Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಮಾ.10ರಂದು ತಳಗವಾದಿಯಲ್ಲಿ ಮಹಿಳಾ ಜಾನಪದ ಸಂಭ್ರಮ

ಶ್ರೀ ಚೀರುಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಹಾಗೂ ಶ್ರೀ ಉಮಾ ಮಹೇಶ್ವರಿ ಪೂಜಾ ಕುಣಿತ ಯುವಜನ ಕಲಾ ಸಂಘದ ವತಿಯಿಂದ ಮಾ. 10ರಂದು ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಮಹಿಳಾ ಜಾನಪದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಚೀರುಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಅಧ್ಯಕ್ಷೆ ಸವಿತಾ ಚೀರುಕುನ್ನಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಇಂದು ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಜಾನಪದ ಕಲೆಗಳನ್ನು ಜೀವಂತವಾಗಿಟ್ಟುಕೊಂಡು, ಮುಂದಿನ ಪೀಳಿಗೆಗೂ ಪರಿಚಯಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಲಂಬಾಣಿ ನೃತ್ಯ, ಮಹಿಳಾ ವೀರಗಾಸೆ, ಕಂಸಾಳೆ, ನಗಾರಿ, ಡೊಳ್ಳು ಕುಣಿತ, ಪಟ ಕುಣಿತ, ಕೋಲಾಟ, ಪೂಜಾ ಕುಣಿತ, ಕೊಂಬು ಕಹಳೆ,ದೊಣ್ಣೆ ವರಸೆ,ಗೊರವರ ಕುಣಿತ ಸೇರಿದಂತೆ ಇನ್ನಿತರ ಜಾನಪದ ಕಲಾ ತಂಡಗಳು ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.

ನಾನು ಕಳೆದ 30 ವರ್ಷಗಳಿಂದ ಪೂಜಾ ಕುಣಿತ ಮಾಡಿಕೊಂಡು ಬಂದಿದ್ದೇನೆ.ರಾಜ್ಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೇನೆ. ಜಾನಪದ ಕಲಾತಂಡಗಳನ್ನು ಪ್ರೋತ್ಸಾಹಿಸುವುದು ಹಾಗೂ ಮಹಿಳೆಯರಿಗೆ ಜಾನಪದ ಕಲೆಗಳನ್ನು ಕಲಿಸುವ ಉದ್ದೇಶದಿಂದ ಚಿರುಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಸ್ಥಾಪಿಸಲಾಗಿದೆ. ಇಂದು ಜಾನಪದ ಕಲೆಗಳನ್ನು ಕಲಿಯಲು ಮಹಿಳೆಯರು ಹೆಚ್ಚು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ಸ್ವಗ್ರಾಮ ತಳಗವಾದಿಯಲ್ಲಿ ವಿವಿಧ ಕಲಾ ತಂಡಗಳನ್ನು ಕರೆಸಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮಹಿಳೆಯರು ಕೂಡ ಜಾನಪದ ಕಲೆಗಳನ್ನು ಕಲಿತು ಅದನ್ನು ಪ್ರದರ್ಶಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷ ಸಿದ್ದರಾಜು ಮಾತನಾಡಿ,ನಮ್ಮ ತಂದೆ ಚಿರುಕುನ್ನಯ್ಯ ಪೂಜಾ ಕುಣಿತದ ಕಲಾವಿದರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಹಲವರಿಗೆ ಜಾನಪದ ಕಲೆಗಳನ್ನು ಕಲಿಸಿ,ಸಮಾಜಕ್ಕೆ ನೀಡಿದ್ದಾರೆ. ಅವರ ನಂತರ ಜಾನಪದ ಕಲೆಗಳನ್ನು ನಮ್ಮ ಕುಟುಂಬ ಉಳಿಸಿ ಬೆಳೆಸುತ್ತಿದೆ. ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರ ಹೆಸರಿನಲ್ಲಿಯೇ ಜಾನಪದ ಟ್ರಸ್ಟ್ ಸ್ಥಾಪಿಸಿದ್ದು, ಮುಂದಿನ ಪೀಳಿಗೆಗೂ ಜಾನಪದ ಕಲೆಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಮಹಿಳಾ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ವಹಿಸುತ್ತಿದ್ದು, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಚಲುವರಾಯಸ್ವಾಮಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಭಾಗವಹಿಸಲಿದ್ದಾರೆ. ಶ್ರೀ ಚೀರು ಕುನ್ನಯ್ಯ ಪೂಜಾ ಕುಣಿತ ಕಲಾ ಟ್ರಸ್ಟ್ ಉದ್ಘಾಟನೆಯನ್ನು ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ. ದಯಾನಂದ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮೈಸೂರು ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ,ಡಾ.ಬಿ.ವಿ.ನಂದೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ,ಕಸಾಪ ಅಧ್ಯಕ್ಷ ಡಿ.ಪಿ.ಸ್ವಾಮಿ ಮತ್ತಿತರ ಗಣ್ಯರು ಭಾವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ರವಿ, ಪ್ರಕಾಶ್, ರಾಜು, ತಮಟೆ ಕಲಾವಿದ ಪುನೀತ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ