Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದ ಡಿ.ದೇವರಾಜ ಅರಸು

ಬಡವರು, ದೀನ ದಲಿತರು, ಹಿಂದುಳಿದ ವರ್ಗದವರ ನೋವಿಗೆ ಸ್ಪಂದಿಸಿ ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದ‌ ಡಿ. ದೇವರಾಜ ಅರಸುರವರು ಸಾಮಾಜಿಕ ನ್ಯಾಯದ ಹರಿಕಾರರು ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ತಿಳಿಸಿದರು.

ಮಂಡ್ಯ ನಗರದ ಡಾ.ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ. ದೇವರಾಜ ಅರಸು ಅವರು ತಮ್ಮ ಆಡಳಿತ ಅವಧಿಯಲ್ಲಿ ಮಲ ಹೊರುವ‌ ಪದ್ಧತಿ‌ ನಿಷೇಧ, ಜೀತ ಪದ್ಧತಿ‌ ನಿಷೇಧ, ಭೂ ಸುಧಾರಣೆ ಕಾಯ್ದೆ ಮುಂತಾದ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತಂದರು. ಅವರು ನಡೆದ ದಾರಿ ಎಲ್ಲರಿಗೂ ಮಾದರಿ ಎಂದರು.

ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರವಾದುದು, ಅವರು ಮಾಡಿರುವ ಸಾಧನೆಯಲ್ಲಿ ನಾವು ಶೇ.10 ರಷ್ಟು ನೀಡಿದರೆ, ಸಮಾಜದಲ್ಲಿ ದೊಡ್ಡ ಪರಿವರ್ತನೆಯನ್ನೇ ತರಬಹುದು ಎಂದರು.

ವಿ. ಆಂಜನಪ್ಪ ರವರಿಗೆ ಜಿಲ್ಲಾ ಡಿ.ದೇವರಾಜ ಅರಸು ಪ್ರಶಸ್ತಿ
ಕರ್ನಾಟಕ ಸರ್ಕಾರವು ಪ್ರತಿಷ್ಠಾಪಿಸಿರುವ ಡಿ ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿ.ಆಂಜನಪ್ಪ ರವರು ಆಯ್ಕೆಯಾಗಿದ್ದು, ಅವರಿಗೆ ಅರಸು ಸಚಿವರು ಪ್ರಶಸ್ತಿ ನೀಡಿ ಗೌರವಿಸಿದರು.

ಮಹಾಯೋಗಿ ಅರಸು

ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ ಇಡೀ ಜೀವ ಸಂಕುಲ ಪ್ರೀತಿ, ಪ್ರೇಮ, ಸಮಾನತೆಯಿಂದ ಕೂಡಿರಬೇಕು ಎಂಬ ಮೂಲ ಉದ್ದೇಶದಿಂದ ಅನೇಕ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದವರು ಡಿ.ದೇವರಾಜ ಅರಸು ಅವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯ ದೊರಕಬೇಕು ಎಂಬ ಚಿಂತನೆ ಇದ್ದಂತಹ ಅರಸು ಅವರು ಕೊನೆ ಪೈರಿಗೆ ನೀರುಣಿಸಿದ ಕಾಯಕದ ಮಹಾಯೋಗಿ ಎಂದು ಕವಿ, ಪ್ರಗತಿಪರ ಚಿಂತಕ ನಾಗತಿಹಳ್ಳಿ ರಮೇಶ್ ತಿಳಿಸಿದರು.

ದೇವರಾಜ ಅರಸರು ತಳ ಸಮುದಾಯದವರು ಈ ನಾಡಿನ ಕಣ್ಣುಗಳು ಎಂದು ಭಾವಿಸಿ ಎಲ್ಲರ ಬದುಕು ಹಸಿರಾಗಲು ನಿರಂತರವಾಗಿ ದುಡಿದವರು. ಅವರ ಈ ಸುಧೀರ್ಘ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.

ಪ್ರಸ್ತುತ ರಾಜಕಾರಣದಲ್ಲಿ ಡಿ.ದೇವರಾಜ ಅರಸು ರವರ ಜೀವನದಿಂದ ಕಲಿಯುವುದು ಬಹಳ ಇದೆ. ಡಿ.ದೇವರಾಜ ಅರಸು ರವರನ್ನು ಕರುನಾಡಿನ ಮಹಾತ್ಮಪುಲೆ ಎಂದರೆ ತಪ್ಪಾಗಲಾರದು. ಉಳುವವನೇ ಭೂಮಿಯ ಒಡೆಯ ಎಂಬಂತಹ ಅನೇಕ ಜನಪರ ಯೋಜನೆಗಳನ್ನು ಅಂದಿನ ಕಾಲದಲ್ಲಿಯೇ ಜಾರಿಗೆ ತಂದವರು ಎಂದು ಬಣ್ಣಿಸಿದರು.

ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು ಅವರು ಮಾತನಾಡಿ ಡಿ. ದೇವರಾಜ ಅರಸುರವರು ರಾಜ್ಯ ಕಂಡ ಅಪರೂಪದ ರಾಜಕೀಯ ವ್ಯಕ್ತಿ. ನೇರ ನುಡಿ, ದಿಟ್ಟ ನಿಲುವು ಉತ್ತಮ ನಿರ್ಧಾರಗಳ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರದ ಸುಧಾರಣೆಗೆ ನಾಂದಿ ಹಾಡಿದ ಸಾಮಾಜಿಕ ನ್ಯಾಯದ ಹರಿಕಾರ. ದೂರ ದೃಷ್ಟಿ ಇಟ್ಟುಕೊಂಡಿದ್ದ ಸಮಾಜ ಸುಧಾರಕರು ಎಂದರು.

ಎರಡು ಬಾರಿ ಮುಖ್ಯ ಮಂತ್ರಿಯಾಗಿ ಆಳ್ವಿಕೆ ನಡೆಸಿದ ಅರಸುರವರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ, ಕರುನಾಡಿನ ಜನ ಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಶಾಂತ ಎಲ್. ಹುಲ್ಮನಿ, ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಿ.ರಂಗೇಗೌಡ, ಮುಡಾ ಅಧ್ಯಕ್ಷರಾದ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ರಾಜಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಸಂದೇಶ್, ಸುರೇಶ್, ಅಮ್ಜದ್ ಪಾಷ್, ದೊಡ್ಡಯ್ಯ, ರಾಜು, ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!