮುಂದಿನ ತಿಂಗಳಿನಿಂದ 12 ಕೆಜಿಗೆ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಸವರಾಜ ಬೊಮ್ಮಾಯಿ ಸರ್ಕಾರವೂ ಹಲವಾರು ಯೋಜನೆ ರೂಪಿಸಿದೆ. ಪ.ಜಾತಿ ವರ್ಗದ ಮೀಸಲಾತಿ ಹೆಚ್ಚಳ, ಒಕ್ಕಲಿಗ ಮತ್ತು ಪಂಚಮಸಾಲಿ ಸಮಾಜದ ಮೀಸಲು ಹೆಚ್ಚಳ, ಆರ್ಥಿಕ ದುರ್ಬಲರಿಗೆ 10 ಮೀಸಲಾತಿ ನೀಡಿದೆ. ವೃದ್ದಾಪ್ಯ ವೇತನ 1 ಸಾವಿರದಿಂದ 1200ಕ್ಕೆ ಹೆಚ್ಚಳ, ವಿಧವಾ ವೇತನ 600 ರಿಂದ 800 ರೂಗೆ, ವೈಕಲ್ಯ ದಿವ್ಯಾಂಗರ ಮಾಸಾಶನ ರೂ. 600 ರಿಂದ 800ಕ್ಕೆ ಏರಿಕೆ, ಗುತ್ತಿಗೆ ನೌಕರರಾಗಿದ್ದ 11,133 ಪೌರ ಕಾರ್ಮಿಕಕರ ಖಾಯಂ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಮಾತನಾಡಿ, ಜಿಲ್ಲೆಯಲ್ಲಿ 21 ರಿಂದ 29ರವರೆಗೆ ಮನೆ ಮನೆಗೆ ಅಭಿಯಾನ ಮಾಡಬೇಕು ಎಂಬ ಉದ್ಧೇಶದಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಮನೆ ಮನೆಗೂ ಕಾರ‍್ಯಕರ್ತರು, ಮುಖಂಡರು ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಅಶೋಕ್ ಜಯರಾಂ, ಎಂ.ಪಿ. ಅರುಣ್‌ಕುಮಾರ್, ವಿವೇಕ್, ಎಚ್.ಆರ್. ಅರವಿಂದ್, ವಿದ್ಯಾನಾಗೇಂದ್ರ, ಡಾ. ಸದಾನಂದ, ನಾಗಾನಂದ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ